Messages

ಬೆಂಡೆ ಬೆಳೆಯ ಪ್ರಮುಖ ರೋಗಗಳು ಹಾಗೂ ಕೀಟಗಳು

Pinterest LinkedIn Tumblr
Ladys_fingar_photo
ಮ೦ಗಳೂರು ಜ.12: ಬೆಂಡೆ ಬೆಳೆಗೆ ಪ್ರಮುಖವಾಗಿ ಬರುವ ರೋಗಗಳು ಈ ರೀತಿ ಇವೆ
1. ಹಳದಿ ನಂಜು ರೋಗ: ರೋಗಕ್ಕೆ ತುತ್ತಾದ ಗಿಡದಲ್ಲಿ ಎಲೆಗಳು ಹಳದಿ ಬಣ್ಣದಿಂದ ಕೂಡಿದ್ದು ಕ್ರಮೇಣ ಪೂರ್ತಿ ಗಿಡ ಹಳದಿ ಬಣ್ಣಕ್ಕೆ ತಿರುಗುತ್ತದೆ, ಇದರಿಂದ ಗಿಡದ ಬೆಳವಣಿಗೆ ಕುಂಠಿತಗೊಂಡು ಇಳುವರಿ ಕಡಿಮೆಯಾಗುತ್ತದೆ.
ಹತೋಟಿ ಕ್ರಮ: ರೋಗ ಬಾಧಿತ ಗಿಡಗಳನ್ನು ಕಿತ್ತು ನಾಶಪಡಿಸಿ 1.7 ಮಿ.ಲೀ. ಡೈಮಿಥೋಯೆಟ್ ಅಥವಾ 0.25 ಮಿಲಿ ಇಮಿಡಾಕ್ಲೋಪ್ರಿಡ್ ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪಡಿಸಬೇಕು. ರೋಗವನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾದ್ಯವಾಗದಿದ್ದಲ್ಲಿ 15 ದಿವಸಗಳ ನಂತರ ಇದೇ ಸಿಂಪರಣೆಯನ್ನು ಪುನರಾವರ್ತಿಸಬೇಕು.
2. ಬೂದಿರೋಗ: ಎಲೆಗಳ ಮೇಲೆ ಬಿಳಿ ಶಿಲೀಂಧ್ರ ಬೆಳವಣಿಗೆ ಕಂಡು ಬರುತ್ತದೆ. ರೋಗದ ತೀವ್ರತೆ ಹೆಚ್ಚಾದಾಗ ಎಲೆಗಳು ಒಣಗುತ್ತವೆ.
ಹತೋಟಿ ಕ್ರಮ: ಬೂದು ರೋಗ ಕಂಡು ಬಂದಲ್ಲಿ 1 ಮಿ.ಲೀ. ಡೈಪೆನ್‌ಕೊನಾಜೋಲ್ ಪ್ರತಿ ಲೀಟರ್ ನೀರಿಗೆ ಸೇರಿಸಿ    15 ದಿನಗಳಿಗೊಮ್ಮೆ 3 ಸಲ ಸಿಂಪಡಿಸಬೇಕು.
3. ಎಲೆ ಚುಕ್ಕೆ ರೋಗ: ವೃತ್ತಾಕಾರದ ಮತ್ತು ಉಂಗುರಾಕಾರದ ಚುಕ್ಕೆಗಳು ಕಾಣಿಸುತ್ತವೆ. ಆಮೇಲೆ ಒಂದಕ್ಕೊಂದು ಸೇರಿಕೊಂಡು ಎಲೆಗಳು ಒಣಗುತ್ತವೆ.
ಹತೋಟಿ ಕ್ರಮ: ಎಲೆ ಚುಕ್ಕೆ ರೋಗ ಕಂಡು ಬಂದಲ್ಲಿ 1 ಗ್ರಾಂ ಕಾರ್ಬಂಡೈಜಿಮ್ ಪ್ರತಿ ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಿಸಬೇಕು. 15 ದಿನಗಳ ನಂತರ ಇದೇ ಸಿಂಪರಣೆಯನ್ನು ಪನರಾವರ್ತಿಸಿ.
ಕೀಟಗಳು: 
ಜಿಗಿ ಹುಳು: ಗಿಡಗಳು ಚಿಕ್ಕದಿರುವಾಗ ಜಾಸ್ತಿ ರಸ ಹೀರುವುದರಿಂದ ಎಲೆಗಳು ಅಂಚಿನಿಂದ ಮೇಲಕ್ಕೆ ಮುದುಡಿ, ಎಲೆಗಳ ಅಂಚು ಕೆಂಪಾಗುತ್ತವೆ. ಇಂತಹ ಎಲೆಗಳು ಕ್ರಮೇಣ ಒಣಗುತ್ತವೆ. ಕೆಂಪು ಹತ್ತಿ ತಿಗಣೆ: ಅಪ್ಸರೆ ಮತ್ತು ಪ್ರೌಢ ಕೀಟಗಳು ಕಾಯಿಗಳಿಂದ ರಸವನ್ನು ಹೀರುತ್ತವೆ. ಈ ತಿಗಣೆಗಳು ಕೆಂಪು ಬಣ್ಣದಿಂದ ಕೂಡಿರುತ್ತವೆ. ಬಾಧೆಗೊಳಗಾದ ಕಾಯಿಗಳು ಆಕೃತಿ ಕಳೆದುಕೊಳ್ಳುತ್ತವೆ. ಹೇನು: ಹೇನುಗಳು ಎಲೆಗಳಿಂದ ರಸವನ್ನು ಹೀರುತ್ತವೆ. ಇಂತಹ ಎಲೆಗಳು ಮುರುಟಾಗಿ ಅಂಟು ಪದಾರ್ಥ ಸ್ರವಿಸುವುದರಿಂದ ಕಪ್ಪು ಬೂಷ್ಟ ಬೆಳವಣಿಗೆ ಆಗುತ್ತದೆ. ಹತೋಟಿ ಕ್ರಮ: ಬಿತ್ತನೆಯಾದ 2 ವಾರಗಳ ನಂತರ ಸಸಿಗಳನ್ನು 1.3 ಮಿ.ಲೀ. ಆಕ್ಸಿಡೆಮಿಟಾನ್ ಮಿಥೈಲ್  25 ಇ.ಸಿ. ಅಥವಾ 0.5 ಮಿ.ಲೀ. ಪಾಸ್ಪಾಮಿಡಾನ್ ಪ್ರತೀ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಕಾಯಿ ಕೊರೆಯುವ ಹುಳು: ಎರಡು ಬಗೆಯ ಕಾಯಿ ಕೊರಕಗಳು ಬೆಳೆಯನ್ನು ಬಾಧಿಸುತ್ತವೆ. ಮೊದಲು ಮರಿಹುಳುಗಳು ಎಳೆದಾದ ರೆಂಬೆಗಳನ್ನು ಕೊರೆದು ತಿನ್ನುವುದರಿಂದ ರೆಂಬೆಗಳು ಒಣಗುತ್ತವೆ. ನಂತರ ಹೂ ಮೊಗ್ಗುಗಳು ಮತ್ತು ಹೂಗಳನ್ನು ತಿಂದು ಹಾಳುಮಾಡುತ್ತದೆ. ಕ್ರಮೇಣ ಕಾಯಿಗಳನ್ನು ಕೊರೆದು ಒಳಭಾಗ ಮತ್ತು ಎಳೆದಾದ ಬೀಜಗಳನ್ನು ತಿನ್ನುತ್ತವೆ. ಬಾಧಿತ ಕಾಯಿಗಳು ವಕ್ರವಾಗಿರುತ್ತದೆ.
ಹತೋಟಿ ಕ್ರಮ: ಮುಂಜಾನೆ ಹೊತ್ತಿನಲ್ಲಿ ಹುಳುಗಳನ್ನು ಆರಿಸಿ ಸಾಯಿಸಬೇಕು. ಪ್ರತಿ ಲೀ. ನೀರಿಗೆ  2 ಮಿ.ಲೀ. ಕ್ವಿನಾಲ್‌ಫಾಸ್ 25 ಇ.ಸಿ. ಬೆರೆಸಿ ಸಿಂಪಡಿಸಬೇಕು. ಬಿತ್ತನೆಯಾದ 5 ವಾರಗಳ ನಂತರ ಬೆಳೆಗೆ 2ಮಿ.ಲೀ. ಮೆಲಾಥಿಯಾನ್ 50 ಇ.ಸಿ. ಪ್ರತೀ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ತೋಟಗಾರಿಕಾ ಇಲಾಕೆ ಪ್ರಕಟಣೆ ತಿಳಿಸಿದೆ.

Write A Comment