ರಾಷ್ಟ್ರೀಯ

ನವಾಜ್ ಷರೀಫ್ ಸಾಹೇಬ್ರೆ ಈ ಮೊಬೈಲ್ ನಂ.ಗಳನ್ನ ಒಮ್ಮೆ ಪರಿಶೀಲಿಸಿ ..!

Pinterest LinkedIn Tumblr

pakಪಠಾಣ್‌ಕೋಟ್, ಜ.8-ಕಳೆದ ವಾರ ಇಲ್ಲಿನ ವಾಯುನೆಲೆ ಮೇಲೆ ದಾಳಿ ನಡೆಸಿದ ಉಗ್ರರು ಪಾಕಿಸ್ಥಾನಿಗಳು ಎಂಬ ಬಗ್ಗೆ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರಿಗೆ ಅಲ್ಪ-ಸ್ವಲ್ಪವಾದರೂ ಅನುಮಾನವೆಂಬುದೇನಾದರೂ ಇದ್ದರೆ ಅವರು ತಕ್ಷಣ ತಮ್ಮದೇ ದೇಶದ -92-3017775253 ಮತ್ತು -92-300097212 ದೂರವಾಣಿ ಸಂಖ್ಯೆಗಳನ್ನು ಪರಿಶೀಲಿಸುವುದು ಒಳ್ಳೆಯದು. ಏಕೆಂದರೆ ಈ ದೂರವಾಣಿ ಸಂಖ್ಯೆಗಳು ಪಾಕಿಸ್ಥಾನದಲ್ಲೇ ಇರುವ ಜೈಷ್-ಎ-ಮೊಹಮದ್ ಉಗ್ರರ ಗುರುವಿನ ಮೊಬೈಲ್ ನಂಬರ್‌ಗಳು.  ದಾಳಿಗೆ ಮುನ್ನ ಉಗ್ರರು ಪಾಕಿಸ್ಥಾನಕ್ಕೆ ಫೋನ್ ಮೂಲಕ ಸಂಪರ್ಕ ನಡೆಸಿ ಅಲ್ಲಿನ ಸಂಘಟನೆಯ ಮುಖ್ಯಸ್ಥರ ಬಳಿ ಚರ್ಚಿಸಿದ್ದರು ಎಂಬ ಬಗ್ಗೆ ಪೊಲೀಸರು ಪತ್ತೆ ಹಚ್ಚಿದ್ದರು. ಈಗ ಈ ಸಂಖ್ಯೆಗಳು ಖಚಿತವಾಗಿ ಜೈಷ್-ಎ-ಮೊಹಮದ್ ಸಂಘಟನೆಯ ಮುಖ್ಯಸ್ಥ ಮತ್ತು ಪಠಾಣ್‌ಕೋಟ್ ವಾಯು ನೆಲೆಯ ಮೇಲಿನ ದಾಳಿಯ ರೂವಾರಿ ಮಸೂದ್ ಅಜರ್ ಎಂಬ ವ್ಯಕ್ತಿಗೆ ಸೇರಿವೆ ಎಂಬುದು ಬಹಿರಂಗವಾಗಿದೆ.

ಪಾಕಿಸ್ಥಾನದಿಂದ ಜಮ್ಮು-ಕಾಶ್ಮೀರದ ಮೂಲಕ ಭಾರತದೊಳಕ್ಕೆ ಪ್ರವೇಶಿಸಿದ ಸಂಘಟನೆಯ ಆರು ಮಂದಿ ಉಗ್ರರಿಗೆ ವಿದ್ವಂಸಕ ಘಟನೆಯ ರೂವಾರಿ ಮಸೂದ್ ಅಜರ್ ದಾಳಿ ನಡೆಸುವ ಕ್ಷಣದ ವರೆಗೂ ಈ ಸಂಖ್ಯೆಗಳ ಮೂಲಕ ಅವರಿಗೆ ಮಾರ್ಗದರ್ಶನ ಮಾಡುತ್ತಲೇ ಇದ್ದ ಎಂಬುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.

ಮೊಟ್ಟಮೊದಲು ವಾಯುನೆಲೆಯಿಂದ ಉಗ್ರರು 92 300097212 ಈ ನಂಬರ್‌ಗೆ ಡಿ.31ರ ರಾತ್ರಿ 9.12 ಗಂಟೆಗೆ ಕರೆ ಮಾಡಿರುವುದು ಗೊತ್ತಾಗಿದೆ. ಈ ಕರೆಯನ್ನು ಅವರು ಮಾಡಿರುವುದು ಟ್ಯಾಕ್ಸಿ ಡ್ರೈವರ್ ಇಕಾಗರ್‌ಸಿಂಗ್‌ನ ಮೊಬೈಲ್ ಮೂಲಕ.  ನಂತರ ಅವನನ್ನು ಉಗ್ರರು ಹತ್ಯೆ ಮಾಡಿದ್ದಾರೆ. ಪಾಕಿಸ್ಥಾನದಿಂದ ಮಾತನಾಡುತ್ತಿದ್ದ ವ್ಯಕ್ತಿಯನ್ನು ಉಗ್ರರು ಉಸ್ತಾದ್ ಎಂದು ಸಂಭೋದಿಸುತ್ತಿದ್ದರು. ಇದೇ ಉಸ್ತಾದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್. ಈ ಎಲ್ಲಾ ಮಾಹಿತಿಗಳನ್ನು ಗುಪ್ತಚರ ಇಲಾಖೆಯ ಅಧಿಕಾರಿಗಳು ಎಳೆ-ಎಳೆಯಾಗಿ ಬಿಡಿಸಿದ್ದು, ಭಾರತದೊಂದಿಗೆ ಕೈ ಕುಲುಕಲು ಸಿದ್ಧವಾಗಿರುವ ಪಾಕ್ ಪ್ರಧಾನಿ ನವಾಜ್ ಷರೀಫ್ ಒಮ್ಮೆ ಪರಿಶೀಲಿಸಿ ನೋಡಿಕೊಳ್ಳುವುದು ಉಭಯತಾಪಿ ಒಳ್ಳೆಯದು.

ಏಕೆಂದರೆ, ಈಗಾಗಲೇ ಪಾಕಿಸ್ಥಾನದ ಕಡೆಯಿಂದ ಈ ಕುರಿತಂತೆ ಕೆಲವು ಹೇಳಿಕೆಗಳು ಬಿಡುಗಡೆಯಾಗಿದ್ದು, ಉಗ್ರರಿಗೂ ಪಾಕಿಸ್ಥಾನಕ್ಕೂ ಸಂಬಂಧವಿಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ.  ಈ ಹಿನ್ನೆಲೆಯಲ್ಲಿ ನವಾಜ್ ಷರೀಫ್ ಘಟನೆಯ ಬಗ್ಗೆ ಗಂಭೀರವಾಗಿ ಪರಿಶೀಲನೆ ನಡೆಸಿ ಮುಂದುವರೆದರೆ ನಾವು ಪಾಕಿಸ್ಥಾನವನ್ನು ನಂಬಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಬೇಸರವ ವಿಷಯ:

ಇಷ್ಟೆಲ್ಲಾ ವಿದ್ವಂಸಕ ಕೃತ್ಯಗಳನ್ನು ಪಾಕ್ ಉಗ್ರರು ನಿರಂತರವಾಗಿ ನಡೆಸುತ್ತಿದ್ದರೂ ಶಾಂತಿ-ಸಂಧಾನಗಳ ಬಗ್ಗೆ ಉಪದೇಶ ಮಾಡುವ ಅಮೆರಿಕ ಪಾಕಿಸ್ಥಾನ ಕುರಿತ ತನ್ನ ನಿಲುವನ್ನು ಇನ್ನೂ ಕೂಡ ಬದಲಿಸಿಕೊಂಡಿಲ್ಲ.
ಅಮೆರಿಕ ಪಾಕಿಸ್ಥಾನಕ್ಕೆ ನೀಡುತ್ತಿರುವ ಎಲ್ಲಾ ವಿಧದ ನೆರವುಗಳು ಮತ್ತು ಆ ದೇಶದ ಬಗ್ಗೆ ಹೊಂದಿರುವ ಮೃದು ಧೋರಣೆಯನ್ನು ಬದಲಿಸಿಲ್ಲ. ಆದರೂ ನೆರೆಹೊರೆಯ ಎರಡೂ ರಾಷ್ಟ್ರಗಳು ಸ್ನೇಹ- ಹಾರ್ದತೆಯಿಂದಿರಬೇಕೆಂಬ ಉಪದೇಶವನ್ನು ಮಾತ್ರ ಅಮೆರಿಕ ಮುಂದುವರಿಸುತ್ತಲೇ ಇದೆ. ಇದರ ಅರ್ಥ ಏನು ಎಂಬುದನ್ನು ಅಮೆರಿಕವೇ ಹೇಳಬೇಕು.

Write A Comment