ಕರ್ನಾಟಕ

ಬೇರೆ ಧರ್ಮದವನ ಜತೆ ಮದುವೆ.. ಮಗಳ ಅಪಹರಣಕ್ಕೆ ಅಪ್ಪನೇ ಸುಪಾರಿ!

Pinterest LinkedIn Tumblr

marriageಮೈಸೂರು: ಮಗಳು ಬೇರೆ ಧರ್ಮದವನನ್ನು ವಿವಾಹವಾದಳು ಎಂಬ ಕಾರಣಕ್ಕೆ ಮಗಳನ್ನೇ ಅಪಹರಿಸಲು ಅಪ್ಪನೇ ಸುಪಾರಿ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ. ಅಂದಹಾಗೆ ಈ ಅಪ್ಪ ಓರ್ವ ಖ್ಯಾತ ಉದ್ಯಮಿ ಕೂಡಾ ಹೌದು.

ಸಿನಿಮೀಯ ರೀತಿಯಲ್ಲಿ ಯುವತಿಯನ್ನು ಅಪಹರಣರಿಸಿದ್ದ ಅಪಹರಣಕಾರರ ಪೈಕಿ ಮೂವರನ್ನು ಬಂಧಿಸುವಲ್ಲಿ ಮೈಸೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಬ್ದುಲ್ ಅಮೀನ್(25), ಸಹೋದರ ಜುಲ್ಫಿಕರ್(28) ಹಾಗೂ ಕುಶಾಲನಗರದ ಶೌಖತ್ ಆಲಿ(25) ಎಂಬುವವರನ್ನು ಬಂಧಿಸಲಾಗಿದೆ.

ಮೂಲತಃ ಮಂಗಳೂರಿನ ಶಿವರಾಜ್ ಹಾಗೂ ಹಲೀಮಾ ಎಂಬುವರ ಪ್ರೀತಿ ಧರ್ಮವನ್ನೂ ಮೀರಿದ್ದಾಗಿತ್ತು. ಕೊನೆಗೆ ಯುವತಿಯ ಪೋಷಕರ ವಿರೋಧದ ನಡುವೆಯೇ ವಿವಾಹವಾಗಿ ಮೈಸೂರಿನಲ್ಲಿ ಸಂಸಾರ ನಡೆಸುತ್ತಿದ್ದರು. ಆದರೆ ಮಗಳನ್ನು ಹೇಗಾದರೂ ಮಾಡಿ ಹಿಂದಕ್ಕೆ ಪಡೆಯಬೇಕೆಂದು ಹಲೀಮಾ ತಂದೆ, ಖ್ಯಾತ ಉದ್ಯಮಿ ಡಿಕೆಎಸ್ ಗ್ರೂಪ್‌‌ನ ಮಾಲೀಕ ಹಮೀದ್  ನಾನಾ ರೀತಿ ಪ್ರಯತ್ನಿಸಿ ವಿಫಲರಾಗಿದ್ದರು.

ಕೊನೆಗೆ ತನ್ನ ಮಗಳನ್ನೇ ಅಪಹರಿಸುವಂತೆ ಅಪಹರಣಕಾರರಿಗೆ ಸುಪಾರಿ ನೀಡಿದ್ದರು. ಸುಪಾರಿ ಪಡೆದ ಅಪಹರಣಕಾರರು ಡಿ. 4 ರಂದು ಸಂಜೆ ಹಾಡಹಗಲೇ ಮೈಸೂರಿನ ಕೃಷ್ಣಮೂರ್ತಿ ಪುರಂ ಬಳಿ ಪತಿ ಶಿವರಾಜ್ ಮೇಲೆ ಹಲ್ಲೆ ನಡೆಸಿ, ಪತ್ನಿ ಹಲೀಮಾಳನ್ನು ಅಪಹರಿಸಿದ್ದರು. ಹಲ್ಲೆಗೊಳಗಾದ ಶಿವರಾಜ್ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಹೆಂಡತಿಯನ್ನು ಹುಡುಕಿಕೊಡುವಂತೆ ಲಕ್ಷ್ಮೀಪುರಂ ಠಾಣೆಯ ಪೊಲೀಸರಿಗೆ ಹಾಗೂ ನ್ಯಾಯಾಲಯದ ಮೊರೆ ಹೋಗಿದ್ದರು.

ಈ ಸಂಬಂಧ ಪ್ರಕರಣದ ಗಂಭೀರತೆಯನ್ನು ಅರಿತ ಮೈಸೂರು ಲಕ್ಷ್ಮೀಪುರಂ ಠಾಣೆಯ ಪೊಲೀಸರು ಮೂರು ತಂಡಗಳಾಗಿ ಅಪಹರಣಕಾರರ ಬೆನ್ನುಹತ್ತಿದ್ದು, ಮೂವರು ಆರೋಪಿಗಳು ಬಂಧಿಸಿದ್ದಾರೆ.  ಅಪಹರಣಕ್ಕೆ ಸಂಬಂಧಿಸಿದ ಇನ್ನಿಬ್ಬರು ಆರೋಪಿಗಳು ನಾಪತ್ತೆಯಾಗಿದ್ದು, ಅವರ ಪತ್ತೆಗೂ ಬಲೆ ಬೀಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಗಂಡನಿಂದ ಹೈಕೋರ್ಟ್‌‌ನಲ್ಲಿ ಹೇಬಿಯಸ್ ಕಾರ್ಪಸ್

ಜ. 11ರೊಳಗೆ ಅಪಹರಗೊಂಡಿರುವ ಯುವತಿ(ಹಲೀಮಾ) ಕೋರ್ಟ್ ಮುಂದೆ ಹಾಜರುಪಡಿಸಬೇಕೆಂದು ಹೈಕೋರ್ಟ್ ಆದೇಶಿಸಿರುವ ಹಿನ್ನೆಲೆಯಲ್ಲಿ ಮೈಸೂರಿನ ಸಿಸಿಬಿ ಪೊಲೀಸರು ಹಾಗೂ ಮೂರು ತಂಡಗಳು ತೀವ್ರ ಶೋಧ ಕಾರ್ಯ ಕೈಗೊಂಡಿವೆ. ಈಗಾಗಲೇ ತಲೆಮರೆಸಿಕೊಂಡಿರುವ ಹಲೀಮಾರ ತಂದೆ, ಖ್ಯಾತ ಉದ್ಯಮಿ ಡಿಕೆಎಸ್ ಗ್ರೂಪ್‌‌ನ ಮಾಲೀಕ ಹಮೀದ್ ಪತ್ತೆ ಬಲೆ ಬೀಸಿದ್ದಾರೆ.

Write A Comment