ಕರ್ನಾಟಕ

ವೇದಿಕೆಯಲ್ಲೇ ಪರಸ್ಪರ ಬೈದಾಡಿದ ಕಾಗೋಡು ತಿಮ್ಮಪ್ಪ,ಬೇಳೂರು

Pinterest LinkedIn Tumblr

kagodu

ಶಿವಮೊಗ್ಗ: ಈಡಿಗ ಸಮುದಾಯದ ಸಹಕಾರಿ ಸಂಸ್ಥೆಯೊಂದರ ಕಟ್ಟಡ ಉದ್ಘಾಟನೆ ವೇಳೆ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹಾಗೂ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಇವರಿಬ್ಬರ ನಡುವೆ ಮಾತಿನ ಜಟಾಪಟಿ ನಡೆದು, ಬಳಿಕ ಕಾಗೋಡು ತಿಮ್ಮಪ್ಪ ತಾವಾಡಿದ ಮಾತಿಗೆ ವೇದಿಕೆಯಲ್ಲಿ ಬಹಿರಂಗವಾಗಿ ಕ್ಷಮೆ ಕೇಳಿದ ಘಟನೆ ನಡೆಯಿತು.

ಭಾನುವಾರ ನಗರದ ಸಾಗರ ರಸ್ತೆಯಲ್ಲಿ ಗಾಡಿಕೊಪ್ಪದ ಬ್ರಹ್ಮಶ್ರೀ ನಾರಾಯಣಗುರು ಪತ್ತಿನ ಸಹಕಾರ ಸಂಘದ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ನಾರಾಯಣ ಗುರು ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಈ ಘಟನೆ ನಡೆಯಿತು.

ಬೆಳಗ್ಗೆ 11ಕ್ಕೆ ಕಾಗೋಡು ತಿಮ್ಮಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಬೇಕಿತ್ತು. ಕಾರ್ಯಕ್ರಮಕ್ಕೆ ಆಹ್ವಾನಿತರಾಗಿದ್ದ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಮತ್ತಿತರರು 11 ಗಂಟೆಗೆ ಆಗಮಿಸಿ ಕಾಯುತ್ತಿದ್ದರು. ಕಾಗೋಡು ತಿಮ್ಮಪ್ಪ 12.30ರ ಸುಮಾರಿಗೆ ಆಗಮಿಸಿದರು. ಈ ಸಂದರ್ಭದಲ್ಲಿ ಆಯೋಜಕರು ಕಾಗೋಡು ತಿಮ್ಮಪ್ಪ ಅವರನ್ನು ನೇರವಾಗಿ ಕಟ್ಟಡ ಉದ್ಘಾಟನೆಗೆ ಕರೆದೊಯ್ದರು. ಆದರೆ ವೇದಿಕೆ ಗೋಪಾಲಕೃಷ್ಣ ಮತ್ತಿತರರನ್ನು ಕರೆಯಲಿಲ್ಲ.

ಅತ್ತ ಕಾಗೋಡು ತಿಮ್ಮಪ್ಪ ಭವನ ಉದ್ಘಾಟಿಸುತ್ತಿದ್ದಂತೆ ಅತ್ತ ಕಡೆಗೆ ಧಾವಿಸಿದ ಬೇಳೂರು, ಒಂದೂವರೆ ಗಂಟೆಯಿಂದ ಕಾಯುತ್ತಾ ಕುಳಿತ್ತಿದ್ದರೂ ಭವನ ಉದ್ಘಾಟನೆಗೆ ಕರೆಯದೆ ಹೋದದ್ದಕ್ಕೆ ಆಯೋಜಕರನ್ನು ತರಾಟೆಗೆ ತೆಗೆದುಕೊಂಡರು. ಇದರಿಂದ ಕೋಪಗೊಂಡ ಕಾಗೋಡು ತಿಮ್ಮಪ್ಪ ಬೇಳೂರರನ್ನು ಉದ್ದೇಶಿಸಿ ನಿನ್ನನ್ನು ಕಾಯಲು ಹೇಳಿದವರು ಯಾರು ಎಂದು ಪ್ರಶ್ನಿಸಿದರು. ಆಗ ಬೇಳೂರುರರ ಸಿಟ್ಟು ಕಾಗೋಡು ಕಡೆಗೆ ತಿರುಗಿತು. ಆಗ ಕಾಗೋಡು ತಿಮ್ಮಪ್ಪ ನಿನ್ನ ಕಾಲು ಹಿಡಿದು ಕ್ಷಮೆ ಕೋರಬೇಕೇನು ಎಂದು ಹೇಳುತ್ತಲೇ ಬೇಳೂರರ ಕಾಲಿನ ಕಡೆಗೆ ಬಗ್ಗಿದರು. ತಕ್ಷಣವೇ ಬೇಳೂರರು ಕಾಗೋಡು ತಿಮ್ಮಪ್ಪನವರ ಕೈಹಿಡಿದುಕೊಂಡರು. ತಾವೊಬ್ಬ ಮಾಜಿ ಶಾಸಕನಾಗಿ, ಇಲ್ಲೇ ಕುಳಿತ್ತಿದ್ದರೂ ತಮ್ಮನ್ನು ಕರೆಯದೆ ಇದ್ದುದಕ್ಕೆ ಪ್ರಶ್ನಿಸಿದೆ ಅಷ್ಟೇ ಎನ್ನುತ್ತಾ ಸುಮ್ಮನಾದರು.ನಂತರ ವೇದಿಕೆ ಕಾರ್ಯಕ್ರಮದಲ್ಲಿ ಕೆಲವರು ಘಟನೆ ಪ್ರಸ್ತಾಪಿಸಿ ಗೋಪಾಲಕೃಷ್ಣ ಅವರನ್ನು ಬೆಂಬಲಿಸಿ ಮಾತನಾಡಿದರು.

ಗೋಪಾಲಕೃಷ್ಣ ಕೂಡ ಘಟನೆಯನ್ನು ಪ್ರಸ್ತಾಪಿಸಿದರು. ಇದರಿಂದ ಮತ್ತೆ ಸಿಟ್ಟುಗೊಂಡ ಕಾಗೋಡು ತಿಮ್ಮಪ್ಪ ಬೇಳೂರರ ವಿರುದ್ಧ ಅವಾಚ್ಯ ಶಬ್ದ ಬಳಸಿದರು. ಇದರಿಂದ ಮತ್ತೆ ಸಿಟ್ಟಿಗೆದ್ದ ಬೇಳೂರು ತಮಗೆ ಅವಮಾನ ಮಾಡಿದಿರಿ ಎಂದು ಜಗಳ ತೆಗೆದು ಕಾಗೋಡು ತಿಮ್ಮಪ್ಪರ ಮೇಲೇರಿ ಹೋದರು. ಅಲ್ಲೇ ಇದ್ದ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್‌ ಮತ್ತಿತರರು ಬೇಳೂರು ಗೋಪಾಲಕೃಷ್ಣರನ್ನು ಸಮಾಧಾನಪಡಿಸಿದರು. ಬಳಿಕ ಇಬ್ಬರನ್ನೂ ಸಮಾಧಾನಿಸಿ ವೇದಿಕೆಗೆ ಕರೆ ತಂದರು.

ಅವರಿಗೆ ಇಬ್ಬರೂ ಮುಖವನ್ನು ಗಂಟಿಕ್ಕಿ ಗೊಂಡೇ ಇದ್ದರು. ಭಾಷಣ ಪ್ರಾರಂಭಿಸಿದ ಕಾಗೋಡು ತಿಮ್ಮಪ್ಪ ಅವರು ತಾವಾಡಿದ ಮಾತಿಗೆ ಬಹಿರಂಗವಾಗಿ ಕ್ಷಮೆ ಕೋರಿದರು. ಏನೋ ಸಂದರ್ಭ ಮಾತು ಬಂದಿತು. ಇದಕ್ಕಾಗಿ ಕ್ಷಮೆ ಕೋರುತ್ತೇನೆ ಎಂದರು. ನಂತರ ಇನ್ನೊಂದು ಕಾರ್ಯಕ್ರಮಕ್ಕೆ ಹೋಗಬೇಕಾಗಿದೆ ಎಂದು ಕಾರ್ಯಕ್ರಮದ ಮಧ್ಯದಲ್ಲಿ ಹೊರಟ ಕಾಗೋಡು ತಿಮ್ಮಪ್ಪನವರು, ನಾನು ಹೋಗುತ್ತಿದ್ದೇನೆ, ಮುಂದಿನ ಕಾರ್ಯಕ್ರಮ ನೀನೇ ಮುಂದುವರಿಸಪ್ಪ ಎಂದು ಬೇಳೂರು ಗೋಪಾಲಕೃಷ್ಣರಿಗೆ ಹೇಳಿ ಹೊರಟರು.
-ಉದಯವಾಣಿ

Write A Comment