ಕರ್ನಾಟಕ

ಹೆಲ್ಮೆಟ್ ಕಡ್ಡಾಯ ಆಯ್ತು ಈಗ ಎಮಿಷನ್ ಟೆಸ್ಟ್‌ಗೆ ರೆಡಿಯಾಗಿ..!

Pinterest LinkedIn Tumblr

emitionಬೆಂಗಳೂರು, ಜ.13-ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಆಯ್ತು ಇನ್ನು ಮುಂದೆ ಎಮಿಷನ್ ಟೆಸ್ಟ್‌ಗೆ ರೆಡಿಯಾಗಬೇಕು. ನಿಮ್ಮ ವಾಹನಗಳು ಹೆಚ್ಚು ಹೊಗೆ ಉಗುಳುತ್ತಿದ್ದರೆ ಸ್ಥಳದಲ್ಲೇ ದುಪ್ಪಟ್ಟು ದಂಡ ಅಥವಾ ವಾಹನ ಸೀಜ್ ಆಗಲಿದೆ. ವಾಯುಮಾಲಿನ್ಯ ತಪಾಸಣೆಯನ್ನು ತೀವ್ರಗೊಳಿಸಲು ಸಾರಿಗೆ ಇಲಾಖೆ ನಿರ್ಧರಿಸಿದ್ದು, ಎಮಿಷನ್ ಟೆಸ್ಟ್ ದೃಢೀಕರಣ ಪತ್ರವಿದ್ದರೂ ತಪಾಸಣೆ ಸಂದರ್ಭದಲ್ಲಿ ವಾಯುಮಾಲಿನ್ಯಕ್ಕೆ ಧಕ್ಕೆಯಾಗುವ ಅಂಶಗಳು ಕಂಡುಬಂದರೆ  ದಂಡ ಕಟ್ಟಲು ರೆಡಿಯಾಗಬೇಕು. ಈ ನಿಯಮ ಕಡ್ಡಾಯ ಪಾಲನೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಸರ್ಕಾರ ಮುಂದಾಗುವುದರ ಮೂಲಕ ಪರಿಸರ ಮಾಲಿನ್ಯ ನಿಯಂತ್ರಣ ಹಾಗೂ ವಾಹನಗಳ ಓಡಾಟವನ್ನು ತಡೆಗಟ್ಟುವ ಪ್ರಯತ್ನ ನಡೆಸಿದೆ.

ಮಿತಿಮೀರಿದ ವಾಹನಗಳ ಹೊಗೆಯಿಂದ ಜಾಗತಿಕ ತಾಪಮಾನ ಹೆಚ್ಚಾಗುತ್ತಿದ್ದು, ಪರಿಸರ ಮಾಲಿನ್ಯ ತೀವ್ರವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ವಾಹನಗಳ ವಾಯುಮಾಲಿನ್ಯ ತಪಾಸಣೆ ನಡೆಸಲು ಮುಂದಾಗಿದೆ.
ವಾಹನಗಳು ಹೆಚ್ಚು ಹೊಗೆ ಉಗುಳುತ್ತಿದ್ದರೆ ಸ್ಥಳದಲ್ಲೇ ದಂಡ ವಿಧಿಸುವುದು ಅಥವಾ ವಾಹನಗಳನ್ನು ಸೀಜ್ ಮಾಡುವ ಕ್ರಮಕ್ಕೆ ಮುಂದಾಗಿದೆ. ಈ ಆದೇಶ ತಕ್ಷಣದಿಂದಲೇ ಜಾರಿಯಾಗಲಿದೆ. ಬೆಂಗಳೂರು ಮಹಾನಗರದಲ್ಲಿ ಸುಮಾರು 40 ಲಕ್ಷ ದ್ವಿಚಕ್ರ ವಾಹನಗಳು, ಎರಡು ಲಕ್ಷಕ್ಕೂ ಹೆಚ್ಚು ಆಟೋಗಳು, ಬಸ್ಸು, ಕಾರು, ಟ್ರ್ಯಾಕ್ಟರ್, ಲಾರಿ ಎಲ್ಲಾ ವಾಹನಗಳವರು ತಮ್ಮ ಎಮಿಷನ್ ಟೆಸ್ಟ್‌ನ್ನು ಮತ್ತೊಮ್ಮೆ ದೃಢಪಡಿಸಿಕೊಳ್ಳಬೇಕು. ಇಲ್ಲವಾದರೆ ದಂಡ ಗ್ಯಾರಂಟಿ.

ಸುಪ್ರೀಂಕೋರ್ಟ್ ನಿರ್ದೇಶನದಂತೆ ಹಿಂಬದಿ ಸವಾರರಿಗೂ ಈಗ ಹೆಲ್ಮೆಟ್‌ನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಹನ್ನೆರಡು ವರ್ಷ ಮೇಲ್ಪಟ್ಟ ಮಕ್ಕಳೂ ಸೇರಿದಂತೆ ದ್ವಿಚಕ್ರ ವಾಹನದಲ್ಲಿ ಚಲಿಸುವ ಎಲ್ಲರೂ ಹೆಲ್ಮೆಟ್ ಧರಿಸಲೇಬೇಕಾಗಿದೆ. ಅದೇ ರೀತಿ ಈಗಾಗಲೇ ಜಾರಿಯಲ್ಲಿರುವ ವಾಯುಮಾಲಿನ್ಯ ತಪಾಸಣೆಯನ್ನು ಮತ್ತಷ್ಟು ತೀವ್ರಗೊಳಿಸುವ ಕಾರ್ಯಕ್ರಮವನ್ನು ರೂಪಿಸಿದೆ. ಬೆಂಗಳೂರು ಮಹಾನಗರದಲ್ಲಿ ವಾಹನಗಳ ಓಡಾಟವನ್ನು ತಗ್ಗಿಸಲು ಸಮ-ಬೆಸ ಮಾದರಿ ಯೋಜನೆ ಜಾರಿಗೊಳಿಸುವ ಚಿಂತನೆಯನ್ನು ಸರ್ಕಾರ ಒಂದೆಡೆ ನಡೆಸಿದೆ. ಮತ್ತೊಂದೆಡೆ ವಾಹನಗಳ ಎಮಿಷನ್ ಟೆಸ್ಟ್‌ನ್ನು ತೀವ್ರಗೊಳಿಸಲು ನಿರ್ಧರಿಸಿದೆ.  ಹದಿನೈದು ವರ್ಷಗಳ ಹಳೆಯ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಲೂ ಕೂಡ ಚಿಂತಿಸಲಾಗಿದೆ. ಲಾರಿ, ಟ್ಯಾಂಕರ್‌ಗಳು ಸೇರಿದಂತೆ ಭಾರೀ ವಾಹನಗಳ ಓಡಾಟವನ್ನು ನಗರದಲ್ಲಿ ನಿರ್ಬಂಧಿಸಲಾಗಿದೆ. ಆದರೂ ಕೂಡ ವಾಹನಗಳ ಸಂಖ್ಯೆ ಮಿತಿಮೀರಿದ್ದು, ಓಡಾಟವನ್ನು ನಿಯಂತ್ರಿಸಲು ಸಾರಿಗೆ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ.

Write A Comment