ಮನೋರಂಜನೆ

ಚಿಣ್ಣರ ಬದುಕಿನ ಹಳಿಗಳ ಜಾಡು ಅರಸಿ…

Pinterest LinkedIn Tumblr

railway_0‘ನ್ಯೂಯಾರ್ಕ್‌ ಫಿಲಂ ಅಕಾಡೆಮಿ’ಯಲ್ಲಿ ಸಿನಿಮಾದ ವ್ಯಾಕರಣ ಕಲಿತಿರುವ ಪೃಥ್ವಿ ‘ರೈಲ್ವೆ ಚಿಲ್ಡ್ರನ್‌’ ಎನ್ನುವ ಸಿನಿಮಾ ರೂಪಿಸುತ್ತಿದ್ದಾರೆ. ‘ಕ್ರೌಡ್‌ ಫಂಡಿಂಗ್‌’ ಮೂಲಕ ತಯಾರಾಗುವ ಈ ಸಿನಿಮಾ ರೈಲು ಹಳಿಗಳ ಜೊತೆಗೆ ಬೆಸೆದುಕೊಂಡ ಮಕ್ಕಳ ಲೋಕದ ಕಥೆ ಹೇಳಲಿದೆ.

ರೈಲು ನಿಲ್ದಾಣದೊಳಗೆ ಕಾಲಿರಿಸಿದರೆ ಮಾಸಿದ ಹರಕಲು ಉಡುಪು ಧರಿಸಿದ, ಭವಿಷ್ಯದ ಕನಸುಗಳಿಲ್ಲದ, ಯಾವ–ಯಾರ ಉಸಾಬರಿಯೂ ಇಲ್ಲದೆ ತಮ್ಮದೇ ಲೋಕದಲ್ಲಿ ಮುಳುಗಿರುವ ಏಳೆಂಟು ಮಕ್ಕಳಾದರೂ ಕಣ್ಣಿಗೆ ಬೀಳುತ್ತಾರೆ. ಅವರಲ್ಲಿ ಭಿಕ್ಷೆ ಬೇಡುವವರಿದ್ದಾರೆ, ಯಾವ ಯಾವುದೋ ವಸ್ತುಗಳನ್ನು ಮಾರುವವರಿದ್ದಾರೆ, ಹಳಿಗಳ ನಡುವೆ ಬಿದ್ದ ಚಿಂದಿ ವಸ್ತುಗಳನ್ನು ಆಯುವವರಿದ್ದಾರೆ, ಬದುಕು ಎಂದರೇನು ಎಂಬುದನ್ನು ತಿಳಿಯದೆಯೇ ಪಾತಕಲೋಕದ ತೆಕ್ಕೆಗೆ ಜಾರುವವರೂ ಇದ್ದಾರೆ. ರೈಲು ನಿಲ್ದಾಣವೇ ಅವರ ಪಾಲಿನ ವಿಶ್ವ. ಇವರನ್ನು ಜಗತ್ತು ಕರೆಯುವುದು ‘ರೈಲ್ವೆ ಮಕ್ಕಳು’ ಎಂದೇ.

ಇಂತಹ ರೈಲ್ವೆ ಮಕ್ಕಳ ಬದುಕನ್ನು ಸಿನಿಮಾ ಚೌಕಟ್ಟಿನಲ್ಲಿ ಕಟ್ಟಿಕೊಡುವ ಸಾಹಸಕ್ಕೆ ಮುಂದಾಗಿದ್ದಾರೆ ನಿರ್ದೇಶಕ ಪೃಥ್ವಿ ಕೋಣನೂರು. ‘ಅಲೆಗಳು’ ಎಂಬ ಮಕ್ಕಳ ಚಿತ್ರ ನಿರ್ದೇಶಿಸಿದ್ದ ಪೃಥ್ವಿ , ಮೂಲತಃ ಸಾಫ್ಟ್‌ವೇರ್‌ ಎಂಜಿನಿಯರ್‌. ‘ಅಲೆಗಳು’ ವಿವಿಧ ಮಕ್ಕಳ ಸಿನಿಮೋತ್ಸವಗಳಲ್ಲಿ ಪ್ರದರ್ಶಿತವಾಗಿತ್ತು. ಪೃಥ್ವಿ ‘ನ್ಯೂಯಾರ್ಕ್‌ ಫಿಲಂ ಅಕಾಡೆಮಿ’ಯಲ್ಲಿ ಸಿನಿಮಾದ ತಾಂತ್ರಿಕ ಕುಶಲತೆಗಳನ್ನು ಕಲಿತವರು. ಅವರ ಚಿತ್ರಕಥೆಯೊಂದು ಹಾಲಿವುಡ್‌ ಸಿನಿಮಾವಾಗುವ ಹಂತಕ್ಕೆ ತಲುಪಿತ್ತು. ಆದರೆ ಕಾರಣಾಂತರಗಳಿಂದ ಅದು ನಿಂತುಹೋಯಿತು. ಶ್ರೀಲಂಕಾದಲ್ಲಿ ನಡೆಯುತ್ತಿದ್ದ ನಾಗರಿಕ ಯುದ್ಧದ ಕುರಿತು ತಮಿಳು ಮತ್ತು ಸಿಂಹಳಿ ಭಾಷೆಯಲ್ಲಿ ಅವರು ಕಿರುಚಿತ್ರ ತಯಾರಿಸಿದ್ದರು.

‘ಹೊರನೋಟಕ್ಕೆ ಚಿಕ್ಕದಾಗಿ ಕಂಡರೂ ರೈಲ್ವೆ ಮಕ್ಕಳ ಸಮಸ್ಯೆಯ ವ್ಯಾಪ್ತಿ ಬಹುದೊಡ್ಡದು. ತಂದೆ ತಾಯಿಗಳಿಂದ ತಪ್ಪಿಸಿಕೊಂಡವರು, ಯಾವ ಕಾರಣಕ್ಕೋ ಮನೆಯಿಂದ ಓಡಿಬಂದವರು, ಅನಾಥರು– ಹೀಗೆ ಭಾರತವೊಂದರಲ್ಲಿಯೇ ಪ್ರತಿ ವರ್ಷ 1.25 ಲಕ್ಷ ಮಕ್ಕಳು ‘ರೈಲ್ವೆ ಮಕ್ಕಳು’ ಆಗುತ್ತಿದ್ದಾರೆ. ಪ್ಲಾಟ್‌ಫಾರಂ, ಹಳಿಗಳಲ್ಲಿ ಅಡ್ಡಾಡುವ ಇವರು, ಹಳೆ ಬಾಟಲಿಗಳಲ್ಲಿ ನೀರು ತುಂಬಿಸಿ ಮಾರಾಟ ಮಾಡುತ್ತಾರೆ. ಕಾರ್ಮಿಕರಾಗಿ ದುಡಿಯುತ್ತಾರೆ, ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಕಳ್ಳತನ, ಮಾದಕ ವಸ್ತು ಸೇವನೆಯಂತಹ ಅಪರಾಧಗಳಿಗೂ ತೆರೆದುಕೊಳ್ಳುತ್ತಾರೆ. ಈ ಮಕ್ಕಳ ಬದುಕನ್ನು ‘ರೈಲ್ವೆ ಚಿಲ್ಡ್ರನ್‌’ ಚಿತ್ರ ತೆರೆದಿಡಲಿದೆ’ ಎನ್ನುತ್ತಾರೆ ಪೃಥ್ವಿ.

ರೈಲ್ವೆ ಮಕ್ಕಳನ್ನು ರಕ್ಷಿಸಿ ಅವರಿಗೆ ಪುನರ್ವಸತಿ ಕಲ್ಪಿಸುತ್ತಿರುವ ‘ಸಾಥಿ’ ಮುಂತಾದ ಸಂಸ್ಥೆಗಳಿಂದ ಅವರು ಮಾಹಿತಿ ಕಲೆಹಾಕಿದ್ದಾರೆ. ನೈಜಘಟನೆಗಳನ್ನು ಸಿನಿಮಾ ರೂಪಕ್ಕೆ ಚಿತ್ರಕಥೆಗೆ ಹೊಂದಿಸಿದ್ದಾರೆ. ಈ ಜಗತ್ತಿನ ಅಪರಾಧದ ವಿವರಗಳನ್ನೂ ಸಿನಿಮಾ ಒಳಗೊಳ್ಳುತ್ತದೆ. ‘ಇದು ಮಕ್ಕಳ ಸಿನಿಮಾವಲ್ಲ. ವ್ಯಾಪಾರಿ ಸಿನಿಮಾದ ಮಾದರಿಯಲ್ಲಿಯೇ ಇರುವ, ಆದರೆ ವಸ್ತುವಿನ ಸಂಕೀರ್ಣತೆಯನ್ನು ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸುವ ಸಿನಿಮಾ’ ಎಂದು ಅವರು ಸ್ಪಷ್ಟನೆ ನೀಡುತ್ತಾರೆ.

ಕರ್ನಾಟಕ, ಕೇರಳ, ತಮಿಳುನಾಡುಗಳಲ್ಲಿ ರೈಲ್ವೆ ಮಕ್ಕಳ ಸಂಖ್ಯೆ ಕಡಿಮೆ. ಉತ್ತರ ಭಾರತದಲ್ಲಿ, ಅದರಲ್ಲಿಯೂ ದೆಹಲಿಯ ರೈಲು ನಿಲ್ದಾಣಗಳಲ್ಲಿ ಅಪಾರ ಸಂಖ್ಯೆಯಲ್ಲಿದ್ದಾರೆ ಎಂದು ಪೃಥ್ವಿ ಹೇಳುತ್ತಾರೆ. ಚಿತ್ರದ ಪ್ರಮುಖ ಕಲಾವಿದರ ಆಯ್ಕೆ ನಡೆದಿದ್ದು, ಜನವರಿ ಮೊದಲ ವಾರದಲ್ಲಿ ಚಿತ್ರೀಕರಣ ಪ್ರಾರಂಭಿಸಲು ಚಿತ್ರತಂಡ ಸಿದ್ಧತೆ ನಡೆಸಿದೆ. ಆದರೆ ಅದಕ್ಕೆ ಎದುರಾಗಿರುವುದು ಬಂಡವಾಳದ ಸಮಸ್ಯೆ. ವಿವಿಧ ಮೂಲಗಳಿಂದ ಬಂಡವಾಳ ಸಂಗ್ರಹಣೆಗೆ ಚಿತ್ರತಂಡ ಪ್ರಯತ್ನಿಸುತ್ತಿದೆ. ‘ಕ್ರೌಡ್‌ ಫಂಡಿಂಗ್‌’ ಮೂಲಕ ಜನರಿಂದಲೇ ಬಂಡವಾಳ ಸಂಗ್ರಹಿಸುವ ಉದ್ದೇಶ ಚಿತ್ರತಂಡದ್ದು.

‘ಇಂತಹ ಸಿನಿಮಾಗಳಿಗೆ ಹಣ ಸಹಾಯ ಮಾಡುವ ಸಂಸ್ಥೆಗಳಿವೆ. ಆದರೆ ಅವುಗಳಿಗೆ ಕನಿಷ್ಠ ಅರ್ಧ ಗಂಟೆಯಷ್ಟಾದರೂ ಸಿನಿಮಾ ಚಿತ್ರೀಕರಣ ಮಾಡಿ ತೋರಿಸಬೇಕು. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಯತ್ನಿಸಿದರೂ ಕ್ರೌಡ್‌ ಫಂಡಿಂಗ್‌ನತ್ತ ಅವರನ್ನು ಸೆಳೆಯುವುದು ಸುಲಭವಲ್ಲ. ‘ಲೂಸಿಯಾ’ದಂತಹ ಚಿತ್ರಕ್ಕೆ ಬಂಡವಾಳ ಸೆಳೆಯುವಾಗ ನಿರ್ದೇಶಕ ಪವನ್‌ ಕುಮಾರ್ ಆಗಲೇ ಹೆಸರು ಮಾಡಿದ್ದರು. ಆದರೆ ನಮ್ಮದು ಹೊಸಬರ ತಂಡ’ ಎನ್ನುತ್ತಾರೆ ಚಿತ್ರದ ಕಾರ್ಯಕಾರಿ ನಿರ್ಮಾಪಕ ವಿಜೇಂದ್ರ ರಾವ್‌.

ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ವಿಜೇಂದ್ರ ರಾವ್‌, ಮಂಗಳೂರಿನಲ್ಲಿ ತಮ್ಮದೇ ವೆಬ್‌ ಸಂಸ್ಥೆ ನಡೆಸುತ್ತಿದ್ದಾರೆ. ‘ಸಾಮಾಜಿಕ ಕಳಕಳಿಯೊಂದಿಗೆ ಒಳ್ಳೆಯ ಪ್ರಯತ್ನಕ್ಕೆ ಮುಂದಾಗಿದ್ದೇವೆ. ತಾಂತ್ರಿಕ ಗುಣಮಟ್ಟದಲ್ಲಿ ರಾಜಿಯಾಗದ ಪರಿಣಾಮಕಾರಿ ಚಿತ್ರ ನೀಡುವ ಬಯಕೆ ನಮ್ಮದು’ ಎಂದು ಅವರು ವಿವರಿಸುತ್ತಾರೆ. ಸಿನಿಮಾಕ್ಕೆ ಬಂಡವಾಳ ಹೂಡುವ ಆಸಕ್ತಿ ಇದ್ದವರು ವಿಜೇಂದ್ರ ರಾವ್ ಅವರನ್ನು ಫೋನ್: (9972341361) ಸಂಪರ್ಕಿಸಬಹುದು.

Write A Comment