ಕರ್ನಾಟಕ

ನಿಯಮ ಉಲ್ಲಂಘನೆ ಪ್ರಶ್ನಿಸಿದ ಸವಾರನಿಗೆ ಬೈದು ಕಳುಹಿಸಿದ ಸಿಬ್ಬಂದಿ: ಪೊಲೀಸರ ಬೈಕ್‌ನಲ್ಲೂ ಮೂರಂಕಿ ಫಲಕ

Pinterest LinkedIn Tumblr

traffic voilationಬೆಂಗಳೂರು: ನೋಂದಣಿ ಫಲಕದಲ್ಲಿ ಮೂರು ಅಂಕಿಗಳು ಮಾತ್ರ ಇದ್ದುದಕ್ಕೆ ಬೈಕ್‌ ಸವಾರನಿಗೆ ₹ 100 ದಂಡ ವಿಧಿಸಿದ ಹಲಸೂರು ಗೇಟ್ ಸಂಚಾರ ಪೊಲೀಸರು, ತಮ್ಮ ಬೈಕ್‌ನ ನೋಂದಣಿ ಸಂಖ್ಯೆ ಕೂಡ ಮೂರಂಕಿಯಿಂದ ಕೂಡಿರುವುದನ್ನು ಪ್ರಶ್ನಿಸಿದ್ದಕ್ಕೆ ಆ ಸವಾರನಿಗೆ ಬೈದು ಕಳುಹಿಸಿದ ಘಟನೆ ಇತ್ತೀಚೆಗೆ ಎಸ್‌ಜೆಪಿ ಜಂಕ್ಷನ್‌ನಲ್ಲಿ ನಡೆದಿದೆ.

ದಂಡ ಕಟ್ಟಿದ ಬೈಕ್‌ ಸವಾರ ನಿಶಾಂತ್ ಮಂಚಿಗಯ್ಯ ಅವರು ಪೊಲೀಸರ ಈ ನಡೆ ಬಗ್ಗೆ ಫೇಸ್‌ಬುಕ್‌ನ ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದು, ಅದನ್ನು 3,800 ಮಂದಿ ಶೇರ್ ಮಾಡಿದ್ದಾರೆ. ಅಲ್ಲದೆ, ಪೊಲೀಸರ ಕ್ರಮವನ್ನು ಖಂಡಿಸಿ 550 ಮಂದಿ ಪ್ರತಿಕ್ರಿಯೆ ನೀಡಿದ್ದಾರೆ.

ಘಟನೆ ಬಗ್ಗೆ ಮಾತನಾಡಿದ ನಿಶಾಂತ್, ‘ವಿಜಯನಗರ ನಿವಾಸಿಯಾದ ನಾನು, ಕೆಲಸದ ನಿಮಿತ್ತ ಡಿ.19ರ ಸಂಜೆ 4 ಗಂಟೆಗೆ ಬೈಕ್‌ನಲ್ಲಿ ಜೆ.ಸಿ.ರಸ್ತೆಗೆ ಹೋಗುತ್ತಿದ್ದೆ. ಎಸ್‌ಜೆಪಿ ಜಂಕ್ಷನ್‌ನಲ್ಲಿ ಬೈಕ್ ತಡೆದ ಹಲಸೂರು ಗೇಟ್ ಸಂಚಾರ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ ಹಾಗೂ ಎಸ್‌ಐ, ಚಾಲನಾ ಪರವಾನಗಿ (ಡಿಎಲ್) ಕೇಳಿದರು. ಡಿಎಲ್‌ ತೆಗೆಯಲು ಮುಂದಾದಾಗ ಹೆಡ್‌ ಕಾನ್‌ಸ್ಟೆಬಲ್‌, ಮೂರಂಕಿಯ ನೋಂದಣಿ ಸಂಖ್ಯೆ ಇರುವುದನ್ನು ಪ್ರಶ್ನೆ ಮಾಡಿದರು’ ಎಂದು ವಿವರಿಸಿದರು.

‘ಹೌದು, ನನ್ನ ಬೈಕ್‌ನ ನೋಂದಣಿ ಸಂಖ್ಯೆ ಕೆಎ 02 ಎಚ್‌ಪಿ 0171. ಅದರಲ್ಲಿ ಮೊದಲ ಸೊನ್ನೆಯನ್ನು ತೆಗೆದು 171 ಮಾತ್ರ ಹಾಕಿಕೊಂಡಿದ್ದೆ. ಆ ತಪ್ಪಿಗೆ ದಂಡದ ರಸೀದಿ ಪಡೆದು ಹೊರಟಾಗ, ಪೊಲೀಸರ ಪಕ್ಕದಲ್ಲಿ ಅವರದ್ದೇ ಬೈಕ್‌ ಕಣ್ಣಿಗೆ ಬಿದ್ದಿತು. ಅದರ ನೋಂದಣಿ ಸಂಖ್ಯೆ ಕೆಎ 03 ಜಿ 684. ಹೀಗಾಗಿ ತಮ್ಮ ಬೈಕ್‌ನ ನೋಂದಣಿ ಸಂಖ್ಯೆ ಕೂಡ ಮೂರಂಕಿಯಿಂದ ಕೂಡಿದೆ ಎಂದು ಪ್ರಶ್ನೆ ಮಾಡಿದೆ.

‘ಆಗ ಏಕಾಏಕಿ ಮೇಲೆರಗಿದ ಹೆಡ್‌ಕಾನ್‌ಸ್ಟೆಬಲ್, ಅದನ್ನೆಲ್ಲ ಪ್ರಶ್ನೆ ಮಾಡುವ ಅಧಿಕಾರ ನಿನಗಿಲ್ಲ. ಅಷ್ಟಕ್ಕೂ ಬೈಕ್‌ ನನ್ನದಲ್ಲ ಎಂದು ಗುಡುಗಿದರು. ಪೊಲೀಸ್ ಇಲಾಖೆಯದ್ದೇ ಅಲ್ಲವೇ ಎಂದು ಕೇಳಿದ್ದಕ್ಕೆ ಮತ್ತೆ ಗಲಾಟೆ ಪ್ರಾರಂಭಿಸಿದರು. ಆಗ ಎಸ್‌ಐ ನನ್ನನ್ನು ಸ್ಥಳದಿಂದ ಕಳುಹಿಸಿದರು.

‘ಆ ಹೆಡ್‌ ಕಾನ್‌ಸ್ಟೆಬಲ್‌ನ ಅಂಗಿಯ ಮೇಲೆ ಬ್ಯಾಡ್ಜ್‌ ಸಹ ಇರಲಿಲ್ಲ. ವರ್ಷಕ್ಕೆ ಇಷ್ಟು ದಂಡ ವಸೂಲಿ ಮಾಡಬೇಕೆಂದು ಗುರಿ ಹೊಂದಿರುವ ಸಂಚಾರ ಪೊಲೀಸರು, ಆ ಗುರಿ ಮುಟ್ಟಲು ಇಂಥ ಮಾರ್ಗ ಅನುಸರಿಸುವುದು ಸರಿಯಲ್ಲ. ಈ ಘಟನೆ ನಡೆದು 15 ದಿನಗಳಾದರೂ ಹಿರಿಯ ಅಧಿಕಾರಿಗಳು ಕ್ರಮ ತೆಗೆದುಕೊಳ್ಳದೆ ಕುಳಿತಿರುವುದು ಸೋಜಿಗದ ಸಂಗತಿ’ ಎಂದು ನಿಶಾಂತ್ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಸವಾರನ ಪ್ರಶ್ನೆ ಸರಿಯಾಗಿದೆ
‘ನೋಂದಣಿ ಸಂಖ್ಯೆಗಳು ನಾಲ್ಕು ಅಂಕಿಗಳಿಂದಲೇ ಕೂಡಿರಬೇಕು. ಆದರೆ, ಮೊದಲ ಅಂಕಿ ಸೊನ್ನೆಯಿಂದ ಆರಂಭವಾದರೆ ಸವಾರರು ಆ ಸಂಖ್ಯೆಯನ್ನು ಬಿಟ್ಟು ಉಳಿದ ಮೂರನ್ನು ಮಾತ್ರ ಹಾಕಿಕೊಳ್ಳುವುದು ಸಾಮಾನ್ಯ. ಹೀಗಾಗಿ ಇದನ್ನು ನಿಯಮ ಉಲ್ಲಂಘನೆ ಎಂದು ಪರಿಗಣಿಸುತ್ತಿಲ್ಲ. ನೋಂದಣಿ ಸಂಖ್ಯೆಯಲ್ಲಿನ ಗೊಂದಲ ನಿವಾರಣೆಗಾಗಿ ಪೊಲೀಸರು ತಪಾಸಣೆ ನಡೆಸಿರಬಹುದು. ಅದೇ ರೀತಿ ಬೈಕ್ ಸವಾರ ಪೊಲೀಸರನ್ನು ಪ್ರಶ್ನಿಸಿರುವುದೂ ಸರಿಯಾಗಿಯೇ ಇದೆ’ ಎಂಬುದಾಗಿ ಸಾರಿಗೆ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

Write A Comment