ವಾಷಿಂಗ್ಟನ್: ಅಮೆರಿಕ ಭದ್ರತೆಗೆ ಧಕ್ಕೆ ತರಲು ಇಸಿಸ್ ನಿಂದ ಸಾಧ್ಯವಾಗಿಲ್ಲ. ಯಾರ ಬೆಂಬಲವೂ ಇಲ್ಲದೆ ಇಸಿಸ್ ನಿರ್ನಾಮಕ್ಕೆ ಅಮೆರಿಕ ಈಗಲೂ ಸಿದ್ಧವಿದೆ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಬುಧವಾರ ಹೇಳಿದ್ದಾರೆ.
ಇಂದು ಅಮೆರಿಕದ ಸಂಸತ್ತನ್ನುದ್ದೇಶಿಸಿ ತಮ್ಮ ಕೊನೆಯ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡಿರುವ ಅವರು, ಅಮೆರಿಕ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರಲು ಇಸಿಸ್ ನಿಂದ ಸಾಧ್ಯವಾಗಿಲ್ಲ. ಯಾವುದೇ ದೇಶದ ಬೆಂಬಲವಿಲ್ಲದೆಯೂ ಕೂಡ ಇಸಿಸ್ ಉಗ್ರ ಸಂಘಟನೆಯನ್ನು ಬುಡ ಸಮೇತ ಕಿತ್ತು ಹಾಕುವ ಶಕ್ತಿ ಅಮೆರಿಕ ದೇಶಕ್ಕೆ ಇದೆ. ಇಸಿಸ್ ವಿರುದ್ಧದ ಯುದ್ಧಕ್ಕೆ ಅಮೆರಿಕ ಯೋಧರು ಈಗಲೂ ಸನ್ನದ್ಧರಾಗಿದ್ದಾರೆ ಎಂದು ಇಸಿಸ್ ಉಗ್ರರಿಗೆ ಒಬಾಮಾ ಎಚ್ಚರಿಸಿದ್ದಾರೆ.
ಅಧ್ಯಕ್ಷನಾಗಿ ಇದು ನನ್ನ ಕೊನೆಯ ಭಾಷಣ ಎಂದು ಅನಿಸುತ್ತಿಲ್ಲ. ಮೊದಲ ಭಾಷಣ ಎನಿಸುತ್ತಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಅವಧಿಯಲ್ಲಿ ಅಮೆರಿಕ ದೇಶ ತೀವ್ರ ಸಂಕಷ್ಟದಲ್ಲಿತ್ತು. ದೇಶದ ಆಂತರಿಕ ಭದ್ರತೆಯೇ ಸವಾಲಾಗಿತ್ತು. ನನ್ನ ಅಧಿಕಾರಾವಧಿಯಲ್ಲಿ ಉದ್ಯೋಗವಕಾಶಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. 14 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ. ನನ್ನ ದೃಷ್ಟಿ ಅಮೆರಿಕದ ಯುವಕರ ಭವಿಷ್ಯದತ್ತ ಇದೆ. ಕಳೆದ 7 ವರ್ಷಗಳಲ್ಲಿ ಅಮೆರಿಕ ಆರ್ಥಿಕವಾಗಿ ವೃದ್ಧಿಯಾಗಿದೆ. ಅಮೆರಿಕ ಇಂದು ವಿಶ್ವದಲ್ಲಿಯೇ ಬಲಿಷ್ಠ ರಾಷ್ಟ್ರವಾಗಿದೆ. ಹಳಿತಪ್ಪಿದ ದಾರಿಯನ್ನು ನಾವು ಸರಿ ಮಾಡಿದ್ದೇವೆ.
ಇತರೆ ದೇಶಗಳು ಇಂದು ಜಾಗತಿಕ ವಿಚಾರದಲ್ಲಿ ಅಮೆರಿಕ ನಾಯಕತ್ವವನ್ನು ಬಯಸುತ್ತಿದೆ. ವಿಶ್ವದ ಯಾವುದೇ ಸಮಸ್ಯೆಗಾದರೂ ಅಮೆರಿಕ ಸ್ಪಂದಿಸಿದೆ. ಎಲ್ಲಾ ಸಮಸ್ಯೆಗಳ ವಿರುದ್ಧ ನಾವು ಹೋರಾಟ ನಡೆಸಿದ್ದೇವೆ. ವಿಶ್ವದ ನಾಯಕನಾಗಿ ಅಮೆರಿಕ ಮುಂದುವರೆಯುತ್ತದೆ. ಇಸಿಸ್ ವಿರುದ್ಧವೂ ಅಮೆರಿಕ ಹೋರಾಟ ನಡೆಸಿದೆ. ನಮ್ಮ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರಲು ಇಸಿಸ್ ನಿಂದ ಸಾಧ್ಯವಾಗಿಲ್ಲ. ಇಸಿಸ್ ನಿಂದ ಯಾವುದೇ ಬೆದರಿಕೆ ಇಲ್ಲ. ಇಸಿಸ್ ನ್ನು ಮಟ್ಟಹಾಕಲು ಈಗಲೂ ನಾವು ಸಿದ್ಧವಿದ್ದೇವೆ. ಈ ಕುರಿತ ನಮ್ಮ ಹೋರಾಟ ಮುಂದುವರೆಯುತ್ತದೆ.
ಅಮೆರಿಕದ ಕೆಲವೆಡೆ ಈಗಲೂ ಗಂಭೀರ ಸಮಸ್ಯೆಗಳಿವೆ. ಅವುಗಳನ್ನು ಪರಿಹರಿಸಲು ಎಲ್ಲರ ಸಹಕಾರ ಅಗತ್ಯವಿದೆ. ಸಾಮಾಜಿಕ ಭದ್ರತೆಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳುವ ಅಗತ್ಯವಿದೆ. ಅಮೆರಿಕದಲ್ಲಿ ಪಿಜ್ಜಾ ದೊರಕುವಷ್ಟು ಸುಲಭವಾಗಿ ಗನ್ ಗಳು ದೊರಕುತ್ತಿವೆ. ಇದು ತೀರಾ ಗಂಭೀರವಾದ ವಿಚಾರವಾಗಿದ್ದು, ಗನ್ ಖರೀದಿ ನೀತಿಯಲ್ಲಿ ಬದಲಾವಣೆ ತರಬೇಕಾಗಿದೆ. ನಮ್ಮ ಸರ್ಕಾರದ ಅಧಿಕಾರಾವಧಿಯಲ್ಲಿ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದೆವು.
ದೇಶದಲ್ಲಿನ ಕ್ಯಾನ್ಸರ್ ನಿರ್ಮೂಲನೆಗೆ ಕ್ರಮ ಕೈಗೊಂಡಿದ್ದೇವೆ. ಮುಂದಿನ ಸರ್ಕಾರ ಕೂಡ ಕ್ರಮಕೈಗೊಳ್ಳಲಿದೆ ಎಂಬುದರ ಬಗ್ಗೆ ನನಗೆ ಭರವಸೆಯಿದೆ. ಉಪಾಧ್ಯಕ್ಷರ ನೇತೃತ್ವದಲ್ಲಿ ನಡೆದ ಕಾರ್ಯ ಅತ್ಯದ್ಭುತವಾಗಿತ್ತು. ದೇಶಗಳಲ್ಲಿರುವ ತಾರತಮ್ಯ ಹೋಗಲಾಡಿಸುವ ಜವಾಬ್ದಾರಿ ನಮ್ಮ ಮೇಲಿದೆ. ನನ್ನ ಕೆಲಸ ಇಷ್ಟಕ್ಕೇ ನಿಂತಿಲ್ಲ. ನಾನು ಸುಮ್ಮನೆ ಕೂರುವುದಿಲ್ಲ. ದೇಶದ ರಕ್ಷಣೆಗೆ ನಾವು ಎಂದಿಗೂ ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.