ಕರ್ನಾಟಕ

ಹುತಾತ್ಮ ನಿರಂಜನ್ ಬಾಳಲ್ಲಿ ಕ್ರೂರ ವಿಧಿಯಾಟ

Pinterest LinkedIn Tumblr

Front-32

ಬೆಂಗಳೂರು: ದೇಶದ ಯಾವ ಮೂಲೆಯಲ್ಲೇ ಸ್ಪೋಟಕ ವಸ್ತು ಪತ್ತೆಯಾದರೂ ಅಲ್ಲಿಗೆ ನಿಯೋಜಿತರಾಗಿ ಬಾಂಬ್ ನಿಷ್ಕ್ರಿಯ ಗೊಳಿಸುತ್ತಿದ್ದ ನಿಪುಣ ಲೆಫ್ಟಿನೆಂಟ್ ಕರ್ನಲ್ ನಿರಂಜನ್​ಕುಮಾರ್. ಆದರೆ ಕೊನೆಗೆ ಬಾಂಬ್ ಸ್ಪೋಟದಿಂದಲೇ ಅವರು ಸಾವು ಕಾಣುವಂತಾಗಿದ್ದು ವಿಧಿಯ ಕ್ರೂರ ಆಟ!

ನಿರಂಜನ್ 3 ವರ್ಷ ಬಾಲಕರಾಗಿದ್ದಾಗ ಅವರ ತಾಯಿ ಅನಾರೋಗ್ಯದಿಂದ ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಮಲತಾಯಿ ಆರೈಕೆಯಲ್ಲಿ ಬೆಳೆದಿದ್ದರು. ಈಗ ಬಾಂಬ್ ಸ್ಪೋಟದಲ್ಲಿ ನಿರಂಜನ್ ಸಾವು ಕಂಡಿದ್ದು, ಜಗತ್ತು ಅರಿಯದ 1 ವರ್ಷ 4 ತಿಂಗಳ ಮುದ್ದು ಕಂದಮ್ಮ ತಂದೆ ಪ್ರೀತಿಯಿಂದ ವಂಚಿತವಾಗಿದೆ.

ತಂದೆ ಶವದ ಪಕ್ಕ ಮಗಳ ಆಟ!

ಶವ ಪೆಟ್ಟಿಗೆ ಪಕ್ಕದಲ್ಲಿ ಕುಳಿತಿದ್ದ ಅಜ್ಜಿ ತೋಳಿನಲ್ಲಿದ್ದ ನಿರಂಜನ್ ಪುಟ್ಟ ಮಗಳು ವಿಸ್ಮಯ ನಗುತ್ತಾ ಆಟವಾಡುತ್ತಿದ್ದಳು. ತಂದೆ ಶವವಾಗಿ ಮಲಗಿದ್ದು, ಇನ್ನೆಂದೂ ಬರುವುದಿಲ್ಲ ಎಂದು ಅರಿಯದ ಆ ಪುಟ್ಟ ಕಂದ ಆಗೊಮ್ಮೆ ಈಗೊಮ್ಮೆ ಶವ ಪೆಟ್ಟಿಗೆಯತ್ತ ಬೆರಳು ತೋರಿಸಿ ಅಲ್ಲಿಗೆ ಹೋಗಬೇಕೆಂದು ಅಜ್ಜಿಗೆ ಹೇಳುತ್ತಿದ್ದ ದೃಶ್ಯ ಹೃದಯ ಕಲಕುವಂತಿತ್ತು.

ಸ್ಫೋಟ ತನಿಖೆಗೆ ನೆರವು

ರಾಷ್ಟ್ರೀಯ ಭದ್ರತಾ ಪಡೆ (ಎನ್​ಎಸ್​ಜಿ)ಯಲ್ಲಿ ಬಾಂಬ್ ಪತ್ತೆ ಹಾಗೂ ನಿಷ್ಕ್ರಿಯಗೊಳಿಸುವಿಕೆಯಲ್ಲಿ ನಿರಂಜನ್ ವಿಶೇಷ ತರಬೇತಿ ಪಡೆದಿದ್ದರು. ಅಮೆರಿಕಕ್ಕೂ ಹೋಗಿ ಅಲ್ಲಿನ ಉನ್ನತ ತಂತ್ರಜ್ಞಾನದಲ್ಲೂ ತರಬೇತಾಗಿದ್ದರು. 2014ರ ಡಿ.28ರ ರಾತ್ರಿ ಬೆಂಗಳೂರಿನ ಚರ್ಚ್​ಸಿ್ಟ್ರಟ್​ನಲ್ಲಿ ಚೆನ್ನೈ ಮಹಿಳೆಯನ್ನು ಬಲಿ ಪಡೆದ ಬಾಂಬ್ ಸ್ಪೋಟದ ಸ್ಥಳಕ್ಕೆ ಭೇಟಿ ಕೊಟ್ಟು ತಪಾಸಣೆ ನಡೆಸಿದ್ದರು. ಚರ್ಚ್​ಸಿ್ಟ್ರಟ್ ಸ್ಪೋಟದ ಸ್ಥಳದಲ್ಲಿ ದೊರೆತ ಅವಶೇಷಗಳ ಮೂಲಕ ಸುಧಾರಿತ ಬಾಂಬ್ ಸ್ಪೋಟಿಸಲಾಗಿದೆ. ಪಟನಾ, ಹೈದರಾಬಾದ್ ಸ್ಪೋಟಕ್ಕೂ ಇದೇ ಮಾದರಿ ಸ್ಪೋಟಕ ವಸ್ತುಗಳನ್ನು ಬಳಸಲಾಗಿತ್ತೆಂಬ ವಿಚಾರವನ್ನು ನಿರಂಜನ್ ಪತ್ತೆಹಚ್ಚಿ ತನಿಖೆಗೆ ನೆರವಾಗಿದ್ದರು.

ಸೇನೆ ವಿಷಯ ರ್ಚಚಿಸುತ್ತಿರಲಿಲ್ಲ

ದೆಹಲಿಯಲ್ಲಿ ಪತ್ನಿ ಮತ್ತು ಮಗು ಜತೆ ವಾಸವಿದ್ದ ನಿರಂಜನ್ ಪ್ರತಿನಿತ್ಯ ರಾತ್ರಿ ಕರೆ ಮಾಡಿ ತಂದೆ ಜತೆ ಮಾತಾಡುತ್ತಿದ್ದರು. 6 ತಿಂಗಳಿಗೆ ಒಮ್ಮೆ ಬೆಂಗಳೂರಿಗೆ ಬರುತ್ತಿದ್ದ ನಿರಂಜನ್ ಇದ್ದಷ್ಟು ದಿನ ಸಂತೋಷದಿಂದ ಇರುತ್ತಿದ್ದರು. ಸ್ನೇಹಿತರೆಲ್ಲರನ್ನು ತಪ್ಪದೆ ಭೇಟಿ ಮಾಡುತ್ತಿದ್ದರು. ವೃತ್ತಿನಿಷ್ಠರಾಗಿದ್ದ ನಿರಂಜನ್ ಮಿಲಿಟರಿಗೆ ಸಂಬಂಧಿಸಿದ ವಿಚಾರವಾಗಲಿ ಅಥವಾ ತನ್ನ ಕರ್ತವ್ಯದ ಬಗ್ಗೆಯಾಗಲಿ ಯಾವತ್ತೂ ಕುಟುಂಬ ಸದ್ಯಸರು ಅಥವಾ ಸ್ನೇಹಿತರ ಬಳಿ ಪ್ರಸ್ತಾಪಿಸುತ್ತಿರಲಿಲ್ಲ. 2015ರ ಜ.26 ಗಣರಾಜ್ಯೋತ್ಸವದಂದು ಮಾತ್ರ ದೆಹಲಿಗೆ ಎಲ್ಲರನ್ನೂ ಕರೆದೊಯ್ದು ಪಥ ಸಂಚಲನಕ್ಕೆ ತಾನು ನಿಲ್ಲುವ ಜಾಗ ತೋರಿಸಿದ್ದನ್ನು ನೆನಪು ಮಾಡಿಕೊಂಡ ಸಹೋದರ ಶಶಾಂಕ್ ಗದ್ಗದಿತರಾದರು.

ಸಿಂಪಲ್ ಪ್ರೊಫೈಲ್: ಫೇಸ್​ಬುಕ್​ನಲ್ಲಿ ಖಾತೆ ಹೊಂದಿದ್ದ ನಿರಂಜನ್ ಅಲ್ಲೂ ಸೇನೆ ಬಗ್ಗೆ ಗೌಪ್ಯತೆ ಕಾಪಾಡಿದ್ದರು. ಮಿಲಿಟರಿ ಲೆಫ್ಟಿನೆಂಟ್ ಕರ್ನಲ್ ಆಗಿದ್ದರೂ ತಾನೊಬ್ಬ ಸ್ವ ಉದ್ಯೋಗಿ ಎಂದೇ ನಮೂದಿಸಿಕೊಂಡಿದ್ದಾರೆ. ಕ್ರಿಕೆಟ್, ಫುಟ್​ಬಾಲ್, ಬಾಸ್ಕೆಟ್ ಬಾಲ್ ಆಟದ ಬಗ್ಗೆ ನಿರಂಜನ್​ಗೆ ಹೆಚ್ಚು ಆಸಕ್ತಿ ಇತ್ತು. ಸೇನೆಗೆ ಸೇರಿದ ನಂತರ ಕಿಕ್ ಬಾಕ್ಸಿಂಗ್​ನ ಮೇಲೆ ಒಲವು ಮೂಡಿ ಅದನ್ನು ಕಲಿತಿದ್ದ ಎಂದು ಸ್ನೇಹಿತ ಡಾ.ಅರುಣ್ ಹೇಳಿದರು.

ಕ್ರಿಕೆಟ್ ಆಡಿದ್ದ ಸ್ಥಳದಲ್ಲೇ ಶವವಾಗಿ ಮಲಗಿದ: ಸ್ನೇಹಿತರ ಜತೆಗೆ ಕ್ರಿಕೆಟ್ ಆಟವಾಡಿದ್ದ ಬಿಇಎಲ್ ಶಾಲಾ ಆಟದ ಮೈದಾನದಲ್ಲೇ ನಿರಂಜನ್ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಎನ್​ಸಿಸಿಗೆ ಸೇರಿದ್ದಾಗ ಪದೇಪದೇ ಮಿಲಿಟರಿಗೆ ಸೇರುವ ಬಯಕೆ ವ್ಯಕ್ತಪಡಿಸುತ್ತಿದ್ದ. ಕ್ರೀಡಾಸಕ್ತನಾಗಿದ್ದ ನಿರಂಜನ್ ಜತೆ ಇದೇ ಆಟದ ಮೈದಾನದಲ್ಲಿ ಕ್ರಿಕೆಟ್ ಆಟವಾಡುತ್ತಿದ್ದೆವು. ಆದರೆ, ಇವತ್ತು ಇದೇ ಜಾಗದಲ್ಲಿ ಶವವಾಗಿ ಮಲಗಿದ್ದು, ಅಂತಿಮ ನಮನ ಪಡೆಯುತ್ತಿದ್ದಾನೆ ಎಂದು ದುಃಖಿತರಾದರು.

ಬೆಂಗಳೂರು: ಪಠಾಣ್​ಕೋಟ್ ವಾಯುನೆಲೆಯಲ್ಲಿ ಉಗ್ರರ ಜತೆ ಸೆಣಸಿ ಹುತಾತ್ಮರಾದ ಲೆಫ್ಟಿನೆಂಟ್ ಕರ್ನಲ್ ನಿರಂಜನ್​ಕುಮಾರ್​ರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಜಾಲಹಳ್ಳಿ ಸಮೀಪದ ನ್ಯೂ ಬಿಇಎಲ್ ಶಾಲಾ ಆಟದ ಮೈದಾನದತ್ತ ಜನಸಾಗರವೇ ಹರಿದುಬಂದಿತ್ತು. ಸಿಎಂ ಸಿದ್ದರಾಮಯ್ಯ ಸೇರಿ ಹಲವು ನಾಯಕರು ಅಂತಿಮ ನಮನ ಸಲ್ಲಿಸಿದರು.

ವೀರ ಯೋಧನ ಅಕಾಲಿಕ ಮರಣದಿಂದ ಅವರ ಪಾಲಕರು, ಪತ್ನಿ, ಸೋದರರು, ಸ್ನೇಹಿತರು ಹಾಗೂ ಸಂಬಂಧಿಗಳ ರೋಧನ ಮುಗಿಲುಮುಟ್ಟಿತ್ತು. ಭಾನುವಾರ ತಡರಾತ್ರಿ 12.30ರ ವೇಳೆಗೆ ನಿರಂಜನ್ ಪಾರ್ಥಿವ ಶರೀರವನ್ನು ನಾಗಪುರದಿಂದ ವಿಶೇಷ ಹೆಲಿಕಾಪ್ಟರ್ ಮುಖಾಂತರ ನಗರದ ಯಲಹಂಕ ವಾಯುನೆಲೆಗೆ ತರಲಾಯಿತು. ಮೃತದೇಹವನ್ನು ವಶಕ್ಕೆ ಪಡೆದ ಎಂಇಜಿ ಸಿಬ್ಬಂದಿ ಕಮಾಂಡೋ ಆಸ್ಪತ್ರೆಯಲ್ಲಿ ಇಟ್ಟು ಸೋಮವಾರ ಬೆಳಗ್ಗೆ 6 ಗಂಟೆಗೆ ಕಮಾಂಡೋ ಆಸ್ಪತ್ರೆಯಿಂದ ನಿರಂಜನ್​ರ ಮೃತದೇಹವನ್ನು ದೊಡ್ಡಬೊಮ್ಮಸಂದ್ರದ ಅವರ ಮನೆಗೆ ತರಲಾಯಿತು. ನಂತರ 9ರ ವೇಳೆಗೆ ನ್ಯೂ ಬಿಇಎಲ್ ಶಾಲೆ ಆಟದ ಮೈದಾನಕ್ಕೆ ಪಾರ್ಥಿವ ಶರೀರವನ್ನು ತಂದು ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಯಿತು. ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1.15ರವರೆಗೆ ರಾಜಕೀಯ ಮುಖಂಡರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಂಬಂಧಿಕರು, ನಗರದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಜನರು ಅಂತಿಮ ನಮನ ಸಲ್ಲಿಸಿದರು. ಅಗಲಿದ ವೀರ ಯೋಧನ ಮೃತದೇಹ ಕಂಡು ಕಂಬನಿ ಮಿಡಿದರು.

ಮಧ್ಯಾಹ್ನ 1.20ರ ವೇಳೆಗೆ ಮೈದಾನ ದಿಂದ ಪಾರ್ಥಿವ ಶರೀರವನ್ನು ಮಿಲಿಟರಿ ವಾಹನದಲ್ಲಿ ಜಾಲಹಳ್ಳಿ ಸಮೀಪದ ವಾಯುನೆಲೆಗೆ ಕೊಂಡೊಯ್ಯಲಾಯಿತು. ಶವವನ್ನು ವಾಹನಕ್ಕೆ ಇಡುತ್ತಿದ್ದಂತೆ ನೆರೆದಿದ್ದ ಜನ ‘ನಿರಂಜನ್ ಅಮರ್ ರಹೇ ಅಮರ್ ರಹೇ…’ ಎಂದು ಘೊಷಣೆ ಕೂಗಿದರು. ಬಿಇಎಲ್ ಶಾಲೆ ಆಟದ ಮೈದಾನದಿಂದ ಏರ್​ಪೋರ್ಸ್​ವರೆಗೂ (ಅಂದಾಜು 5 ಕಿ.ಮೀ.) ರಸ್ತೆಯ ಎರಡೂ ಬದಿ ಜನ ಸಾಲುಗಟ್ಟಿ ನಿಂತಿದ್ದರು. ಪ್ರತಿಯೊಬ್ಬರು ‘ಸೆಲ್ಯೂಟ್’ ಮಾಡುವ ಮೂಲಕ ಗೌರವ ಸಲ್ಲಿಸಿದರು. ವಾಹನದ ಮೇಲೆ ಹೂಗಳನ್ನು ಚೆಲ್ಲಿ ಕೊನೇ ಬೀಳ್ಕೊಟ್ಟರು. 1.55ರ ವೇಳೆಗೆ ದೇಹವನ್ನು ವಾಯುನೆಲೆಗೆ ತೆಗೆದುಕೊಂಡು ಹೋಗಲಾಯಿತು. ಕೆಳಗಿಳಿಸಿದ ತರುವಾಯ ಮಿಲಿಟರಿ ಹಿರಿಯ ಅಧಿಕಾರಿಗಳು ಹೂಗುಚ್ಛ ಇಟ್ಟು ಅಂತಿಮ ನಮನ ಸಲ್ಲಿಸಿದರು. ಬಳಿಕ ಮಿಲಿಟರಿ ನಿಯಮದಂತೆ ನಿರಂಜನ್ ಪಾರ್ಥಿವ ಶರೀರಕ್ಕೆ ಸೇನಾ ಸಿಬ್ಬಂದಿ ಗೌರವ ವಂದನೆ ಸಲ್ಲಿಸಿದರು.

ಮಧ್ಯಾಹ್ನ 2.45ರ ವೇಳೆಗೆ ಮಿಲಿಟರಿ ಹೆಲಿಕಾಪ್ಟರ್​ನಲ್ಲಿ ಮೃತದೇಹವನ್ನು ಕೇರಳದ ಪಾಲಕ್ಕಾಡ್​ಗೆ ಕೊಂಡೊಯ್ಯಲಾಯಿತು. ತಂದೆ ಇ.ಕೆ.ಶಿವರಾಜನ್, ತಾಯಿ ರಾಧಾ, ಪತ್ನಿ ಡಾ.ರಾಧಿಕಾ, ಮಗಳು ವಿಸ್ಮಯ, ಅಕ್ಕ ಭಾಗ್ಯಲಕ್ಷ್ಮೀ, ಸಹೋದರ ಶಶಾಂಕ್ ಜತೆಗಿದ್ದರು. ಮತ್ತೊಂದು ಹೆಲಿಕಾಪ್ಟರ್​ನಲ್ಲಿ ಮಿಲಿಟರಿ ಅಧಿಕಾರಿಗಳು ಹಾಗೂ ಆಪ್ತ ಸಂಬಂಧಿಕರು ತೆರಳಿದರು.

ನಿರಂಜನ್ ಅಂತ್ಯಸಂಸ್ಕಾರ: ನಿರಂಜನ್ ಅಂತ್ಯ ಸಂಸ್ಕಾರ ಕೇರಳದ ಪಾಲಕ್ಕಡ್​ನಲ್ಲಿ ನೆರವೇರಿತು. ಕುಟುಂಬದವರು, ಬಂಧುಗಳು, ಸ್ನೇಹಿತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ಕಣ್ಣೀರಿನ ವಿದಾಯ ಹೇಳಿದರು.

ಶಾಲಾ ಕಾಲೇಜಿಗೆ ರಜೆ

ನಿರಂಜನ್​ರ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ, ಪಿಯು ವಿದ್ಯಾಭ್ಯಾಸ ನ್ಯೂ ಬಿಇಎಲ್ ಶಾಲಾ- ಕಾಲೇಜಿನಲ್ಲಿ ನಡೆದಿತ್ತು. ಹೀಗಾಗಿ ಉಗ್ರರ ವಿರುದ್ಧ ಸೆಣಸಿ ವೀರಮರಣ ಪಡೆದ ನಿರಂಜನ್ ಅವರಿಗೆ ಗೌರವ ಸೂಚಿಸುವ ಹಿನ್ನೆಲೆಯಲ್ಲಿ ಸೋಮವಾರ ಶಾಲಾ ಕಾಲೇಜಿಗೆ ರಜೆ ಘೊಷಿಸ ಲಾಗಿತ್ತು. ಎಲ್ಲ ವಿದ್ಯಾರ್ಥಿ ಗಳು, ಶಿಕ್ಷಕರು ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.

ನಿರಂಜನ್ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ

ಹುತಾತ್ಮ ಲೆಫ್ಟಿನೆಂಟ್ ಕರ್ನಲ್ ನಿರಂಜನ್​ಕುಮಾರ್ ಕುಟುಂಬಕ್ಕೆ ರಾಜ್ಯ ಸರ್ಕಾರ 30 ಲಕ್ಷ ರೂ. ಪರಿಹಾರ ಘೊಷಿಸಿದೆ. ಬಿಇಎಲ್ ಶಾಲಾ ಮೈದಾನದಲ್ಲಿ ನಿರಂಜನ್ ಪಾರ್ಥಿವ ಶರೀರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುಷ್ಪಗುಚ್ಛ ಅರ್ಪಿಸಿ ಗೌರವ ಸಲ್ಲಿಸಿದರು. ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಂಬೈನಲ್ಲಿ ಉಗ್ರರ ದಾಳಿಯಲ್ಲಿ ವೀರಮರಣ ಹೊಂದಿದ್ದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಕುಟುಂಬಕ್ಕೆ 30 ಲಕ್ಷ ರೂ. ನೀಡಿದ ಮಾದರಿಯಲ್ಲಿ ನಿರಂಜನ್ ಕುಟುಂಬಕ್ಕೂ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.

ಪ್ರಧಾನಿ ಮೋದಿ ಅವರು, ಸ್ನೇಹಹಸ್ತ ಚಾಚಿ ಪಾಕಿಸ್ತಾನಕ್ಕೆ ಹಠಾತ್ ಭೇಟಿ ಕೊಟ್ಟ ಏಳೇ ದಿನಕ್ಕೆ ದೇಶದೊಳಗೆ ನುಸುಳಿದ ಉಗ್ರರ ಸದೆ ಬಡೆಯಲು 7 ಮಂದಿ ಯೋಧರು ವೀರ ಮರಣವನ್ನಪ್ಪಬೇಕಾಯಿತು. ಇದು ಅತ್ಯಂತ ನೋವಿನ ಸಂಗತಿ. ಯೋಧರ ತ್ಯಾಗ-ಬಲಿದಾನಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ. ಉಗ್ರರ ಅಟ್ಟಹಾಸ ಮಟ್ಟಹಾಕಲು ನಾವೆಲ್ಲರೂ ಒಂದಾಗಬೇಕು. ಆಗ ಮಾತ್ರ ರಾಷ್ಟ್ರದ ಹಾಗೂ ವಿಶ್ವದ ಪ್ರಗತಿ ಸಾಧ್ಯ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಉಗ್ರರ ವಿರುದ್ಧದ ಹೋರಾಟದಲ್ಲಿ ಹುತಾತ್ಮ ರಾದ ನಿರಂಜನ್​ಕುಮಾರ್, ವಾಯುನೆಲೆ ರಕ್ಷಣೆ ಮತ್ತು ಸಾವಿರಾರು ಮಂದಿ ಪ್ರಾಣ ರಕ್ಷಣೆ ಮಾಡಿದ್ದಾರೆ. ಉಗ್ರರ ದಾಳಿಗೆ ಕುಮ್ಮಕ್ಕು ಕೊಟ್ಟಿರುವ ಪಾಕ್​ಗೆ ಕೇಂದ್ರ ಸರ್ಕಾರ ಎಚ್ಚರಿಕೆ ಕೊಟ್ಟಿದೆ.

| ಅನಂತಕುಮಾರ್, ಕೇಂದ್ರ ಸಚಿವ

ಪಾಕ್ ಜತೆ ಎಷ್ಟೇ ಶಾಂತಿ ಮಾತುಕತೆ ನಡೆಸಿದರೂ ಪ್ರಯೋಜನವಾಗಲ್ಲ. ನಾವೂ ನಮ್ಮ ದಾಟಿಯನ್ನು ಬದಲಾಯಿ ಸಿಕೊಳ್ಳುವ ಅನಿವಾರ್ಯತೆ ಇದೆ. ವೀರ ಯೋಧನ ಆತ್ಮಕ್ಕೆ ಶಾಂತಿ ಸಿಗಲಿ.

| ಸದಾನಂದಗೌಡ, ಕೇಂದ್ರ ಕಾನೂನು ಸಚಿವ

ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದು ಕೊಂಡ ನಿರಂಜನ್​ನನ್ನು ತುಂಬಾ ಪ್ರೀತಿಯಿಂದ ಬೆಳೆಸಿದ್ದೆ. ಗುರು- ಹಿರಿಯರು ಎಂದರೇ ತುಂಬಾ ಗೌರವ ಕೊಡುತ್ತಿದ್ದ. ಚಿಕ್ಕ ವಯಸ್ಸಿ ನಿಂದಲೇ ಪಣ ತೊಟ್ಟು ಬೇರೆ ಕೆಲಸದತ್ತ ಮುಖ ಮಾಡದೆ ಸೇನೆಗೆ ಸೇರಿದ್ದ.

| ನಳಿನಾ ಸೋದರತ್ತೆ

ಅಂತಿಮ ದರ್ಶನ ಪಡೆದ ಗಣ್ಯರು

ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ, ಕೇಂದ್ರ ಸಚಿವರಾದ ಅನಂತಕುಮಾರ್, ಸದಾನಂದ ಗೌಡ, ಸಚಿವ ಮಹದೇವಪ್ಪ, ಸಂಸದ ಪಿ.ಸಿ. ಮೋಹನ್, ಶಾಸಕರಾದ ಸುರೇಶ್​ಕುಮಾರ್, ಆರ್.ಅಶೋಕ, ನಿವೃತ್ತ ಪೊಲೀಸ್ ಅಧಿಕಾರಿ ಜ್ಯೋತಿಪ್ರಕಾಶ್ ಮಿರ್ಜಿ ಮತ್ತಿತರರು.

ಚಿಕ್ಕಂದಿನಿಂದಲೂ ಸೇನೆಗೆ ಸೇರುವಾಸೆ

ಚಿಕ್ಕ ವಯಸ್ಸಿನಲ್ಲೇ ದೇಶಭಕ್ತಿ ಮೈಗೂಡಿಸಿಕೊಂಡಿದ್ದ ನಿರಂಜನ್, ಸೇನೆಗೆ ಸೇರುವ ಕನಸ್ಸು ಕಟ್ಟಿಕೊಂಡಿದ್ದ. ಎನ್​ಸಿಸಿ ಕ್ಯಾಂಪ್​ನಲ್ಲಿ ಮಿಲಿಟರಿ ಸಮವಸ್ತ್ರ ಮತ್ತು ಸೈನಿಕರ ಕಂಡು ಅವರಂತೆ ನಾನು ಆಗಬೇಕೆಂದು ಹೇಳುತ್ತಿದ್ದ. ತರಗತಿ, ಕ್ಯಾಂಪ್​ಗಳಿಗೆ ಸಮಯಕ್ಕೆ ಸರಿಯಾಗಿ ಬರುತ್ತಿದ್ದ. ಪ್ರತಿಯೊಂದು ಕೆಲಸದಲ್ಲಿ ಶಿಸ್ತುಬದ್ಧನಾಗಿ ನಡೆದುಕೊಳ್ಳುತ್ತಿದ್ದ. ಕನಸ್ಸಿನಂತೆ ಸೇನೆಗೆ ಸೇರಿದ್ದ ನಿರಂಜನ್ ಹೆಸರನ್ನು ಸುವರ್ಣಾಕ್ಷರದಲ್ಲಿ ಬರೆಯಬೇಕಾಗಿದೆ ಎಂದು ಬಿಇಎಲ್ ಪಿಯು ಕಾಲೇಜು ಎನ್​ಸಿಸಿ ನಿವೃತ್ತ ಶಿಕ್ಷಕ ಶಂಕರ್ ಜಾದವ್ ತಿಳಿಸಿದ್ದಾರೆ.

ನಿರಂಜನ್ ಮನೆಯಲ್ಲಿ ನೀರವ ಮೌನ

ಜಾಲಹಳ್ಳಿಯ ಸುಬ್ಬಣ್ಣ ಬಡಾವಣೆಯ ನಿರಂಜನ್ ಮನೆಯಲ್ಲಿ ನೀರವ ಮೌನ ಆವರಿಸಿತ್ತು. ನಡುಮನೆಯಲ್ಲಿ ಉರಿಯುತ್ತಿದ್ದ ದೀಪದ ಮುಂದೆ ಕುಳಿತ್ತಿದ್ದ ಮನೆಗೆಲಸಗಾರರು ಗೋಡೆಗೆ ನೇತು ಹಾಕಿದ್ದ ನಿರಂಜನ್ ಮದುವೆ ಸಮಾರಂಭದ ಫೋಟೋಗಳನ್ನು ನೋಡುತ್ತ ಕುಳಿತ್ತಿದ್ದ ದೃಶ್ಯ ಮನ ಕಲಕುವಂತಿತ್ತು. ಮತ್ತೊಂದೆಡೆ ಶ್ರೀಕೃಷ್ಣನ ಪೂಜೆಗೆಂದು ನಡೆದಿದ್ದ ಪೂಜಾ ಸಿದ್ಧತೆ ಅರ್ಧಕ್ಕೆ ಕೈಬಿಡಲಾಗಿತ್ತು. ಇಡೀ ಬಡಾವಣೆಯಲ್ಲಿ ಸೂತಕದ ಛಾಯೆ ಆವರಿಸಿತ್ತು. ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಸಿಗದ ವಿದ್ಯಾರ್ಥಿಗಳು, ಯುವಕರು ಮನೆಗೆ ಭೇಟಿಕೊಟ್ಟು ನಿರಂಜನ್ ಫೋಟೋಗೆ ಕೈ ಮುಗಿದು ಹೋಗುತ್ತಿದ್ದರು.

ಮಗಳೆಂದರೆ ಪಂಚಪ್ರಾಣ

ನನ್ನ ಮಗಳಿಗೂ ನಿರಂಜನ್ ಮಗಳಿಗೂ 2 ದಿನಗಳ ಅಂತರ ಮಾತ್ರ. ಸಮಯ ಸಿಕ್ಕಾಗ ಕರೆ ಮಾಡಿ ನಿನ್ನ ಮಗಳು ಹೇಗಿದ್ದಾಳೆ, ಏನೇನು ಮಾತಾಡುತ್ತಾಳೆ ಎಂದು ವಿಚಾರಿಸಿ ಕೊಳ್ಳುತ್ತಿದ್ದ. ನಂತರ ಆತನ ಮಗಳ ತುಂಟಾಟದ ಬಗ್ಗೆ ಹೇಳುತ್ತಿದ್ದ. ತಾತಾ, ಪಪ್ಪ, ಅಮ್ಮ… ಎಂದು ಮುದ್ದು ಮಾತುಗಳನ್ನು ಮಾತನಾಡುತ್ತಿದ್ದಾಳೆ. ಮಗಳ ಮಾತು ಕೇಳುವುದಕ್ಕೆ ತುಂಬಾ ಆನಂದ. ಆಕೆಯನ್ನು ತುಂಬ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳುತ್ತಿದ್ದಾಗಿ ನಿರಂಜನ್ ಸ್ನೇಹಿತ ಡಾ.ಅರುಣ್ ಮನದಾಳದ ಮಾತುಗಳನ್ನು ಬಿಚ್ಚಿಟ್ಟರು.

ನೌಕಾನೆಲೆಗೆ ವಿಶೇಷ ಭದ್ರತೆ

ಕಾರವಾರ: ಪಂಜಾಬ್​ನ ಪಠಾಣಕೋಟ್ ವಾಯುನೆಲೆಯ ಮೇಲೆ ಉಗ್ರರ ದಾಳಿ ಹಿನ್ನೆಲೆಯಲ್ಲಿ ಇಲ್ಲಿನ ಸೀಬರ್ಡ್ ನೌಕಾನೆಲೆಗೂ ಭದ್ರತೆ ಹೆಚ್ಚಿಸಲಾಗಿದೆ.

ನೌಕಾನೆಲೆಯ ಮುಖ್ಯದ್ವಾರದ ಹೊರಗೆ ಕರ್ನಾಟಕ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಪಡೆಯ ತುಕಡಿಯೊಂದನ್ನು ನಿಯೋಜಿಸಲಾಗಿದೆ. ಗ್ರಾಮೀಣ ಪೊಲೀಸ್ ಠಾಣೆ ಸಿಬ್ಬಂದಿ ನೌಕಾನೆಲೆ ಹೊರವಲಯದಲ್ಲಿ 24 ಗಂಟೆ ಗಸ್ತು ತಿರುಗಲಿದ್ದಾರೆ. ಅಲ್ಲದೇ ನೌಕಾನೆಲೆಯ ಎಲ್ಲ ದ್ವಾರಗಳ ಪ್ರವೇಶದಲ್ಲಿ ತಪಾಸಣೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ನೌಕಾನೆಲೆಯ 2 ನಾಟಿಕಲ್ ಮೈಲ್ ಸುತ್ತ ನೌಕೆಗಳು ಗಸ್ತು ತಿರುಗುತ್ತಿದ್ದು, ಹೆಲಿಕಾಪ್ಟರ್ ಮೂಲಕವೂ ನೌಕಾನೆಲೆಯ ಪ್ರದೇಶದ ಮೇಲೆ ಕಣ್ಣಿರಿಸಲಾಗಿದೆ. ಕೈಗಾದ ಸುತ್ತಲೂ ರೆಡ್ ಅಲರ್ಟ್ ಘೊಷಿಸಲಾಗಿದೆ. ಇನ್ನೂ ಕೆಲದಿನಗಳವರೆಗೆ ಈ ಭದ್ರತೆ ಮುಂದುವರಿಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Write A Comment