ರಾಷ್ಟ್ರೀಯ

ಹಿಮಾಲಯದಲ್ಲಿ ಸಂಭವಿಸಲಿದೆ ಭಾರಿ ತೀವ್ರತೆಯ ಭೂಕಂಪನ!

Pinterest LinkedIn Tumblr

Himalaya-Web

ಹಿಮಾಲಯ ಸೇರಿದಂತೆ ಉತ್ತರ ಭಾರತ ಮುಂಬರುವ ದಿನಗಳಲ್ಲಿ ಭಾರಿ ತೀವ್ರತೆಯ ಭೂಕಂಪಕ್ಕೆ ತುತ್ತಾಗಲಿದೆ. ಹಾಗಂತ ಗೃಹ ಸಚಿವಾಲಯದ ವಿಪತ್ತು ನಿರ್ವಹಣಾ ತಜ್ಞರು ಕೇಂದ್ರ ಸರ್ಕಾರದಕ್ಕೆ ಈಗಾಗಲೇ ಮುನ್ನೆಚ್ಚರಿಕೆ ನೀಡಿದ್ದಾರೆ. ಈ ಭೂಕಂಪನದ ತೀವ್ರತೆ 8.2 ಆಗಿರಲಿದೆ ಎಂದು ಎಚ್ಚರಿಸಿದೆ.

ನವದೆಹಲಿ: ಹಿಮಾಲಯ ಸೇರಿ ಉತ್ತರ ಭಾರತಕ್ಕೆ ಆಪತ್ತು ಕಾದಿದೆಯಾ?

ಗೃಹ ಸಚಿವಾಲಯದ ವಿಪತ್ತು ನಿರ್ವಹಣಾ ತಜ್ಞರು ನೀಡಿರುವ ಮಾಹಿತಿಯನ್ನು ಕೇಳಿದರೆ ಹೌದು ಎನ್ನಲೇಬೇಕು. ಕಾರಣ ಮುಂದಿನ ದಿನಗಳಲ್ಲಿ ಹಿಮಾಲಯದಲ್ಲಿ ರಿಕ್ಟರ್ ಮಾಪಕದಲ್ಲಿ 8.2 ತೀವ್ರತೆಯ ಭಾರಿ ಭೂಕಂಪವೇ ಸಂಭವಿಸಲಿದೆ ಎಂದು ಈಗಾಗಲೇ ತಜ್ಞರು ತಮ್ಮ ಮುನ್ನೆಚ್ಚರಿಕೆ ವರದಿಯಲ್ಲಿ ಹೇಳಿದ್ದಾರಂತೆ. ಹಾಗಂತ ಕೆಲ ಮಾಧ್ಯಮಗಳ ವರದಿ ಹೇಳುತ್ತಿದೆ.

ಇದಕ್ಕೆ ಪೂರಕ ಎನ್ನುವಂತೆ ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಉತ್ತರ, ಈಶಾನ್ಯ ಭಾರತದಲ್ಲಿ ಭೂಮಿ ಕಂಪಿಸುತ್ತಲೇ ಇದೆ. ಮೊನ್ನೆ ಮೊನ್ನೆಯಷ್ಟೆ ಮಣಿಪುರ ಸುತ್ತಮುತ್ತ ಭೂಮಿ ಕಂಪಿಸಿತ್ತು. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 6.7ರಷ್ಟು ದಾಖಲಾಗಿತ್ತು. ಈ ಮೊದಲೂ ಸಾಕಷ್ಟು ಭಾರಿ ಉತ್ತರ ಭಾರತ, ನೆರೆಯ ದೇಶ ನೇಪಾಳದಲ್ಲಿ ಭೂಕಂಪ ಸಂಭವಿಸಿದೆ. ಕಳೆದ ವರ್ಷ ನೇಪಾಳದಲ್ಲಿ 7.3 ತೀವ್ರತೆಯ ಭೂಕಂಪ, 2011ರಲ್ಲಿ ಸಿಕ್ಕಿಂನಲ್ಲಿ 6.9 ತೀವ್ರತೆಯ ಭೂಕಂಪ ಸಂಭವಿಸಿತ್ತು.

ಇತ್ತೀಚೆಗಷ್ಟೆ ಅರುಣಾಚಲ ಪ್ರದೇಶದಲ್ಲಿ ನಡೆದ ಸಭೆಯಲ್ಲಿ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಡಿಸಾಸ್ಟರ್ ಮ್ಯಾನೆಜ್​ವೆುಂಟ್ (ಎನ್​ಐಡಿಎಂ) ಮುನ್ನೆಚ್ಚರಿಕೆ ನೀಡಿದೆ. ಉತ್ತರ ಭಾರತದ ಬಹುತೇಕ ಭಾಗಗಳಲ್ಲಿ ಭಾರಿ ತೀವ್ರತೆಯ ಭೂಕಂಪ ಸಂಭವಿಸಲಿದ್ದು, ಪರ್ವತ ಪ್ರದೇಶಗಳು ಸಾಕಷ್ಟಿರುವ 11 ರಾಜ್ಯಗಳಲ್ಲಿ ಇದರ ಪರಿಣಾಮ ಜಾಸ್ತಿ ಆಗಲಿದೆ ಎಂದು ಹೇಳಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಎನ್​ಐಡಿಎಂ ನಿರ್ದೇಶಕ ಸಂತೋಷ್ ಕುಮಾರ್, ಸಂಭವಿಸಬಹುದಾದ ಈ ಭೂಕಂಪನದಿಂದ ಭಾರತ, ಮ್ಯಾನ್ಮಾರ್, ಭೂತಾನ್, ನೇಪಾಳಗಳಲ್ಲಿ ಸಾಕಷ್ಟು ನಷ್ಟ ಸಂಭವಿಸಬಹುದಾದ ಸಾಧ್ಯತೆ ಹೆಚ್ಚಿದೆ ಎಂದು ಎಚ್ಚರಿಸಿದ್ದಾರೆ.

Write A Comment