ಕರ್ನಾಟಕ

ಭೈರಪ್ಪ ಎಂಬ ಆನೆ ನಡೆದದ್ದೇ ದಾರಿ

Pinterest LinkedIn Tumblr

bairappaಬೆಂಗಳೂರು: ‘ಜ್ಞಾನಪೀಠ ಪ್ರಶಸ್ತಿಯನ್ನು ಕುವೆಂಪು, ಮಾಸ್ತಿ, ಗೋಕಾಕ್ ಅವರಂಥ ಮಹಾನ್ ಸಾಹಿತಿಗಳು ಪಡೆದಿದ್ದಾರೆ. ಕೆಲ ಸಣ್ಣ ಸಾಹಿತಿಗಳಿಗೂ ಪ್ರಶಸ್ತಿ ಲಭಿಸಿದೆ. ಡಿವಿಜಿ, ಪುತಿನ ಸೇರಿ ಅನೇಕ ಮಹಾನ್ ಸಾಹಿತಿಗಳಿಗೆ ಪ್ರಶಸ್ತಿ ಲಭಿಸಿಲ್ಲ. ಭೈರಪ್ಪನವರಿಗೂ ಜ್ಞಾನಪೀಠ ಪ್ರಶಸ್ತಿ ಲಭಿಸಿಲ್ಲ. ಈ ವಿಚಾರ ಇಷ್ಟೇ..’ ಡಾ. ಎಸ್.ಎಲ್. ಭೈರಪ್ಪನವರ ಕಾದಂಬರಿಗಳ ಆಧಾರಿತ ಅಷ್ಟಾವಧಾನ ಕಾರ್ಯಕ್ರಮದಲ್ಲಿ ಶತಾವಧಾನಿ ಡಾ. ಆರ್. ಗಣೇಶ್ ಅವರು ಪೃಚ್ಛಕರೊಬ್ಬರ ಪ್ರಶ್ನೆಗೆ ಉತ್ತರಿಸಿದ ಪರಿ ಇದು.

ಭೈರಪ್ಪ ಕಾದಂಬರಿ ಪ್ರಿಯರ ಕೂಟದ ವತಿಯಿಂದ ಜಯನಗರದ ಎನ್​ಎಂಕೆಆರ್​ವಿ ಕಾಲೇಜಿನ ಮಂಗಳ ಮಂಟಪ ಸಭಾಂಗಣದಲ್ಲಿ ಆಯೋಜಿಸಿದ್ದ ಅಷ್ಟಾವಧಾನ ಕಾರ್ಯಕ್ರಮ ಭೈರಪ್ಪ ಹಾಗೂ ಗಣೇಶ್ ಅವರ ಅಭಿಮಾನಿಗಳಿಂದ ಕಿಕ್ಕಿರಿದು ತುಂಬಿತ್ತು.

ಭಾರತೀಯ ಕಾದಂಬರಿ ಪ್ರಪಂಚದಲ್ಲೇ ಇದೇ ಮೊದಲ ಬಾರಿಗೆ ಲೇಖಕರೊಬ್ಬರ ಕಾದಂಬರಿಗಳ ಕುರಿತು ನಡೆದ ಮೊದಲ ಅಷ್ಟಾವಧಾನ ಇದು. ಅತ್ಯಂತ ಪ್ರಾಚೀನವಾಗಿರುವ ಅವಧಾನ ಕಲೆ ಪ್ರದರ್ಶಿಸಲು ಅಗತ್ಯವಾದಷ್ಟು ವ್ಯಾಪ್ತಿ ಭೈರಪ್ಪನವರ ಕಾದಂಬರಿ ಗಳಿಗಿರುವುದರ ಜತೆಗೆ, ಆ ಕಾದಂಬರಿಗಳನ್ನು ಅರಗಿಸಿಕೊಂಡು ಅಷ್ಟಾವಧಾನ ನಡೆಸುವ ಶತಾವಧಾನಿ ಗಣೇಶ್ ಅವರ ಸಾಮರ್ಥ್ಯವನ್ನೂ ಕಾರ್ಯಕ್ರಮ ಮತ್ತೊಮ್ಮೆ ಸಾಬೀತುಪಡಿಸಿತು. ಭೈರಪ್ಪನವರೊಂದಿಗೆ ಶತಾಯುಷಿ ನಿಘಂಟು ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯ, ಹಿರಿಯ ಸಾಹಿತಿ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ಇಡೀ ಕಾರ್ಯಕ್ರಮ ಕಣ್ತುಂಬಿಕೊಂಡರು.

ಭೈರಪ್ಪನವರ ಕಾದಂಬರಿಗಳಲ್ಲಿ ಆಗಮಿಸುವ ಭಾಗಗಳ ವಾಚನ, ಪಾತ್ರಗಳು ಹಾಡುವ ರಾಗಗಳ ಪರಿಚಯ, ಕಾದಂಬರಿಗಳ ಸನ್ನಿವೇಶದ ಚಿತ್ರರಚನೆ, ಕಾದಂಬರಿಗಳಲ್ಲಿ ವ್ಯಕ್ತವಾಗುವ ಸಂಖ್ಯೆಗಳಿಗನುಗುಣವಾದ ಸಂಖ್ಯಾಬಂಧ ವಿಷಯಗಳಲ್ಲಿ ಎಂಟು ಪೃಚ್ಛಕರ ಸವಾಲುಗಳನ್ನು ಎಂದಿನಂತೆಯೇ ಗಣೇಶ್ ಸ್ವೀಕರಿಸಿದರು. ಕಾದಂಬರಿಗಳು ಹಾಗೂ ಭೈರಪ್ಪನವರ ಕುರಿತ ಅನ್ಯ ವಿಚಾರಗಳಲ್ಲಿ ಆಗಿಂದಾಗ್ಗೆ ಕಾಲೆಳೆಯುತ್ತ ಅಪ್ರಸ್ತುತ ಪ್ರಸಂಗವನ್ನು ಪ್ರಸ್ತುತಪಡಿಸಲಾಯಿತು.

ಭೈರಪ್ಪನವರ ‘ಗತಜನ್ಮ ಮತ್ತು 2 ಕಥೆಗಳು’, ಲೇಖಕ ಪೃಥ್ವಿಜಿತ್ ಅವರ ‘ಎಲ್ಲೆದಾಟಿ-ಕುವೆಂಪು ಭೈರಪ್ಪ ಸೇರುವ ಹಾಗೂ ಮೀರುವ ಸ್ಥಾನ’ ಹಾಗೂ ‘ಉತ್ತಿಷ್ಠ’ ಕೃತಿಗಳು ಲೋಕಾರ್ಪಣೆಗೊಂಡವು.

ಭಾಗವಹಿಸಿದ್ದ ಪೃಚ್ಛಕರು

ಅಷ್ಟಾವಧಾನಿ ಗಣೇಶಭಟ್ಟ ಕೊಪ್ಪತೋಟ (ನಿಷೇಧಾಕ್ಷರ), ಅರ್ಜುನ್ ಭಾರದ್ವಾಜ್(ಸಮಸ್ಯಾಪೂರಣ), ಕೆ.ಬಿ.ಎಸ್. ರಾಮಚಂದ್ರ(ಪಾತ್ರಕ್ಕೆ ಪದ್ಯ), ರಾಘವೇಂದ್ರ ಹೆಗಡೆ (ಚಿತ್ರಪ್ರಶ್ನೆ), ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ (ಕಾದಂಬರಿ ವಾಚನ), ಕಶ್ಯಪ್ ನಾಯಕ್(ರಾಗಾಲಾಪ-ಸಂದರ್ಭ ನಿರೂಪ), ಸೋಮಶೇಖರ ಶರ್ಮ(ಅಪ್ರಸ್ತುತ ಪ್ರಸಂಗ), ರಂಗನಾಥ ಪ್ರಸಾದ್(ಸಂಖ್ಯಾಬಂಧ).

ಭೈರಪ್ಪನವರ ಕುರಿತು ಗಣೇಶ್

ಭೈರಪ್ಪನವರನ್ನು ಕಂಡಾಗಲೆಲ್ಲ ಆನೆ ನಡೆದದ್ದೇ ದಾರಿ ಎಂಬ ಮಾತು ನೆನಪಾಗುತ್ತದೆ.
ಪೂರ್ವಜರು ತಮ್ಮ ಅನುಭವಗಳ ಆಧಾರದಲ್ಲಿ ಬರೆದದ್ದೇ ಉಪನಿಷತ್ತು. ಈಗ ನಮ್ಮ ನಡುವೆ ಇರುವ ಅನುಭವಿಗಳೇ ಭೈರಪ್ಪ.
ಕೃತಿಯಂತೆಯೇ ಬದುಕಿದ ಲೇಖಕನನ್ನು ಸಾಹಿತ್ಯದ ಹೊರತಾಗಿಯೂ ಗೌರವಿಸುತ್ತೇವೆ. ಅಂಥವರ ಸಾಲಿನಲ್ಲಿ ಭೈರಪ್ಪ ಇದ್ದಾರೆ.
ಕಥೆಯಲ್ಲಿ ಆಗಮಿಸುವ ಸನ್ನಿವೇಶಗಳಲ್ಲಿ ಸ್ಥಳೀಯ ವಾತಾವರಣ ಹಾಗೂ ಭಾಷೆಗಳನ್ನೇ ಬಳಸುವ ಮೂಲಕ ಭೈರಪ್ಪ ನಮ್ಮನ್ನು ವಿಭಿನ್ನ ಲೋಕಕ್ಕೆ ಕರೆದೊಯ್ಯುತ್ತಾರೆ.
ಆಭರಣಗಳು ದೇಹಕ್ಕೆ ಒತ್ತಿಕೊಂಡು ಉಂಟಾಗುವ ಗುರುತಿನ ರಚನೆ ಕಾಳಿದಾಸನನ್ನು ಬಿಟ್ಟರೆ ಭೈರಪ್ಪನವರ ಕೃತಿಯಲ್ಲಿದೆ. ಇಬ್ಬರು ಮಹಾನ್ ವ್ಯಕ್ತಿಗಳಲ್ಲಿರಬಹುದಾದ ಸಣ್ಣ ಸಾಮ್ಯತೆಗೆ ಇದು ಉದಾಹರಣೆ.
ಭಿತ್ತಿ ಕಾದಂಬರಿ ಕುರಿತು ಶತಾವಧಾನಿ ಆಶುಕವಿತೆ

ಭೈರಪ್ಪನವರ ‘ಭಿತ್ತಿ’ ಕಾದಂಬರಿಗೆ ಅನುಗುಣವಾಗಿ ರಾಘವೇಂದ್ರ ಹೆಗಡೆಯವರು ರಚಿಸಿದ ಚಿತ್ರವನ್ನು ಕಂಡ ಶತಾವಧಾನಿ ಗಣೇಶ್ ಅವರು ಆ ಕುರಿತು ಆಶುಕವಿತೆ ರಚಿಸಿದರು.

‘ದಿನದರ್ಶಕೆಯ ಹಾಳೆ ಪಟಪಟನೆ ಹಾರುವುದು

ಮನದ ಭಾವನೆಗಳೆಲ್ಲ ಸುಳಿದುಳಿಯುವುವು

ಅನುದಿನದ ಚಿತ್ತಾರ ಮಾರ್ಪಡುತ್ತಿರಬಹುದು

ಮನೆಯ ಭಿತ್ತಿಯು ಮಾತ್ರ ನಿಂತಿರುವುದು’

Write A Comment