ಮನೋರಂಜನೆ

ಹೊಸ ಡಿಸೈನಿನ ‘ನಾಗರಹಾವು’

Pinterest LinkedIn Tumblr

NAAGARAHAVUಪುಟ್ಟಣ್ಣರ ‘ನಾಗರಹಾವು’ ಜನಮನ ಸೂರೆಗೊಂಡಿತು. ಉಪೇಂದ್ರರ ‘ನಾಗರಹಾವು’ ಹೆಚ್ಚು ಸದ್ದಿಲ್ಲದೆ ಬಿಲ ಸೇರಿಕೊಂಡಿತು. ಈಗ ವಿಷ್ಣುವರ್ಧನ್‌ ಅವರ ಪ್ರಭಾವಳಿಯೊಂದಿಗೆ ಕೋಡಿ ರಾಮಕೃಷ್ಣರ ನಾಗರಹಾವಿನ ಸರದಿ.

ಜನಪ್ರಿಯ ಕಾದಂಬರಿಕಾರ ತ.ರಾ.ಸು. ಅವರ ಮೂರು ಕಾದಂಬರಿಗಳನ್ನು ಆಧರಿಸಿದ ‘ನಾಗರಹಾವು’ ಪುಟ್ಟಣ್ಣ ಕಣಗಾಲ್‌ ನಿರ್ದೇಶನದ ಅತ್ಯುತ್ತಮ ಚಿತ್ರಗಳಲ್ಲೊಂದು. ಈ ಹೆಸರಿನಲ್ಲಿಯೇ ಉಪೇಂದ್ರ ಅಭಿನಯದಲ್ಲಿ ‘ನಾಗರಹಾವು’ ಎನ್ನುವ ಮತ್ತೊಂದು ಸಿನಿಮಾ ತೆರೆಕಂಡಿತ್ತು.

ಈಗ ಮತ್ತೊಂದು ‘ನಾಗರಹಾವು’ ತೆರೆಕಾಣಲು ಸಿದ್ಧವಾಗಿದೆ. ತೆಲುಗಿನ ಖ್ಯಾತ ನಿರ್ದೇಶಕ ಕೋಡಿ ರಾಮಕೃಷ್ಣ ಕನ್ನಡದಲ್ಲಿ ನಿರ್ದೇಶಿಸಿರುವ ಚಿತ್ರ ಇದು. ‘ಇದು ವಿಷ್ಣುವರ್ಧನ್ ಅವರ 201ನೇ ಚಿತ್ರ’ ಎಂದು ಚಿತ್ರತಂಡ ಬಣ್ಣಿಸುತ್ತಿದೆ. ಅದು ಹೇಗೆ? ಎನ್ನುವ ಪ್ರಶ್ನೆಗೆ ‘ವಿಷ್ಣವರ್ಧನ್ ಈ ಚಿತ್ರದಲ್ಲಿ ಗ್ರಾಫಿಕ್ಸ್‌ ಮೂಲಕ ಕಾಣಿಸಿಕೊಳ್ಳಲಿದ್ದಾರೆ’ ಎನ್ನುವ ಸುಳಿವನ್ನು ಚಿತ್ರತಂಡ ಬಿಟ್ಟುಕೊಡುತ್ತದೆ. ಅಂದಹಾಗೆ, ದಿಗಂತ್ ಮತ್ತು ರಮ್ಯಾ ಈ ಹೊಸ ಹಾವಿನ ಆಟದಲ್ಲಿ ಜೋಡಿಗಳು.

ಮೂರು ವರ್ಷಗಳ ಹಿಂದೆ ಈ ಚಿತ್ರ ಆರಂಭಿಸಿದಾಗ ‘ನಾಗಕನ್ಯೆ’ ಎನ್ನುವ ಶೀರ್ಷಿಕೆ ಇತ್ತು. ಸಿನಿಮಾ ಮುಗಿಯುವ ಹಂತಕ್ಕೆ ಬಂದಾಗ ಶೀರ್ಷಿಕೆ ‘ನಾಗರಹಾವು’ ಎಂದು ಬದಲಾಗಿದೆ. ಚಿತ್ರದ ಒಂದು ಪಾತ್ರದಲ್ಲಿ ವಿಷ್ಣುವರ್ಧನ್‌ ಅವರು ನಟಿಸಬೇಕು ಎನ್ನುವ ಆಸೆ ನಿರ್ದೇಶಕ ಕೋಡಿ ರಾಮಕೃಷ್ಣ ಅವರಿಗೆ ಇತ್ತಂತೆ.

ಅವರಿಲ್ಲದೆ ಹೇಗೆ ಮಾಡುವುದು ಎಂಬ ಯೋಚನೆಯಲ್ಲಿದ್ದಾಗ ‘ಬಾಹುಬಲಿ’ ಚಿತ್ರಕ್ಕೆ ಗ್ರಾಫಿಕ್ಸ್ ಕೆಲಸ ಮಾಡಿರುವ ತಂತ್ರಜ್ಞರನ್ನು ಬಳಸಿಕೊಳ್ಳುವ ಐಡಿಯಾ ಹೊಳೆದಿದೆ. ತಂತ್ರಜ್ಞಾನದ ಜಾದೂ ಮೂಡಲ ವಿಷ್ಣುವರ್ಧನ್‌ ಅವರನ್ನು ನಿರ್ದೇಶಕರು ತೆರೆಯ ಮೇಲೆ ತಂದಿದ್ದಾರಂತೆ. ಸಾಧುಕೋಕಿಲ, ರಾಹುಲ್‌ದೇವ್ ಮತ್ತಿತರರು ಚಿತ್ರದ ತಾರಾಗಣದಲ್ಲಿದ್ದಾರೆ. ಕಥೆಯಲ್ಲಿ ಗ್ರಾಫಿಕ್ಸ್ ಕೆಲಸ ಹೆಚ್ಚು ಇರುವ ಕಾರಣ ಚಿತ್ರದ ಬಿಡುಗಡೆ ತಡವಾಗಿದೆಯಂತೆ.

ಗ್ರಾಫಿಕ್ಸ್‌ನಲ್ಲಿ ವಿಷ್ಣುವರ್ಧನ್ ಯಾವ ರೀತಿ ಕಾಣುತ್ತಾರೆ? ಅದು ಯಾವ ಬಗೆಯ ಪಾತ್ರ? ಎನ್ನುವ ಪ್ರಶ್ನೆಗಳಿಗೆ ಹೆಚ್ಚು ಮಾಹಿತಿ ನೀಡದ ನಿರ್ದೇಶಕರು– ‘ಸಿನಿಮಾ ನೋಡಿ ಗೊತ್ತಾಗುತ್ತದೆ’ ಎನ್ನುತ್ತಾರೆ. ವಿಷ್ಣುವರ್ಧನ್ ಪುಣ್ಯತಿಥಿ ದಿನವಾದ ಡಿಸೆಂಬರ್ 30ರಂದು ವಿಷ್ಣು ಅವರ ಚಿತ್ರವಿರುವ ಬೃಹತ್‌ ಪೋಸ್ಟರ್‌ ಒಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಇದು ಭಾರತದಲ್ಲೇ ಅತ್ಯಂತ ದೊಡ್ಡ ಸಿನಿಮಾ ಪೋಸ್ಟರ್‌ ಅಂತೆ.

ದಿಗಂತ್, ರಮ್ಯಾ ಹಾಗೂ ನಿರ್ಮಾಪಕರಾದ ಸೋಹಿಲ್‌ ಅನ್ಸಾರಿ ಮತ್ತು ದಾವಲ್‌ ಜಯಂತ್‌ ಲಾಲ್‌ಗಡ ಸುದ್ದಿಗೋಷ್ಠಿಯಲ್ಲಿ ಗೈರುಹಾಜರಿದ್ದರು. ನಾಯಕ–ನಾಯಕಿ ಗೈರು ಹಾಜರಿ ಬಗ್ಗೆ ನಿರ್ದೇಶಕರು ಸ್ಪಷ್ಟ ಕಾರಣ ನೀಡಲಿಲ್ಲ. ‘ನಾಗರಹಾವು’ ಬಹುಭಾಷಾ ಚಿತ್ರವಾಗಿದ್ದು ಮೊದಲು ಕನ್ನಡದಲ್ಲಿ ತೆರೆಗೆ ಬರಲಿದೆಯಂತೆ. ಆನಂತರ ಬೇರೆ ಭಾಷೆಯಲ್ಲಿ ತೆರೆಗೆ ಬರುತ್ತದೆಯಂತೆ. ಕಾರ್ಯಕಾರಿ ನಿರ್ಮಾಪಕ ಸಲಾವುದ್ದೀನ್‌ ಯೂಸೂಫ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Write A Comment