ಕರ್ನಾಟಕ

ಸರಗಳ್ಳತನ ಹೆಸರಲ್ಲಿ ದಾಖಲಾಗಿದ್ದ ಬ್ಲ್ಯಾಕ್‌ಮೇಲ್ ಪ್ರಕರಣಗಳು!: ಮಹಿಳೆಯರ ಚಿನ್ನಾಭರಣ ದೋಚುತ್ತಿದ್ದವನ ಬಂಧನ

Pinterest LinkedIn Tumblr

Ganeshaಬೆಂಗಳೂರು: ಮಹಿಳೆಯರ ಚಿತ್ರಗಳನ್ನು ಮೊಬೈಲ್‌ನಲ್ಲಿ ರಹಸ್ಯವಾಗಿ ಸೆರೆ ಹಿಡಿದು, ಆನಂತರ ಅವರನ್ನು ಬ್ಲ್ಯಾಕ್‌ಮೇಲ್ ಮಾಡಿ ಚಿನ್ನಾಭರಣ ದೋಚುತ್ತಿದ್ದ ಗಣೇಶ (29) ಎಂಬಾತನನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತನಿಂದ ₹ 9 ಲಕ್ಷ ಮೌಲ್ಯದ 341 ಗ್ರಾಂ ಚಿನ್ನಾಭರಣ  ಜಪ್ತಿ ಮಾಡಲಾಗಿದೆ. ಒಟ್ಟು 11 ಪ್ರಕರಣಗಳು ಪತ್ತೆಯಾಗಿದ್ದು, ಆತ ದೋಚಿದ ಆಭರಣಗಳನ್ನು ಪಡೆದು, ಹಣ ಕೊಡುತ್ತಿದ್ದ ಲಿಕ್ಮಾರಾಮ್‌ ಅಲಿಯಾಸ್ ಲಕ್ಷ್ಮಣ್‌ನನ್ನು (43) ಸಹ ಬಂಧಿಸಲಾಗಿದೆ.

ಕುಂದಾಪುರದವನಾದ ಆರೋಪಿ, 6ನೇ ತರಗತಿವರೆಗೆ ಓದಿದ್ದು, ಏಳೆಂಟು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದಾನೆ. ಸುಬ್ರಮಣ್ಯಪುರದ ಹರಿನಗರದಲ್ಲಿ ವಾಸವಾಗಿದ್ದ ಈತ, ಹೋಟೆಲ್‌ವೊಂದರಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದಾನೆ.

‘ಉದ್ಯಾನಗಳಲ್ಲಿ ಹಗಲೆಲ್ಲಾ  ಅಡ್ಡಾಡುತ್ತಿದ್ದ ಆರೋಪಿ, ಚಿನ್ನಾಭರಣ ಧರಿಸಿ ಬರುವ ಮಹಿಳೆಯರ ಮೇಲೆ ನಿಗಾ ಇಡುತ್ತಿದ್ದ. ಅಲ್ಲದೆ, ಈ ಪೈಕಿ ಪರ ಪುರುಷರನ್ನು ಭೇಟಿ ಮಾಡಿ ಅನುಚಿತವಾಗಿ ವರ್ತಿಸುವ ದೃಶ್ಯಗಳನ್ನು ಗೊತ್ತಾಗದಂತೆ ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿದ್ದ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಬಿ.ಎಸ್‌. ಲೋಕೇಶ್ ಕುಮಾರ್  ತಿಳಿಸಿದರು.

‘ನಂತರ ಮಹಿಳೆಯರು ಅಲ್ಲಿಂದ ಮನೆಗೆ ಹೋಗುವಾಗ, ಹಿಂಬಾಲಿಸಿಕೊಂಡು ಬಂದು ತಾನು ಸೆರೆ ಹಿಡಿದ ಚಿತ್ರಗಳನ್ನು ಅವರಿಗೆ ತೋರಿಸುತ್ತಿದ್ದ. ನಂತರ ಮೈಮೇಲಿರುವ ಒಡವೆಗಳನ್ನು ನೀಡದಿದ್ದರೆ, ಈ ಚಿತ್ರಗಳನ್ನು ಪತಿ ಅಥವಾ ಮನೆಯವರಿಗೆ  ತೋರಿಸುವುದಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ’ ಎಂದು ಅವರು ಹೇಳಿದರು.

‘ಮರ್ಯಾದೆಗೆ ಅಂಜಿ ಭಯಗೊಳ್ಳುತ್ತಿದ್ದ ಮಹಿಳೆಯರು, ತಮ್ಮ ಒಡವೆಗಳನ್ನು ಆತನಿಗೆ ಕೊಟ್ಟು, ಮೊಬೈಲ್‌ ಚಿತ್ರಗಳನ್ನು ಡಿಲಿಟ್ ಮಾಡುವಂತೆ ಕೋರುತ್ತಿದ್ದರು’ ಎಂದು  ಮಾಹಿತಿ ನೀಡಿದರು.

‘ಆರೋಪಿ ಕಳೆದ ಒಂದೂವರೆ ವರ್ಷದಿಂದ ಜಯನಗರ, ಬಸವನಗುಡಿ, ಬನಶಂಕರಿ, ತ್ಯಾಗರಾಜನಗರ, ಗಿರಿನಗರ, ಸುಬ್ರಹ್ಮಣ್ಯನಗರ, ರಾಜರಾಜೇಶ್ವರಿನಗರ ಹಾಗೂ ಕುಮಾರಸ್ವಾಮಿ ಲೇಔಟ್‌ ಠಾಣೆ ವ್ಯಾಪ್ತಿಯ 11 ಮಹಿಳೆಯರಿಗೆ ಇದೇ ರೀತಿ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. ಈ ಪೈಕಿ ಕೆಲವರಿಗೆ ಪೊಲೀಸ್ ಅಧಿಕಾರಿ ಎಂತಲೂ ಬೆದರಿಸಿದ್ದಾನೆ’ ಎಂದು ಅವರು ವಿವರಿಸಿದರು.

ಆಗಿದ್ದು ಬ್ಲ್ಯಾಕ್‌ಮೇಲ್, ದಾಖಲಾಗಿದ್ದು ಬೇರೆ: ‘ಆರೋಪಿಯಿಂದ ಬ್ಲ್ಯಾಕ್‌ಮೇಲ್‌ಗೆ ಒಳಗಾದ ಬಹುತೇಕ ಮಹಿಳೆಯರು ತಮ್ಮ ವ್ಯಾಪ್ತಿಯ ಠಾಣೆಗಳಲ್ಲಿ ಬ್ಲ್ಯಾಕ್‌ಮೇಲ್ ಬದಲಿಗೆ ಸರಗಳ್ಳತನ ಮತ್ತು ಕಳ್ಳತನ ಆರೋಪದ ದೂರುಗಳನ್ನು ದಾಖಲಿಸಿದ್ದರು. ಆದರೆ, ಅವರು ಕೊಟ್ಟಿದ್ದ ದೂರು ಮತ್ತು ಹೇಳಿಕೆಗಳು ಗೊಂದಲದಿಂದ ಕೂಡಿದ್ದವು. ಅನುಮಾನಗೊಂಡು ವಿಚಾರಿಸಿದಾಗ, ದೂರಿನ ನಿಜ ಕಾರಣ ಗೊತ್ತಾಯಿತು’ ಎಂದು ಹೇಳಿದರು.

‘ಹಣದ ಅವಶ್ಯಕತೆ ಇದ್ದಾಗಲೆಲ್ಲ ಕೃತ್ಯ ಎಸಗುತ್ತಿದ್ದ ಆರೋಪಿ, 30ಕ್ಕೂ ಹೆಚ್ಚು ಸಿಮ್‌ಕಾರ್ಡ್‌ಗಳನ್ನು ಬಳಸುತ್ತಿದ್ದ. ಆತನ ಬೆನ್ನತ್ತಿದ್ದ ತಂಡಕ್ಕೆ ಕೆಲ ಮೊಬೈಲ್ ಸಂಖ್ಯೆಗಳು ಸಿಕ್ಕಿದವು. ಬಳಿಕ ಕರೆಗಳ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಲಾಯಿತು’ ಎಂದು ಅವರು ಮಾಹಿತಿ ನೀಡಿದರು.

ಆರೋಪಿ ಬ್ಲ್ಯಾಕ್‌ಮೇಲ್‌ಗೆ ಒಳಗಾಗಿದ್ದೇ ಪ್ರೇರಣೆ!
ಆರೋಪಿ ಒಂದೂವರೆ ವರ್ಷದ ಹಿಂದೆ ಯುವತಿಯೊಬ್ಬಳನ್ನು ಕಬ್ಬನ್‌ ಉದ್ಯಾನಕ್ಕೆ ಕರೆದೊಯ್ದು ಅಸಭ್ಯವಾಗಿ ವರ್ತಿಸಿದ್ದ. ಈ ದೃಶ್ಯಗಳನ್ನು ಮೊಬೈಲ್‌ನಲ್ಲಿ ಗೊತ್ತಾಗದಂತೆ ಸೆರೆ ಹಿಡಿದಿದ್ದ ಇಬ್ಬರು ಯುವಕರು, ಬಳಿಕ ಆ ಚಿತ್ರಗಳನ್ನು ತೋರಿಸಿ ಬ್ಲ್ಯಾಕ್‌ಮೇಲ್ ಮಾಡಿ, ಅವರಲ್ಲಿದ್ದ ಸರ ಮತ್ತು ಉಂಗುರಗಳನ್ನು ದೋಚಿದ್ದರು ಎಂದು ಪೊಲೀಸರು ಹೇಳಿದರು.

ಘಟನೆಯಿಂದ ಬುದ್ಧಿ ಕಲಿಯದ ಆತ, ತಾನೂ ಕೂಡ ಇದೇ ರೀತಿ ಬ್ಲ್ಯಾಕ್‌ಮೇಲ್ ಮಾಡಿ ಸುಲಭವಾಗಿ ಹಣ ಸಂಪಾದಿಸಬಹುದು ಎಂದುಕೊಂಡು, ಕೃತ್ಯಕ್ಕೆ ಕೈ ಹಾಕಿದ್ದ. ಹೋಟೆಲ್‌ ಕೆಲಸದ ಮಧ್ಯೆ ಬಿಡುವು ಮಾಡಿಕೊಂಡು ಕೃತ್ಯಗಳನ್ನು ಎಸಗುತ್ತಿದ್ದ ಎಂದು ತಿಳಿಸಿದರು. ಆರೋಪಿಗೆ ಇಬ್ಬರು ಪತ್ನಿಯರಿದ್ದು, ಮೂವರು ಮಕ್ಕಳಿದ್ದಾರೆ. ಈ ಪೈಕಿ ಒಬ್ಬಾಕೆಯನ್ನು ತನ್ನ ಸ್ವಂತ ಊರಿನಲ್ಲಿ ಬಿಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.

Write A Comment