ಕರ್ನಾಟಕ

ಬಲೂನ್ ಮಾರಾಟದ ನೆಪದಲ್ಲಿ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತಿದ್ದ 7 ಮಂದಿಯ ಬಂಧನ

Pinterest LinkedIn Tumblr

police

ಬೆಂಗಳೂರು: ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕನ್ನ ಹಾಕುತ್ತಿದ್ದ, 7 ಅಂತರರಾಜ್ಯ ಮನೆಗಳ್ಳರನ್ನು ಬಂಧಿಸಿರುವ ವೈಟ್‌ಫೀಲ್ಡ್ ಠಾಣೆ ಪೊಲೀಸರು, ₹ 35 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಜಪ್ತಿ ಮಾಡಿದ್ದಾರೆ.

ಮಧ್ಯಪ್ರದೇಶದ ರಣಬೀರ್ ಸಿಂಗ್ ಅಲಿಯಾಸ್ ಕಾಲಿಯಾ (32), ರಾಮ್ ಬಾಬು (27), ಧರ್ಮ (25), ಮುರುಗೇಶ (50), ಉತ್ತರಪ್ರದೇಶದ ಧೀರಜ್ ಅಲಿಯಾಸ್ ರಾಜು ಅಲಿಯಾಸ್ ದಾದಾ (32) ಹಾಗೂ ದೇವೇಂದ್ರ ಸೋನಿಯನ್ನು (38) ಬಂಧಿಸಲಾಗಿದೆ.

ಬಂಧಿತರು ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡಿರುವ ಪಾರ್ಥಿ ಗುಂಪಿಗೆ ಸೇರಿದವರಾಗಿದ್ದು, ಪ್ರಮುಖ ಆರೋಪಿಗಳಾದ ಕಪೂರ್‌ ಸಿಂಗ್ ಮತ್ತು ರಘುವೀರ್ ತಲೆಮರೆಸಿಕೊಂಡಿದ್ದಾರೆ. ‘ಆರೋಪಿಗಳು ನಗರದ ಮೇಲ್ಸೇತುವೆಗಳು, ದೇವಸ್ಥಾನ, ಬಸ್ ನಿಲ್ದಾಣ ಹಾಗೂ ಕೆಲ ಖಾಲಿ ಜಾಗಗಳಲ್ಲಿ ಟೆಂಟ್‌ ಹಾಕಿಕೊಂಡು ವಾಸಿಸುತ್ತಿದ್ದರು. ಹಗಲು ಹೊತ್ತು ಬೀದಿಗಳಲ್ಲಿ ಬಲೂನ್ ಮಾರಾಟ ಮಾಡುತ್ತಾ, ಈ ವೇಳೆ ಬೀಗ ಹಾಕಿರುವ ಮನೆಗಳನ್ನು ಗುರುತಿಸುತ್ತಿದ್ದರು’ ಎಂದು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಪಿ. ಹರಿಶೇಖರನ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ನಂತರ ಮನೆಯಲ್ಲಿ ಯಾರೂ ಇಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳುತ್ತಿದ್ದ ಇವರು, ರಾತ್ರಿ ಮನೆಯ ಕಿಟಕಿ ಅಥವಾ ಬಾಗಿಲು ಮುರಿದು ನಗದು ಮತ್ತು ಚಿನ್ನಾಭರಣಗಳನ್ನು ದೋಚುತ್ತಿದ್ದರು. ಬಂಧಿತರಿಂದ 1248 ಗ್ರಾಂ ಚಿನ್ನಾಭರಣ ಹಾಗೂ 2685 ಗ್ರಾಂ ಬೆಳ್ಳಿ ಆಭರಣಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಅವರು ಹೇಳಿದರು.

‘ಆರೋಪಿಗಳು ಕದ್ದ ಮಾಲನ್ನು ತಿಂಗಳು ಅಥವಾ ಎರಡು ತಿಂಗಳಿಗೊಮ್ಮೆ ಮಧ್ಯಪ್ರದೇಶಕ್ಕೆ ತೆರಳಿ ಮಾರಾಟ ಮಾಡಿ ಹಣ ಪಡೆಯುತ್ತಿದ್ದರು’ ಎಂದು ಮಾಹಿತಿ ನೀಡಿದರು. ‘ಇವರ ಬಂಧನದಿಂದಾಗಿ ವೈಟ್‌ಫೀಲ್ಡ್‌ ಠಾಣೆಯಲ್ಲಿ ದಾಖಲಾಗಿದ್ದ 7, ವಿಮಾನ ನಿಲ್ದಾಣ ಠಾಣೆ 3, ಎಚ್‌ಎಎಲ್‌ 2, ಕಾಡುಗೋಡಿ ಠಾಣೆಯ 1 ಪ್ರಕರಣ ಸೇರಿದಂತೆ ಒಟ್ಟು 13 ಪ್ರಕರಣಗಳು
ಪತ್ತೆಯಾಗಿವೆ’ ಎಂದು ಅವರು ವಿವರಿಸಿದರು.

ಮಹಿಳೆಯರೂ ಭಾಗಿ: ‘ಗುಂಪಿನೊಂದಿಗೆ ವಾಸವಿದ್ದ ಮಹಿಳೆಯರೂ ಕೂಡ ಬೀದಿಗಳಲ್ಲಿ ಬಲೂನ್ ಮಾರಾಟ ಮಾಡುತ್ತಿದ್ದರು. ಈ ವೇಳೆ ಬೀಗ ಹಾಕಿದ ಮನೆಗಳನ್ನು ಗುರುತಿಸುತ್ತಿದ್ದ ಅವರು, ಟೆಂಟ್‌ಗೆ ಬಂದು ಮನೆಗಳ ಕುರಿತು ಮಾಹಿತಿ ನೀಡುತ್ತಿದ್ದರು. ಬಳಿಕ ಆರೋಪಿಗಳು ರಾತ್ರಿ ಪ್ರತ್ಯೇಕ ಗುಂಪು ಗುಂಪಾಗಿ ತೆರಳಿ ಕೃತ್ಯ ಎಸಗುತ್ತಿದ್ದರು’ ಎಂದು ಪೋಲಿಸರು ತಿಳಿಸಿದರು.

Write A Comment