ಕರ್ನಾಟಕ

ಮಾಧ್ಯಮದವರನ್ನು ಕಂಡು ದಿಕ್ಕೆಟ್ಟು ಓಡಿ ಹೋದ ಜಾಧವ್‌!

Pinterest LinkedIn Tumblr

jadavಬೆಂಗಳೂರು: ಸಂಸದರ ನಿಧಿ ಬಳಕೆ ಪರಾಮರ್ಶೆಗೆ ಸಂಬಂಧಿಸಿದ ಸಭೆಗೆ ಗೈರು ಹಾಜರಾಗಿ ಸಂಸದರ ಮುನಿಸಿಗೆ ಕಾರಣರಾದ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್‌ ಅವರು, ಮಾಧ್ಯಮದವರನ್ನು ಕಂಡು ಮಹಡಿ ಮೆಟ್ಟಿಲನ್ನು ಸರಸರನೇ ಏರಿ ಪರಾರಿಯಾದ ಘಟನೆ ಶುಕ್ರವಾರ ನಡೆದಿದೆ.

ಅಷ್ಟೇ ಅಲ್ಲದೆ ಮಾಧ್ಯಮದವರಿಂದ ತಪ್ಪಿಸಿಕೊಳ್ಳಲು ವಿಧಾನಸೌಧದ ಎರಡನೇ ಮಹಡಿಯ ಕಚೇರಿಯೊಂದಕ್ಕೆ ಹೋಗಿ ಚಿಲಕ ಹಾಕಿಕೊಂಡ ಅವರು, ಮಾಧ್ಯಮದವರು ಅಲ್ಲಿಂದ ನಿರ್ಗಮಿಸುವವರೆಗೂ ಹೊರಗೆ ಬಾರದೆ ಸಮಯ ದೂಡಿದ್ದಾರೆ.  ಈ ಪ್ರಸಂಗಕ್ಕೆ ವಿಧಾನಸೌಧದಲ್ಲಿರುವ ಕಚೇರಿಗಳ ಸಿಬ್ಬಂದಿಯೂ ಸಾಕ್ಷಿಯಾಗಿದ್ದಾರೆ.

ಆಗಿದ್ದೇನು?:
ಸಂಸದರ ನಿಧಿ ಬಳಕೆ ಪರಾಮರ್ಶೆ ಸಭೆಗೆ ಮುಖ್ಯ ಕಾರ್ಯದರ್ಶಿ ಗೈರು ಹಾಜರಾದ ಬಗ್ಗೆ ಪ್ರತಿಕ್ರಿಯೆ ಕೇಳಲು ಮಾಧ್ಯಮದವರು ವಿಧಾನಸೌಧದಲ್ಲಿ ಕಾಯುತ್ತಿದ್ದರು.  ಈ ಸಂದರ್ಭದಲ್ಲಿ ಅಡ್ವೋಕೇಟ್‌ ಜನರಲ್‌ ಕಚೇರಿಯಿಂದ ವಿಧಾನಸೌಧಕ್ಕೆ ಆಗಮಿಸಿದ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್‌, ಲಿಫ್ಟ್ ಮೂಲಕ ಮೂರನೇ ಮಹಡಿಗೆ ಬಂದರು. ಅಲ್ಲಿ ಮಾಧ್ಯಮದವರನ್ನು ಕಂಡ ತಕ್ಷಣ ಅಲ್ಲಿಂದ ಕಾಲ್ಕಿತ್ತು ಮತ್ತೆ ಲಿಫ್ಟ್ನೊಳಗೆ ಹೋದರು.

ಅಲ್ಲಿಂದ ಅವರು ಮೊದಲ ಮಹಡಿಗೆ ಆಗಮಿಸಿದರು. ಎಲೆಕ್ಟ್ರಾನಿಕ್‌ ಮಾಧ್ಯಮದ ಕ್ಯಾಮೆರಾಮನ್‌ಗಳು ಒಂದನೇ ಮಹಡಿಗೆ ಬಂದು ಮತ್ತೆ ಬೆನ್ನತ್ತಿದಾಗ ಮಹಡಿಯ ಮೆಟ್ಟಿಲುಗಳನ್ನು ದಡಬಡ ಹತ್ತಿ ಓಡಿ ಹೋದ ಜಾಧವ್‌ ಎರಡನೇ ಮಹಡಿಯ ಕೊಠಡಿಯೊಂದಕ್ಕೆ ಹೋಗಿ ಚಿಲಕ ಹಾಕಿಕೊಂಡರು. ಮಾಧ್ಯಮದವರು ಅಲ್ಲಿಂದ ನಿರ್ಗಮಿಸುವವರೆಗೂ ಹೊರ ಬರಲಿಲ್ಲ.
-ಉದಯವಾಣಿ

Write A Comment