ಕರ್ನಾಟಕ

ಚಿನ್ನಾಭರಣ ಅಂಗಡಿಯಲ್ಲಿ 1.19 ಕೋಟಿ ಹವಾಲ ಹಣ ವಶ : 13 ಜನರ ಬಂಧನ

Pinterest LinkedIn Tumblr

chinnaಬೆಂಗಳೂರು,ಜ.10-ಚಿನ್ನಾಭರಣ ಅಂಗಡಿಯೊಂದರ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಮಾಲೀಕ ಸೇರಿದಂತೆ 13 ಜನರನ್ನು ಬಂಧಿಸಿ,  1.19 ಕೋಟಿ ಹವಾಲ ಹಣವನ್ನು ವಶಪಡಿಸಿಕೊಂಡಿದ್ದಾರೆ.

ಮೂಲತಃ ರಾಜಾಸ್ಥಾನದವರಾದ ಶ್ರೀರಾಮಪುರ ವಾಸಿ ಆರ್.ಧರ್ಮೇಂದರ್ (42), ನಗರ್ತಪೇಟೆಯ ಚಂಪಾಲಾಲ್ (30), ಮಹದೇವ್ ಗುಜ್ಜಾರ್ (22), ಜೀತೂ ಸಿಂಗ್ (18), ಚಿತ್ರದುರ್ಗದ ವಿಕ್ರಮ್ (21), ಬೆಂಗಳೂರಿನ ಹೆಗ್ಗನಹಳ್ಳಿಯ ಅರುಣ್‌ಕುಮಾರ್ (36), ಲಗ್ಗೆರೆಯ ಪ್ರಕಾಶ್ (30), ಹನುಮಂತನಗರದ ದಿನೇಶ್ (46), ಕಾಮಾಕ್ಷಿಪಾಳ್ಯದ ಪುರುಷೋತ್ತಮ್ (45), ತ್ಯಾಗರಾಜನಗರದ ಸುನಿಲ್ (42), ಅವಿನ್ಯೂ ರಸ್ತೆಯ ಭಗವಾನ್ (30), ಕಬ್ಬನ್‌ಪೇಟೆಯ ಕುನಾಲ್‌ಸಿಂಗಿ (34) ಮತ್ತು ಚಿಕ್ಕಬಳ್ಳಾಪುರದ ಗೋಪಾಲ್ (36) ಬಂಧಿತರು.

ಹವಾಲ ಹಣ ಸಂಗ್ರಹಣೆ ಮಾಡಿ ವಹಿವಾಟು ನಡೆಸುತ್ತಿರುವ ಖಚಿತ ಮಾಹಿತಿ ಮೇರೆಗೆ ನಗರ್ತಪೇಟೆಯ ಚಿನ್ನಾಭರಣ ಅಂಗಡಿಯೊಂದರ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.

ಈ ವೇಳೆ ಪೊಲೀಸರು ಅಲ್ಲಿದ್ದ 13 ಜನರನ್ನು ಬಂಧಿಸಿ, 1.19 ಕೋಟಿ ಹವಾಲ ಹಣ, 16 ಮೊಬೈಲ್, ಎರಡು ನೋಟು ಎಣಿಸುವ ಯಂತ್ರ, ಕಂಪ್ಯೂಟರ್ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಹೆಚ್ಚುವರಿ ಪೊಲೀಸ್ ಆಯುಕ್ತ ಕೆ.ವಿ.ಶರತ್‌ಚಂದ್ರ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.  ಪ್ರಕರಣ ಸಂಬಂಧ ಇನ್ನೂ ಕೆಲವು ಆರೋಪಿಗಳು ತಲೆ ಮರೆಸಿಕೊಂಡಿದ್ದು, ಅವರಿಗಾಗಿ ಶೋಧ ಮುಂದುವರೆದಿದೆ. ಈ ಸಂಬಂಧ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.

Write A Comment