ಟ್ರಿಪೋಲಿ: ಲಿಬಿಯಾದ ಝಿಲ್ಟೆನ್ ನಗರದಲ್ಲಿ ಪೊಲೀಸ್ ತರಬೇತಿ ಕೇಂದ್ರದ ಮೇಲೆ ಸ್ಪೋಟಕಗಳನ್ನು ತುಂಬಿದ್ದ ಟ್ರಕ್ ಒಂದು ಡಿಕ್ಕಿ ಹೊಡೆದು ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಕನಿಷ್ಠ 65 ಮಂದಿ ಸಾವನ್ನಪ್ಪಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ ಬಾಂಬ್ ದಾಳಿ ನಡೆದ ತತ್ ಕ್ಷಣವೇ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಸುಮಾರು 50ಕ್ಕೂ ಹೆಚ್ಚು ಮಂದಿ ಗಾಯಾಳುಗಳನ್ನು ಮಿಸುರತ ಸೆಂಟ್ರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಟ್ರಕ್ ಪೊಲೀಸ್ ತರಬೇತಿ ಕೇಂದ್ರದ ಕಡೆಗೆ ನುಗ್ಗಿದ ಬೆನ್ನಲ್ಲೇ ಭಾರಿ ಸ್ಪೋಟದ ಸದ್ದು ಕೇಳಿಸಿತು ಎಂದು ಲಿಬಿಯಾ ಪಿಕ್ ಟ್ವಿಟ್ಟರ್ ಟ್ವೀಟ್ ಮಾಡಿದೆ.
ಸಾವು ನೋವಿನ ಸಂಖ್ಯೆ ಇನ್ನಷ್ಟು ಹೆಚ್ಚಬಹುದು ಎಂದು ವರದಿಗಳು ತಿಳಿಸಿದ್ದು, ಹಲವಾರು ಮಂದಿ ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಿವೆ. ಯಾವುದೇ ಉಗ್ರಗಾಮಿ ಗುಂಪು ಈವರೆಗೆ ಸ್ಪೋಟದ ಹೊಣೆ ಹೊತ್ತುಕೊಂಡಿಲ್ಲ ಎಂದು ವರದಿಗಳು ಹೇಳಿವೆ.