ಕರ್ನಾಟಕ

ಉಗ್ರ ಕಾರ್ಯಾಚರಣೆ ಅಂತ್ಯ ತಡವಾಗಿದ್ದಕ್ಕೆ ನಾನೇ ಕಾರಣ

Pinterest LinkedIn Tumblr

04-manohar-parrikar-IndiaIn

ಧಾರವಾಡ: ದೇಶದ ಮಹತ್ವದ ವಾಯುನೆಲೆಯಾಗಿರುವ ಪಠಾಣ್‌ಕೋಟ್‌ ಮೇಲೆ ಉಗ್ರರು ನಡೆಸಿರುವ ದಾಳಿಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈ ದೇಶದ ರಕ್ಷಣೆಗೆ ಸದಾ ಬದ್ಧವಾಗಿದೆ ಎಂದು ರಕ್ಷಣಾ ಸಚಿವ ಮನೋಹರ ಪರ್ರಿಕರ್‌ ತಿಳಿಸಿದ್ದಾರೆ.

ಇಲ್ಲಿನ ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಜರ್ಷಿ ವೀರೇಂದ್ರ ಹೆಗ್ಗಡೆ ಅವರ ಅಂಚೆ ಲಕೋಟೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಪಠಾಣ್‌ಕೋಟ್‌ ವಾಯುನೆಲೆ ಮೇಲೆ ದಾಳಿ ಮಾಡಿದ ಆರೂ ಉಗ್ರರನ್ನು ನಮ್ಮ ವೀರ ಸೈನಿಕರು ಸದೆ ಬಡಿದಿದ್ದಾರೆ. ಉಗ್ರರು ಸಾಯುವುದಕ್ಕೆ ಸಿದ್ಧರಾಗಿ ಬಂದಿರುತ್ತಾರೆ. ಅವರು ಸಾದಾ ಉಗ್ರರಲ್ಲ. ಹೀಗಾಗಿ ನಾನು ನಮ್ಮ ಸೈನಿಕರಿಗೆ ಏಕಾಏಕಿ ನುಗ್ಗದಂತೆ ಆದೇಶಿಸಿದ್ದೆ. ನಿಮ್ಮ ಜೀವವೂ ಮುಖ್ಯ ಎಂದು ಸೈನಿಕರಿಗೆ ಮತ್ತು ಎನ್‌ಎಸ್‌ಜಿ ಕಮಾಂಡೋಗಳಿಗೆ ಹೇಳಿದ್ದೆ. ಹೀಗಾಗಿ ನಮ್ಮ ಸೈನಿಕರು ನಡೆಸಿದ ಕಾರ್ಯಾಚರಣೆ ಅವಧಿ ಸ್ವಲ್ಪ ದೀರ್ಘ‌ವಾಯಿತು ಎಂದರು.

ಈವರೆಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಮಾತ್ರ ಸೀಮಿತವಾಗಿದ್ದ ಉಗ್ರರನ್ನು ಹಿಂದಿನ ಸರ್ಕಾರ ವ್ಯವಸ್ಥಿತವಾಗಿ ಸದೆ ಬಡಿಯದಿದ್ದರಿಂದ ಅವರು ಪಠಾಣ್‌ಕೋಟ್‌ ಮೇಲೆ ದಾಳಿ ಮಾಡಿದರು. ಇದು ದೇಶದ ರಕ್ಷಣಾ ವಿಚಾರ. ಹೀಗಾಗಿ ಈ ಕುರಿತು ಕೆಲವು ವಿಚಾರಗಳನ್ನು ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ. ಆದರೆ, ಈ ದಾಳಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ದೇಶದಲ್ಲಿರುವ ಎಲ್ಲಾ ಜನರ ಸಂರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಪರ್ರಿಕರ್‌ ಭರವಸೆ ನೀಡಿದರು.
-ಉದಯವಾಣಿ

Write A Comment