ಮಂಗಳೂರು, ಜ.09 : ಕರ್ನಾಟಕ ಜರ್ನಲಿಸ್ಟ್ ಯೂನಿಯನ್‌ನ ( (ಕರ್ನಾಟಕ ಪತ್ರಕರ್ತರ ಸಂಘ) ದ.ಕ. ಜಿಲ್ಲಾ ಘಟಕ ಮತ್ತು ದ.ಕ. ಜಿಲ್ಲಾಡಳಿತದ ಸಹಯೋಗದಲ್ಲಿ ‘ಶಾಂತಿ ಸೌಹಾರ್ದ ಅದಾಲತ್’ ಕಾರ್ಯಕ್ರಮ ಶನಿವಾರ ನಗರದ ಕೆ.ಎಸ್.ರಾವ್ ರಸ್ತೆಯ ಎಸ್.ಸಿ.ಡಿ.ಸಿ.ಸಿ ಬ್ಯಾಂಕಿನ ಸಭಾಭವನದಲ್ಲಿ ಜರಗಿತ್ತು.
ಕಾರ್ಯಕ್ರಮವನ್ನು ಜಸ್ಟಿಸ್ ವಿಶ್ವನಾಥ ಶೆಟ್ಟಿ (ಉಚ್ಛನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು) ಯವರು ಉದ್ಘಾಟಿಸಿದರು. ಈ ಅದಾಲತ್ ಕಾರ್ಯಕ್ರಮದಲ್ಲಿನ ನ್ಯಾಯ ಸ್ಥಾನವನ್ನು ಅಲಂಕರಿಸಿ,,ಶಾಂತಿ- ಸೌಹಾರ್ದ ಅದಾಲತ್ ಸಮಾರೋಪ ಸಂದೇಶ ನೀಡಿದ ಅವರು, ಪರಸ್ಪರ ನಂಬಿಕೆಯ ಸಹಬಾಳ್ವೆಯೇ ಶಾಂತಿ ಸೌಹಾರ್ದದ ಸಮಾಜದ ಮೂಲದ್ರವ್ಯ, ಸಮಾಜವನ್ನು ಕಟ್ಟುವುದು, ಇನ್ನೊಬ್ಬರನ್ನು ಗೌರವಿಸುವುದೇ ಈ ಸೌಹಾರ್ದದ ಆಶಯ ಎಂದು ಹೇಳಿದರು. ಇಂಥಹ ಕಾರ್ಯಕ್ರಮವನ್ನು ಅಯೋಜಿಸದ ಸಂಘಟನೆಯನ್ನು ಅಭಿನಂದಿಸುವುದಾಗಿ ಅವರು ಹೇಳಿದರು.
ಧರ್ಮದ ಗುರುಗಳಾದ ಸಂತೋಷ್ ಗುರೂಜಿ, ಮಂಗಳೂರು ಖಾಜೀಯವರಾದ ಹಾಜಿ ತ್ವಾಕಾ ಅಹಮ್ಮದ್ ಮುಸ್ಲಿಯಾರ್ ಹಾಗೂ ಧರ್ಮ ಪಂಡಿತರಾದ ಡಾ. ಬ್ರದರ್ ಆಂಡ್ರೋ ರಿಚರ್ಡ್ ರವರು ತಮ್ಮ ತಮ್ಮ ಧರ್ಮದ ಬಗ್ಗೆ ಸಂದೇಶ ನೀಡಿದರು.
ಪ್ರತಿಯೊಂದು ಧಾರ್ಮಿಕ ಕೇಂದ್ರಗಳು ಜನರಿಗೆ ಶಾಂತಿ ಹಾಗೂ ಸಹಿಷ್ಣುತೆಯನ್ನು ಕಾಪಾಡುವ ಕುರಿತು ಬೋಧಿಸಬೇಕು. ಧಾರ್ಮಿಕ ನಾಯಕರು ಜನರನ್ನು ಉತ್ತಮ ಪಥದತ್ತ ಸಾಗಲು ಮಾರ್ಗದರ್ಶನ ತೋರಬೇಕು ಎಂದು ಮಂಗಳೂರು ಖಾಝಿ ಹಾಜಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಹೇಳಿದರು.
ಬಾರ್ಕೂರು ಮಹಾಸಂಸ್ಥಾನದ ವಿದ್ಯಾವಾಚಸ್ಪತಿ ಡಾ. ವಿಶ್ವ ಸಂತೋಷ್ ಭಾರತಿ ಶ್ರೀಪಾದರು ಮಾತನಾಡಿ, ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಧರ್ಮದಲ್ಲಿ ಶಾಂತಿ ಹಾಗೂ ಸೌಹಾರ್ದತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಇನ್ನೊಬ್ಬರಿಗೆ ನೋವುಂಟು ಮಾಡುವುದನ್ನು ಯಾವ ಧರ್ಮವೂ ಸಹಿಸುವುದಿಲ್ಲ ಎಂದರು.
ಜನರು ಕೆಲವೊಂದು ವಿಚಾರಗಳಲ್ಲಿ ಜನರು ತಮ್ಮ ಪರಿಧಿಗಳನ್ನು ಮೀರಿ ವರ್ತಿಸುತ್ತಿದ್ದಾರೆ. ನಾವು ಶಾಂತಿ, ಕರುಣೆಯಿಂದ ಸ್ಪಂದಿಸಿ ಎಲ್ಲರನ್ನೂ ಸಮಾನವಾಗಿ ಗೌರವಿಸಬೇಕು ಎಂದು ಗ್ರೇಸ್ ಮಿನಿಸ್ಟ್ರಿಯ ಸ್ಥಾಪಕ ಬ್ರದರ್ ಡಾ.ಜಿ. ಆಂಡ್ರ್ಯೂ ರಿಚರ್ಡ್ ಹೇಳಿದರು.
ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಮಾತನಾಡಿ, ಜಿಲ್ಲೆಯಲ್ಲಿ ಶಾಂತಿ, ಸೌಹಾರ್ದತೆ ಕಾಪಾಡುವ ದೃಷ್ಠಿಯಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ನ ದ.ಕ. ಜಿಲ್ಲಾ ಘಟಕ ಶಾಂತಿ- ಸೌಹಾರ್ದ ಅದಾಲತ್ ಅನ್ನು ಆಯೋಜಿಸಿರುವುದು ಅಭಿನಂದನೀಯ ಎಂದು ಹೇಳಿದರು.
ಸ್ವಾಗತಿಸಿ, ಪ್ರಸ್ತಾವನೆಗೈದ ಕರ್ನಾಟಕ ಜರ್ನಲಿಸ್ಟ್ ಯೂನಿಯನ್‌ನ ಅಧ್ಯಕ್ಷ ಸುದೇಶ್ ಕುಮಾರ್, ದಕ್ಷಿಣ ಕನ್ನಡದ ಜಿಲ್ಲೆಯಲ್ಲಿ ಪದೇ ಪದೇ ನಡೆಯುತ್ತಿರೋ ಮತೀಯ ಗಲಭೆಯಿಂದಾಗಿ ವಿವಿಧ ರೂಪದಲ್ಲಿ ನಾವು ನಷ್ಟ ಅನುಭವಿಸುತ್ತಿದ್ದೇವೆ. ಈ ಜಿಲ್ಲೆಯಲ್ಲಿ ಪ್ರಮುಖವಾಗಿ ನಾಲ್ಕು ಧರ್ಮ ಹಾಗೂ ವಿವಿಧ ಸಮುದಾಯಕ್ಕೆ ಸೇರಿದ ಜನರು ತಮ್ಮ ಭವಿಷ್ಯ ರೂಪಿಸಿ ಕೊಳ್ಳುತ್ತಿದ್ದಾರೆ.
ಬೆರಳೆಣಿಕೆಯ ಸಂಖ್ಯೆಯಲ್ಲಿರುವ ಕಿಡಿಗೇಡಿಗಳ ಕೃತ್ಯದಿಂದಾಗಿ ದೊಡ್ಡ ಪ್ರಮಾಣದಲ್ಲಿ ನೋವುಣ್ಣುವಂತಾಗ್ತಿದೆ. ಭಾವನಾತ್ಮಕ ವಿಚಾರವನ್ನು ಇಟ್ಟುಕೊಂಡು ಕಿಚ್ಚು ಹೊಚ್ಚುತ್ತಿರುವ ಅ ಬೆರಳೆಣಿಕೆಯ ಜನರ ಮನಸ್ಥಿತಿಯನ್ನು ಹಂತ ಹಂತವಾಗಿ ಬದಲಾಯಿಸಬಹುದಾಗಿದೆ. ಜೊತೆಗೆ ಈ ವಿಚಾರವನ್ನು ಜಿಲ್ಲೆಯ ಕೊನೆಯ ಹಂತದವರೆಗೆ ತಲುಪಿಸಬೇಕಾಗಿದೆ.
ಈ ನಿಟ್ಟಿನಲ್ಲಿ ‘ಶಾಂತಿ ಸೌಹಾರ್ದ ಅದಾಲತ್’ ಎಂಬ ಸಾಮಾಜಿಕ ಕಳಕಳಿ ಹೊಂದಿರುವ ಈ ಕಾರ್ಯಕ್ರಮವನ್ನುಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಧರ್ಮ ಹಾಗು ಜಾತಿಯ ಮದ್ಯೆ ದೊಡ್ಡ ಕಂದಕವನ್ನು ಕೃತಕವಾಗಿ ನಿರ್ಮಿಸಲಾಗಿದೆ. ಅದನ್ನು ಮುಚ್ಚುವ ಕಾರ್ಯ ಜರುರಾಗಿ ಆಗಲೇಬೇಕು. ಅದೇ ಕಾರ್ಯವನ್ನು ನಾವೆಲ್ಲರೂ ಸೇರಿ ಕೈಗೆತ್ತಿಕೊಳ್ಳುವುದರ ಮೊದಲ ಹೆಜ್ಜೆಯೇ ಈ ಕಾಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು.
ಶಾಸಕ ಜೆ.ಆರ್. ಲೋಬೋ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಎಸ್ಪಿ ಡಾ.ಶರಣಪ್ಪ ಎಸ್.ಡಿ., ಡಿಸಿಪಿ ಶಾಂತರಾಜು, ಎಎಸ್ಪಿ ರಾಹುಲ್ ಕುಮಾರ್, ಕರ್ನಾಟಕ ಜರ್ನಲಿಸ್ಟ್ ಯೂನಿಯನ್‌ನ ಅಧ್ಯಕ್ಷ ಸುದೇಶ್ ಕುಮಾರ್, ಉಪಾಧ್ಯಕ್ಷ ಡಾ.ಶಿವಶರಣ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸತೀಶ್ ಕಾಪಿಕಾಡ್ ಮುಂತಾದವರು ಉಪಸ್ಥಿತರಿದ್ದರು.
ಎಲ್ಲಾ ಸಮುದಾಯದ ಒಬ್ಬೊಬ್ಬ ಮುಖಂಡರು, ಜಿಲ್ಲೆಯಲ್ಲಿನ ಬಹುತೇಕ ಸಂಘಸಂಸ್ಥೆಗಳ ಅಧ್ಯಕ್ಷರು ಅಥವಾ ಅವರು ಸೂಚಿಸಿದ ವ್ಯಕಿ, ಸಾಹಿತಿಗಳು, ಬುದ್ಧಿಜೀವಿಗಳು, ಜನಪ್ರತಿನಿಧಿಗಳು, ಅಧಿಕಾರಿಗಳು, ಉದ್ಯಮಿಗಳು, ಕೈಗಾರಿಕೋದ್ಯಮಿಗಳು, ಮಹಿಳಾ ನಾಯಕಿಯರು, ವಿದ್ಯಾರ್ಥಿ ನಾಯಕರು, ನ್ಯಾಯವಾದಿಗಳು, ಹಿರಿಯರು ಹಾಗೂ ಜಿಲ್ಲೆಯ ಹಿರಿಯ, ಕಿರಿಯ ಪತ್ರಕರ್ತರೂ ಸೇರಿದಂತೆ ಸಮಜದ ವಿವಿದ ವಿಭಾಗದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಎಸ್.ಡಿ.ಎಮ್ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ.ತಾರಾನಾಥ ಅವರು ಅದಾಲತ್‌ನ ಕಲಾಪ ನಡೆಸಿ ಕೊಟ್ಟರು. ಸೌಜನ್ಯ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.