ಕರ್ನಾಟಕ

ಬೆಂಗಳೂರು ಪೊಲೀಸರು ಅಸಮರ್ಥರಂತೆ…!

Pinterest LinkedIn Tumblr

policeಬೆಂಗಳೂರು, ಜ.8- ರಾಜಧಾನಿ ಬೆಂಗಳೂರಿನ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಕರ್ತವ್ಯಕ್ಕೆ ನಿಯೋಜನೆ ಮಾಡಿರುವ ಪೊಲೀಸರು ಅಸಮರ್ಥರು ಹಾಗೂ ದೈಹಿಕವಾಗಿ ಅನಾರೋಗ್ಯ ಪೀಡಿತರಾಗಿದ್ದಾರೆಂಬುದು ಬಹಿರಂಗಗೊಂಡಿದೆ.

ಬೆಂಗಳೂರಿನಲ್ಲಿರುವ ವಿಧಾನಸೌಧ, ರಾಜಭವನ, ಹೈಕೋರ್ಟ್, ವಿಕಾಸಸೌಧ, ಮುಖ್ಯಮಂತ್ರಿಗಳ ನಿವಾಸ, ಅಧಿಕೃತ ಕಚೇರಿ ಕೃಷ್ಣಾ ಸೇರಿದಂತೆ ಮತ್ತಿತರ ಕಡೆ ನಿಯೋಜನೆಗೊಂಡಿರುವ ಸಿಬ್ಬಂದಿಯನ್ನು ಬದಲಾವಣೆ ಮಾಡಬೇಕೆಂದು ವಿಧಾನಸೌಧದ ಡಿಸಿಪಿ ಆನಂದ್‌ಕುಮಾರ್ ಅವರು ನಗರ ಪೊಲೀಸ್ ಆಯುಕ್ತ ಮೇಘರಿಕ್‌ಗೆ ಪತ್ರ ಬರೆದಿದ್ದಾರೆ. ಇಂದಿನ ಬದಲಾದ ಪರಿಸ್ಥಿತಿಗೆ ಉಗ್ರರು ಇಲ್ಲವೆ ಸಮಾಜಘಾತುಕ ಶಕ್ತಿಗಳು ದಾಳಿ ನಡೆಸಿದ ವೇಳೆ ಅವರನ್ನು ಹಿಮ್ಮೆಟ್ಟಿಸುವಷ್ಟು ನಮ್ಮ ಪೊಲೀಸರು ದೈಹಿಕವಾಗಿ ಸಮರ್ಥರಿಲ್ಲ. ಅಲ್ಲದೆ, ಬಹುತೇಕ ಸಿಬ್ಬಂದಿ ಒಂದಿಲ್ಲೊಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಇವರನ್ನು ತಕ್ಷಣವೇ ಬದಲಾವಣೆ ಮಾಡುವಂತೆ ಕೋರಿದ್ದಾರೆ.

ವಿಧಾನಸೌಧ, ವಿಕಾಸಸೌಧ, ರಾಜಭವನ, ಹೈಕೋರ್ಟ್ ಸೇರಿದಂತೆ ಕೆಲವು ಪ್ರದೇಶಗಳನ್ನು ಸರ್ಕಾರ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿದೆ.

ಕೆಲವು ಸಂದರ್ಭಗಳಲ್ಲಿ ಇಲ್ಲಿ ಭಯೋತ್ಪಾದಕರು, ನಕ್ಸಲೀಯರು ದಾಳಿ ನಡೆಸುವ ಬೆದರಿಕೆ ಹಾಕಿದ್ದರು. ಅಲ್ಲದೆ, ಕೆಲ ಸಮಾಜಘಾತುಕ ಶಕ್ತಿಗಳು ಬಾಂಬ್ ಸ್ಫೋಟದಂತಹ ದುಷ್ಕೃತ್ಯಗಳನ್ನು ನಡೆಸಿದ್ದಾರೆ. ಇಂತಹ ವೇಳೆ ಹಾಲಿ ಇರುವ ಸಿಬ್ಬಂದಿಗೆ ಇದನ್ನು ತಡೆಗಟ್ಟುವಷ್ಟು ಶಕ್ತಿ ಮತ್ತು ಸಾಮರ್ಥ್ಯ ಹೊಂದಿಲ್ಲ ಎಂದು ಪತ್ರದಲ್ಲಿ ವಿವರಿಸಿದ್ದಾರೆ. ಪ್ರತಿದಿನ ಈ ಸ್ಥಳಗಳಿಗೆ ರಾಜ್ಯ ಹಾಗೂ ಹೊರರಾಜ್ಯಗಳಿಂದ ಸಾವಿರಾರು ಜನರು ಭೇಟಿ ನೀಡುತ್ತಾರೆ. ಕೇಂದ್ರದ ಗುಪ್ತಚರ ಇಲಾಖೆಯು ಬೆಂಗಳೂರಿನಲ್ಲಿ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ.

ವಸ್ತುಸ್ಥಿತಿ ಹೀಗಿರುವಾಗ ಇಂತಹ ಸಿಬ್ಬಂದಿಗಳನ್ನು ಇಟ್ಟುಕೊಂಡು ನಾವು ಸಂಭಾವ್ಯ ದಾಳಿಯನ್ನು ತಡೆಗಟ್ಟುವುದು ಹೇಗೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಪ್ರದೇಶಗಳಿಗೆ ಒಟ್ಟು 450 ಸಿಬ್ಬಂದಿಯ ಅಗತ್ಯವಿದೆ. ಇದರಲ್ಲಿ ರಾಜ್ಯ ಸರ್ಕಾರ ಕೇವಲ 210 ಹುದ್ದೆಗಳನ್ನು ಮಾತ್ರ ಮಂಜೂರು ಮಾಡಿದೆ. ಇದರಲ್ಲಿ 183 ಸಿಬ್ಬಂದಿಗಳನ್ನು ವಿಧಾನಸೌಧಕ್ಕೆ ನಿಯೋಜನೆ ಮಾಡಿದ್ದರೆ, ವಿಕಾಸಸೌಧಕ್ಕೆ 102 ಸಿಬ್ಬಂದಿ ಮಂಜೂರಾಗಿದ್ದರೆ, ಕೇವಲ 50 ಸಿಬ್ಬಂದಿಯನ್ನು ಒದಗಿಸಲಾಗಿದೆ.

ಶಾಸಕರ ಭವನಕ್ಕೆ 108 ಮಂದಿ ಸಿಬ್ಬಂದಿಯ ಅಗತ್ಯವಿದ್ದರೆ ಸರ್ಕಾರ ನೀಡಿರುವುದು 45 ಮಂದಿ ಮಾತ್ರ. ಇದೇ ರೀತಿ ಹೈಕೋರ್ಟ್‌ಗೆ 56 ಸಿಬ್ಬಂದಿಯ ಅಗತ್ಯವಿದ್ದರೆ 31 ಸಿಬ್ಬಂದಿಯನ್ನು ನೀಡಲಾಗಿದೆ.  ಸರಿಸುಮಾರು ಅರ್ಧಕ್ಕಿಂತಲೂ ಹೆಚ್ಚು ಸಿಬ್ಬಂದಿ ಬಾಕಿ ಉಳಿದಿರುವುದರಿಂದ ಈಗಿರುವ ಸಿಬ್ಬಂದಿಯಿಂದ ಇದನ್ನು ನಿರ್ವಹಣೆ ಮಾಡಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಆಮೂಲಾಗ್ರವಾಗಿ ಬದಲಾವಣೆ ಮಾಡಬೇಕೆಂದು ಕೋರಿದ್ದಾರೆ.

ಇದೀಗ ನಗರ ಪೊಲೀಸ್ ಆಯುಕ್ತರು ಸರ್ಕಾರದ ಜತೆ ಮಾತುಕತೆ ನಡೆಸಿ ಉಗ್ರರ ಹಿಟ್‌ಲಿಸ್ಟ್‌ನಲ್ಲಿರುವ ಕಟ್ಟಡಗಳಿಗೆ ಉನ್ನತ ಮಟ್ಟದ ಭದ್ರತೆ ಒದಗಿಸಲು ಹಾಲಿ ಇರುವ ಸಿಬ್ಬಂದಿಯನ್ನು ಬದಲಾವಣೆ ಮಾಡಲು ಚಿಂತನೆ ನಡೆಸಿದ್ದಾರೆ ಎಂದು ಪೊಲೀಸ್ ಇಲಾಖೆ ಮೂಲಗಳು ಖಚಿತಪಡಿಸಿವೆ.

Write A Comment