ರಾಷ್ಟ್ರೀಯ

ಗಡಿಯಲ್ಲಿ ಉಗ್ರರು ನುಸುಳದಂತೆ ಲೇಸರ್ ವಾಲ್ ನಿರ್ಮಾಣಕ್ಕೆ ಮುಂದಾದ ಕೇಂದ್ರ

Pinterest LinkedIn Tumblr

gadiನವದೆಹಲಿ, ಜ.17-ಇತ್ತೀಚೆಗೆ ಪಂಜಾಬ್‌ನ ಗುರುದಾಸ್‌ಪುರ್ ಜಿಲ್ಲೆಯ ಪಠಾಣ್‌ಕೋಟ್ ವಾಯುನೆಲೆ ಮೇಲಿನ ದಾಳಿಯ ನಂತರ ಗಡಿಯಲ್ಲಿ ಉಗ್ರರು ಒಳನುಸುಳುವುದನ್ನು ಸಂಪೂರ್ಣವಾಗಿ ತಡೆಗಟ್ಟಲು ಮುಂದಾಗಿರುವ ಕೇಂದ್ರ ಗೃಹ ಸಚಿವಾಲಯ, ಭಾರತ-ಪಾಕಿಸ್ಥಾನದ ನಡುವಿನ ನದೀತಿರದ (ಪಂಜಾಬ್‌ಪ್ರಾಂತ್ಯ) ಉದ್ದಕ್ಕೂ ನುಸುಳುಕೋರರಿಗೆ ಅವಕಾಶವಾಗದಂತೆ ಪ್ರಖರ ಬೆಳಕು ಚೆಲ್ಲುವ ಸೈರನ್ ಮೊಳಗಿಸುವ ಲೇಸರ್ ಗೋಡೆ ನಿರ್ಮಿಸಲು ಸಿದ್ಧತೆ ನಡೆಸಿದೆ. ಪಾಕ್ ಆಕ್ರಮಿತ ಪಂಜಾಬ್ ಪ್ರಾಂತ್ಯದ ಗಡಿಭಾಗದಲ್ಲಿರುವ ನದೀ ಪಾತ್ರ ಪ್ರದೇಶದಲ್ಲಿ ಸುಮಾರು 40 ಆಯಕಟ್ಟಿನ ಸ್ಥಳಗಳಿದ್ದು, ಆ ಪ್ರದೇಶದಲ್ಲಿ ಉಗ್ರರು ಒಳನುಸುಳಲು ಸಾಧ್ಯವಾಗದಂತೆ ಲೇಸರ್ ವಾಲ್ ನಿರ್ಮಿಸುವುದು ಸರ್ಕಾರದ ಉದ್ದೇಶವಾಗಿದೆ.

ಲೇಸರ್‌ವಾಲ್ (ಒಂದೇ ದಿಕ್ಕಿನಲ್ಲಿ ತೀಕ್ಷ್ಣವಾದ ಪ್ರಕರ ಬೆಳಕು ಬೀರುವುದು, ಉಗ್ರರು ಸಂಚರಿಸಿದರೆ ಸೈರನ್ ಮೊಳಗುವುದು) ನದಿಯ ದಡದಲ್ಲಿನ ಕೊಲ್ಲಿಗಳ ಮೂಲಕ ಬರುವ ಉಗ್ರರಿಗೆ ಇದರಿಂದ ನುಸುಳುವಿಕೆ ಸಾಧ್ಯವಾಗುವುದಿಲ್ಲ. ಲೇಸರ್ ವಾಲ್ ಸಮೀಪ ಉಗ್ರರು ಸಂಚರಿಸಿದರೆ ಪ್ರಖರವಾದ ಬೆಳಕು ಅವರ ಮೇಲೆ ಬಿದ್ದು ಅವರ ಚಲನ-ವಲನಗಳು ಸ್ಪಷ್ಟವಾಗಿ ಭದ್ರತಾ ಪಡೆಗೆ ಗೋಚರಿಸುತ್ತದೆ. ಅಲ್ಲದೆ ಜೋರಾಗಿ ಎಚ್ಚರಿಕೆಯ ಸೈರನ್ ಕೂಡ ಮೊಳಗುತ್ತದೆ. ಆಗ ಸುಲಭವಾಗಿ ಉಗ್ರರನ್ನು ಪತ್ತೆ ಮಾಡಿ ಬಂಧಿಸಬಹುದು. ಈ ತಂತ್ರಜ್ಞಾನ ಅಳವಡಿಸಿಕೊಂಡರೆ ಯಾವುದೇ ಕಾರಣಕ್ಕೂ ಉಗ್ರರು ಭಾರತದೊಳಕ್ಕೆ ನುಸುಳಲು ಸಾಧ್ಯವಿಲ್ಲ. ನುಸುಳುಕೋರರ ಉಪಟಳವನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಭಾಗದಲ್ಲಿ 40ಇಂತಹ ಆಯಕಟ್ಟನ ಸ್ಥಳಗಳಿದ್ದು ಪ್ರಸ್ತುತ ಕೇವಲ ಐದಾರು ಸ್ಥಳಗಳಲ್ಲಿ ಮಾತ್ರ ಲೇಸರ್ ವಾಲ್ ನಿರ್ಮಿಸಲಾಗಿದೆ. ಉಗ್ರರು ಒಳ ನುಸುಳಲು ಬಂದಾಗ ನದಿಯ ಮೇಲಿನ ತೀಕ್ಷಣ ಬೆಳಕು ಸೈರನ್‌ಮೊಳಗಿಸುತ್ತದೆ. ಪಠಾಣ್‌ಕೋಟ್ ವಾಯುನೆಲೆ ಮೇಲೆ ದಾಳಿ ನಡೆಸಿದ ಪಾಕ್ ಉಗ್ರರು ಪಂಜಾಬ್ ಪ್ರಾಂತ್ಯದ ಒಮಿಯಾಲ್‌ನಲ್ಲಿರುವ ಉಜ್ ನದಿಯ ಕಿನಾರೆಯ ಮೂಲಕವೇ ಭಾರತದೊಳಕ್ಕೆ ಪ್ರವೇಶಿಸಿದ್ದಾರೆಂದು ಶಂಕಿಸಲಾಗಿದೆ. ಇಷ್ಟಾದರೂ 130ಮೀಟರ್ ಅಗಲದ ಉಜ್ ನದಿ ಕಿನಾರೆಯಲ್ಲಿ ಉಗ್ರರ ಚಲನ-ವಲನ ಪತ್ತೆಗೆ ಅಳವಡಿಸಲಾಗಿರುವ ಕ್ಯಾಮೆರಾ ಯಾವುದೇ ಚಿತ್ರೀಕರಣ ಮಾಡದೆ ಸ್ತಬ್ಧವಾಗಿರುವುದೂ ಬೆಳಕಿಗೆ ಬಂದಿದೆ.  ಸರ್ಕಾರದ ಉದೇಶಿತ ಲೇಸರ್ ವಾಲ್ ನಿರ್ಮಾಣವಾದರೆ ಈ ಭಾಗದಿಂದ ಉಗ್ರರ ನುಸುಳುವಿಕೆ ಸಂಪೂರ್ಣ ಬಂದಾಗಲಿದೆ.

Write A Comment