ಕರ್ನಾಟಕ

ಸೈಟ್ ಕೊಡಿಸುವುದಾಗಿ ವಂಚಿಸಿದ್ದವ ಸೆರೆ

Pinterest LinkedIn Tumblr

siteಬೆಂಗಳೂರು: ಆಶ್ರಯ ಯೋಜನೆಯಲ್ಲಿ ನಿವೇಶನ ಕೊಡಿಸುವುದಾಗಿ ನಂಬಿಸಿ ಜನರನ್ನು ವಂಚಿಸಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ನಾಗಮಂಗಲ ಮೂಲದ ಮೂರ್ತಿ ಅಲಿಯಾಸ್ ಆಶ್ರಯ ಮೂರ್ತಿ (40) ಬಂಧಿತ ವ್ಯಕ್ತಿ.

ಆಶ್ರಯ ನಿವೇಶನಗಳಿಗೆ ನಕಲಿ ಹಕ್ಕು ಪತ್ರಗಳನ್ನು ಸೃಷ್ಟಿಸಿದ್ದ ಮೂರ್ತಿ, ತಲಾ 6-8 ಲಕ್ಷ ರೂ.ನಂತೆ ವಸೂಲಿ ಮಾಡಿ ವಂಚಿಸಿದ್ದ. ಅಂದಾಜು 4 ಕೋಟಿ ರೂ. ಸಂಗ್ರಹಿಸಿಕೊಂಡು ತಲೆಮರೆಸಿಕೊಂಡಿದ್ದ.

ಹಾಸನದವರಿಗೆ ವಂಚನೆ: 1975ರಲ್ಲಿ ಆಶ್ರಯ ಯೋಜನೆಯಡಿ ನಿವೇಶನ ಮಂಜೂರು ಆಗಿರುವಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದ ವಂಚಕ, ಹಾಸನ ಮೂಲದ 140 ಮಂದಿಗೆ ನಕಲಿ ಆಶ್ರಯ ನಿವೇಶನ ಮಂಜೂರಾತಿ ಪತ್ರಗಳನ್ನು ನೀಡಿ ಲಕ್ಷಾಂತರ ರೂ. ವಸೂಲಿ ಮಾಡಿದ್ದ. 30 ಲಕ್ಷ ರೂ. ಬೆಲೆ ಬಾಳುವ ನಿವೇಶನವನ್ನು ಆಶ್ರಯ ಯೋಜನೆಯಡಿ 8 ಲಕ್ಷಕ್ಕೆ ನೀಡುತ್ತಿರುವುದಾಗಿ ನಂಬಿಸಿ ಒಂದೇ ದಿನ ಟೆಂಪೋದಲ್ಲಿ 40 ಮಂದಿಯನ್ನು ಕರೆಸಿ ವಂಚಿಸಲಾಗಿತ್ತು.

ನಕಲಿ ಮಂಜೂರಾತಿ ಪತ್ರಗಳನ್ನೇ ನೀಡಿ ವಿಜಯನಗರ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸಲಾಗಿದೆ. ಆದರೆ, ಆಶ್ರಯ ಯೋಜನೆ ಹೆಸರಿನಲ್ಲಿ ನಕಲಿ ಮಂಜೂರಾತಿ ಆದೇಶಗಳಲ್ಲಿ ಉಲ್ಲೇಖಿಸಿರುವ ಭೂಮಿ ಸರ್ಕಾರಿ ಗೋಮಾಳಕ್ಕೆ ಸೇರಿದೆ. ಯಶವಂತಪುರ ಹೋಬಳಿ ಗಿಡದ

ಕೋನೇನಹಳ್ಳಿ ಸರ್ವೆ ನಂ 38, 39ನ್ನು ಉಲ್ಲೇಖಿಸಿ ಮಂಜೂರಾತಿ ಪತ್ರ ನೀಡಿ ವಂಚಿಸಲಾಗಿದೆ ಎಂದು ದೂರುದಾರರು ವಿಜಯವಾಣಿಗೆ ತಿಳಿಸಿದ್ದಾರೆ.

ಅಲ್ಲದೆ ಆಶ್ರಯ ಯೋಜನೆಯಡಿ ಮಂಜೂರು ಮಾಡುವ ನಿವೇಶನದ ಅಳತೆ 20/30 ಅಡಿ. ಆದರೆ ವಂಚಕ ಮೂರ್ತಿ 30/40 ಅಡಿ ವಿಸ್ತೀರ್ಣ ಉಲ್ಲೇಖಿಸಿ ನೋಂದಣಿ ಮಾಡಿಸಿದ್ದ ಎನ್ನಲಾಗಿದೆ. ವಂಚಕ ಮೂರ್ತಿ ವಿರುದ್ಧ ಇಳಂಗೋವನ್

ಮತ್ತು ಶ್ರೀಧರ್ ಎಂಬುವರು ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು. ಕೇಸು ದಾಖಲಿಸಿಕೊಂಡಿದ್ದ ವಿಜಯನಗರ ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದರು. 10 ತಿಂಗಳ ಬಳಿಕ ಆರೋಪಿ ಮೂರ್ತಿ ಇನ್ಸ್​ಪೆಕ್ಟರ್ ವಿರೂಪಾಕ್ಷಪ್ಪ ನೇತೃತ್ವದ ಪೊಲೀಸ್ ತಂಡದ ಬಲೆಗೆ ಬಿದ್ದಿದ್ದಾನೆ. ಆತನನ್ನು ವಿಚಾರಣೆಗೆ ಗುರಿಪಡಿಸಿರುವ ಪೊಲೀಸರು, ವಂಚನೆಯಲ್ಲಿ ಶಾಮೀಲಾಗಿರುವ ಇತರರ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ವಂಚಕ ಆಶ್ರಯ ಮೂರ್ತಿಯಿಂದ ವಂಚನೆಗೆ ಒಳಗಾದವರು ಠಾಣೆಗೆ ದೂರು ನೀಡುವಂತೆ ಸಿಸಿಬಿಯ ವಂಚನೆ ವಿಭಾಗದ ಪೊಲೀಸರು ತಿಳಿಸಿದ್ದಾರೆ.

ಅಧಿಕಾರಿಗಳೂ ಶಾಮೀಲು?

ಉಪ ನೋಂದಣಾಧಿಕಾರಿಗಳಿಗೆ ಅನುಮಾನ ಬಾರದಂತೆ ಮೂರ್ತಿ ನಿವೇಶನ ಮಂಜೂರಾತಿ ಪತ್ರಗಳನ್ನು ಸೃಷ್ಟಿಸಿದ್ದ ಎನ್ನಲಾಗಿದೆ. ಹೀಗಾಗಿ ಬಹುತೇಕ ನಿವೇಶನಗಳ ಮಂಜೂರಾತಿ ಪತ್ರಗಳನ್ನೇ ಆಧಾರವಾಗಿಟ್ಟುಕೊಂಡು ಉಪ ನೋಂದಣಾಧಿಕಾರಿ ನೋಂದಣಿ ಮಾಡಿಸಿದ್ದಾರೆ. ಬೆಂಗಳೂರು ನಿವಾಸಿಗಳು ಎಂಬುದಕ್ಕೆ ಗುರುತಿನ ಚೀಟಿಗಳನ್ನು ಪಡೆಯದೇ ನೋಂದಣಿ ಮಾಡಿಸಿರುವುದು ಅನುಮಾನಕ್ಕೆ

ಎಡೆ ಮಾಡಿಕೊಟ್ಟಿದೆ. ನೋಂದಣಿ ಮಾಡಿರುವ ಅಧಿಕಾರಿಗಳು ಈಗಾಗಲೇ ಸೇವೆಯಿಂದ ನಿವೃತ್ತರಾಗಿದ್ದು, ಈ ಕೃತ್ಯದಲ್ಲಿ ಶಾಮೀಲಾಗಿದ್ದಾರೆಯೇ ಎಂಬ ಅನುಮಾನ ಹುಟ್ಟಿಕೊಂಡಿದೆ.

Write A Comment