ಮಂಗಳೂರು,ಜ.21 : ಕದ್ರಿ ಪಾರ್ಕ್‌ನಲ್ಲಿ ಪುಟಾಣಿ ಮಕ್ಕಳಿಗಾಗಿ ಪುಟಾಣಿ ರೈಲು ಮಾರ್ಚ್ ತಿಂಗಳಿನಲ್ಲಿ ಪ್ರಾರಂಭವಾಗಲಿದೆ ಬುಧವಾರ ಕದ್ರಿ ಪಾರ್ಕ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ. ಐ. ಶ್ರೀವಿದ್ಯಾ ಅವರು ತಿಳಿಸಿದರು.
ಪುಟಾಣಿ ರೈಲು ನಿರ್ಮಾಣ ಕಾರ್ಯ ಶುರುವಾಗಿದೆ. ಅದಕ್ಕಾಗಿ 40 ಲಕ್ಷ ರೂಪಾಯಿ ಅನುದಾನವನ್ನು ಹೊಂದಿಸಲಾಗಿದೆ. ಇದೀಗ ರೈಲು ಹಳಿಯನ್ನೂ ದುರಸ್ತಿ ಮಾಡಬೇಕಾಗಿದೆ. ಆದ್ದರಿಂದ ಮಾರ್ಚ್ ವೇಳೆಗೆ ಪುಟಾಣಿ ರೈಲು ಓಡುವ ನಿರೀಕ್ಷೆ ಇದೆ ಅಷ್ಟು ಮಾತ್ರವಲ್ಲದೇ ಸೋಲಾರ್ ದೀಪಗಳನ್ನು ಅಳವಡಿಸಲು ಕರ್ಣಾಟಕ ಬ್ಯಾಂಕ್ 10 ಲಕ್ಷ ನೆರವು ನೀಡಿದೆ. ಸಿಂಡಿಕೇಟ್ ಬ್ಯಾಂಕ್ ಕೂಡ 5 ಲಕ್ಷ ನೆರವು ನೀಡಲಿದೆ. ಉದ್ಯಾನದಲ್ಲಿ ಮಳೆ ಬಂದಾಗ ನಿಲ್ಲುವುದಕ್ಕೆ ಅನುಕೂಲವಾಗುವಂತೆ ತಂಗುದಾಣವನ್ನು ನಿರ್ಮಿಸಲಾಗುವುದು. ಬೆಂಚುಗಳ ಅಳವಡಿಕೆಗೆ ಕಾರ್ಪೊರೇಶನ್ ಬ್ಯಾಂಕ್ ನೆರವು ನೀಡಲು ಒಪ್ಪಿಗೆ ನೀಡಿದೆ ಎಂದು ಅವರು ಹೇಳಿದರು.
ಜಿಂಕೆ ವನದಲ್ಲಿ ಆಹಾರ ಉತ್ಸವ, ಫಲಪುಷ್ಪ, ತೋಟಗಾರಿಕೆಗೆ ಸಂಬಂಧಿಸಿ ಸುಮಾರು 70 ಮಳಿಗೆಗಳು, ಹೂವು ಮತ್ತು ತರಕಾರಿಯ ವೈವಿಧ್ಯಮಯ ಅಲಂಕಾರಗಳು ಸಾರ್ವಜನಿಕರನ್ನು ಆಕರ್ಷಿಸಲಿವೆ. ಜಿಲ್ಲೆಯ ಆಯ್ದ ಸಣ್ಣ, ಅತೀ ಸಣ್ಣ, ಪರಿಶಿಷ್ಟ ಜಾತಿ ಮತ್ತು ಪಂಗಡದ ತೋಟಗಾರಿಕೆ ರೈತರನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದು ಶ್ರೀವಿದ್ಯಾ ವಿವರಿಸಿದರು.