ಮನೋರಂಜನೆ

ಪುಟ್ಟಣ್ಣ… ಅವರಲ್ಲ ಇವರು!

Pinterest LinkedIn Tumblr

crec01puttanna2

‘ನಾನೂ ಪುಟ್ಟಣ್ಣ ಕಣಗಾಲ್ ಅಭಿಮಾನಿ. ಆದರೆ ಅವರ ಜೀವನಕ್ಕೂ ಈ ಚಿತ್ರಕ್ಕೂ ಏನೇನೂ ಸಂಬಂಧವಿಲ್ಲ’ ಎಂಬ ಸ್ಪಷ್ಟನೆಯೊಂದಿಗೆ ಮಾತು ಆರಂಭಿಸಿದರು ನಿರ್ದೇಶಕ ಶ್ರೀನಿವಾಸ ರಾಜು. ಸಿನಿಮಾದ ಹೆಸರು ‘ಕಥೆ ಚಿತ್ರಕಥೆ ನಿರ್ದೇಶನ ಪುಟ್ಟಣ್ಣ’ ಎಂದೇ ಇರುವುದರಿಂದ ಯಾವುದೇ ಬಗೆಯ ವಿವಾದ ಉಂಟಾಗಬಾರದು ಎಂಬ ಹಿನ್ನೆಲೆಯಲ್ಲಿ ಅವರ ಈ ಸ್ಪಷ್ಟನೆ. ಸಿನಿಮಾದ ಶೀರ್ಷಿಕೆ ಬರೀ ಶೀರ್ಷಿಕೆಯಷ್ಟೇ ಎಂಬ ಪ್ರತಿಕ್ರಿಯೆ ಅವರದು!

ಮೂಲತಃ ಇದು ತೆಲುಗು ಸಿನಿಮಾದ ರಿಮೇಕ್. ಕನ್ನಡದ ನೆಲಕ್ಕೆ ಒಗ್ಗಿಕೊಳ್ಳುವಂತೆ ಬದಲಾಯಿಸಿಕೊಳ್ಳಲಾಗಿದೆ ಎಂಬ ಸಮಜಾಯಿಷಿ ನಿರ್ದೇಶಕರದು. ‘ಪುಟ್ಟಣ್ಣ ಶೀರ್ಷಿಕೆ ಅಂತಿಮಗೊಳಿಸಿದಾಗ ಸಾಕಷ್ಟು ಜನ ಇದು ವಿವಾದ ಉಂಟು ಮಾಡಬಹುದು ಎಂದು ಊಹಿಸಿದ್ದರು. ಆದರೆ ಪುಟ್ಟಣ್ಣ ಕಣಗಾಲ್ ಕುಟುಂಬದವರು ಯಾವೊಂದು ತರಹದ ಅಡ್ಡಿ ಮಾಡಲಿಲ್ಲ’ ಎಂದು ಶ್ರೀನಿವಾಸ ರಾಜು ಸಂತಸ ಹಂಚಿಕೊಂಡರು. ಕೋಮಲ್ ಅವರಿಂದ ಪ್ರೇಕ್ಷಕ ಏನನ್ನು ಬಯಸುತ್ತಾನೋ, ಆ ಪ್ಯಾಕೇಜ್ ಇದರಲ್ಲಿದೆ ಎಂಬ ಭರವಸೆಯನ್ನು ಸಹ ಅವರು ನೀಡಿದರು.

ಸೆನ್ಸಾರ್‌ ಮಂಡಳಿಯು ಯಾವುದೇ ಕತ್ತರಿ ಪ್ರಯೋಗ ಇಲ್ಲದೇ ಯು/ಎ ಪ್ರಮಾಣಪತ್ರ ನೀಡಿದೆ ಎಂದ ನಿರ್ಮಾಪಕ ನಾರಾಯಣ ಬಾಬು, ‘ಇದೊಂದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನ್‌ ಸಿನಿಮಾ’ ಎಂದರು. ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕರೆ ಇಂಥ ಕಥೆಯ ಇನ್ನಷ್ಟು ಸಿನಿಮಾ ನಿರ್ಮಾಣ ಮಾಡುವುದಾಗಿ ಅವರು ಹೇಳಿಕೊಂಡರು.

ಕಾಮಿಡಿ ಪಾತ್ರಗಳಲ್ಲಿ ಜನರ ಮನ ಗೆದ್ದಿರುವ ಕೋಮಲ್‌ ಜತೆ ಕಾಣಿಸಿಕೊಳ್ಳುವುದು ನಾಯಕಿ ಪ್ರಿಯಾಮಣಿ ಅವರಿಗೆ ಖುಷಿ ಕೊಟ್ಟಿದೆ. ಶೀರ್ಷಿಕೆ ಬಗ್ಗೆ ಪ್ರಸ್ತಾಪಿಸಿದ ಅವರು, ‘ಸಿನಿಮಾ ಜಗತ್ತಿಗೆ ಪುಟ್ಟಣ್ಣ ಕಣಗಾಲ್ ಬಹು ದೊಡ್ಡ ಸ್ಫೂರ್ತಿ. ಅವರ ಹೆಸರಿನ ಈ ಸಿನಿಮಾವನ್ನು ನೋಡುತ್ತ ಹೋದಂತೆ ಶೀರ್ಷಿಕೆ ಯಾಕೆ ಹೀಗಿದೆ ಎಂಬುದು ಅರ್ಥವಾಗುತ್ತದೆ’ ಎಂದರು.

ನಿರ್ದೇಶಕನಾಗುವ ಕನಸು ಹೊತ್ತು ಚಿತ್ರರಂಗಕ್ಕೆ ಬರುವ ಪುಟ್ಟಣ್ಣ ಎಂಬಾತನ ಪಾತ್ರದಲ್ಲಿ ಕೋಮಲ್‌ ಕಾಣಿಸಿಕೊಂಡಿದ್ದಾರೆ. ‘ಇದೊಂದು ರಿಮೇಕ್ ಸಿನಿಮಾ ಆದರೂ ಕನ್ನಡದ ಸೊಗಡು ತುಂಬಿಕೊಂಡಿದೆ. ಕಾಮಿಡಿಯನ್ನು ಬಯಸಿ ಬರುವವರಿಗೆ ಇದು ಒಳ್ಳೇ ಪ್ಯಾಕೇಜ್’ ಎಂಬ ಭರವಸೆಯನ್ನು ಕೋಮಲ್ ನೀಡಿದರು.

ಸಂಭಾಷಣೆ ಬರೆದಿರುವ ಗುರುರಾಜ ದೇಸಾಯಿ, ಕಲಾವಿದರಾದ ಪ್ರಶಾಂತ ಸಿದ್ದಿ, ಕುರಿ ಪ್ರತಾಪ್ ಇತರರು ಮಾತನಾಡಿದರು. ಹೊಸ ವರ್ಷದ ಮೊದಲ ದಿನದಂದು ರಾಜ್ಯದಾದ್ಯಂತ ತೆರೆ ಕಾಣಲಿರುವ ಚಿತ್ರಕ್ಕೆ ಅರ್ಜುನ್‌ ಜನ್ಯ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ.

Write A Comment