ರಾಷ್ಟ್ರೀಯ

ಪಾಕ್ ಭೇಟಿ ನೀಡಿ ದೇಶದ ಮಾನ ಹರಾಜು ಹಾಕಿದ ಮೋದಿ : ಮುತಾಲಿಕ್ ಕಿಡಿ

Pinterest LinkedIn Tumblr

mutalikಬೆಂಗಳೂರು, ಜ.7-ಪಾಕಿಸ್ಥಾನಕ್ಕೆ ಅನಿರೀಕ್ಷಿತ ಭೇಟಿ ನೀಡಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಮಾನ ಹರಾಜು ಹಾಕಿದ್ದಾರೆ ಎಂದು ಶ್ರೀರಾಮಸೇನೆ  ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ. ಪಾಕಿಸ್ಥಾನಕ್ಕೆ ಪ್ರಧಾನಿ ಭೇಟಿ ನೀಡಿರುವುದು ಅತ್ಯಂತ ಖಂಡನೀಯ. ಅಲ್ಲಿಗೆ ಭೇಟಿ ನೀಡಿರುವ ವಿಚಾರವನ್ನು ಬಹಿರಂಗಪಡಿಸಬೇಕೆಂದು ಅವರು ಆಗ್ರಹಿಸಿದ್ದಾರೆ. ಕಲಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟಿಗೆ ನಡೆಯಬಾರದು ಎಂದು ಪ್ರಧಾನಿ ಮೋದಿ ಹೇಳಿದ್ದರು. ಆದರೆ, ಅವರು ಪಾಕ್‌ಗೆ ಏಕೆ ಭೇಟಿ ನೀಡಿದ್ದಾರೆಂಬುದನ್ನು ಸ್ಪಷ್ಟಪಡಿಸಬೇಕು ಎಂದರು.
ಪಠಾಣ್‌ಕೋಟ್ ವಾಯುನೆಲೆಯ ಮೇಲೆ ಉಗ್ರರು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋದಿ  ಅವರು ಸ್ಪಷ್ಟನೆ ನೀಡಬೇಕೆಂದು ಮುತಾಲಿಕ್ ಒತ್ತಾಯಿಸಿದ್ದಾರೆ.

ಪಾಕ್ ಜೊತೆ ಪೆನ್ನಿನೊಂದಿಗೆ ಮಾತುಕತೆ ಬೇಡ, ಗನ್ನು ಹಿಡಿದೇ ಮಾತುಕತೆ ನಡೆಸಬೇಕು. ಆಗ ಮಾತ್ರ ಪಾಕಿಸ್ಥಾನಕ್ಕೆ ಬುದ್ಧಿ ಬರುತ್ತದೆ. ಪಾಕ್ ಜೊತೆಗಿನ ಎಲ್ಲಾ ಬಾಂಧವ್ಯಗಳನ್ನು ಕಡಿತಗೊಳಿಸಬೇಕು ಎಂದು ಅವರು ಹೇಳಿದ್ದಾರೆ.

ಪಠಾಣ್‌ಕೋಟ್ ಪ್ರಕರಣದಲ್ಲಿ  ಭದ್ರತಾಲೋಪವಾಗಿರುವುದನ್ನು ಸ್ವತಃ ರಕ್ಷಣಾ ಸಚಿವರೇ ಒಪ್ಪಿಕೊಂಡಿದ್ದಾರೆ. ಸಚಿವರಾದ ಮನೋಹರ್ ಪರಿಕ್ಕರ್ ಅವರಿಗೆ ನೈತಿಕತೆ ಇದ್ದರೆ ಮೊದಲು ಅವರು ರಾಜೀನಾಮೆ ನೀಡಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ಥಾನಕ್ಕೆ ಭೇಟಿ ನೀಡಿ ಶಾಂತಿದೂತನೆನಿಸಿಕೊಳ್ಳಲು ಹೊರಟಿದ್ದಾರೆ. ಈ ಮೂಲಕ ನೊಬೆಲ್ ಶಾಂತಿ ಪ್ರಶಸ್ತಿ ಪಡೆಯಬೇಕು ಎಂದು ಮೋದಿ ಪಾಕಿಸ್ಥಾನಕ್ಕೆ ಭೇಟಿ ನೀಡಿರಬಹುದು ಎಂದು ವ್ಯಂಗ್ಯವಾಡಿದ್ದಾರೆ.

ಗ್ರಾಮೀಣ ಭಾಗದಲ್ಲಿ ಲವ್ ಜಿಹಾದ್ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದೆ. ಲವ್ ಜಿಹಾದ್ ಮೂಲಕ ಅಮಾಯಕ ಹೆಣ್ಣು ಮಕ್ಕಳಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ಪೋಷಕರು ಎಚ್ಚರದಿಂದಿರಬೇಕು. ದೇಶಾದ್ಯಂತ ಗೋ ಹತ್ಯೆ ನಿಷೇಧ ಕಾನೂನನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಬೇಕೆಂದು ಅವರು ಒತ್ತಾಯಿಸಿದ್ದಾರೆ. ಕಲಬುರ್ಗಿ ನಗರ ಉಗ್ರರ ಅಡಗುತಾಣವಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಗೃಹ ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕೋರ್ಟ್‌ನಿಂದ ಪರಿಹಾರವಾಗುವುದಿಲ್ಲ. ಬದಲಾಗಿ ಕ್ರಾಂತಿಯಿಂದ ಮಾತ್ರ ಆಗುತ್ತದೆ. ತ್ಯಾಗ-ಬಲಿದಾನದಿಂದ ರಾಮಮಂದಿರ ನಿರ್ಮಾಣ ಮಾಡಲು ಸಾಧ್ಯ ಎಂದು ಮುತಾಲಿಕ್ ಹೇಳಿದರು.

Write A Comment