ಕನ್ನಡ ವಾರ್ತೆಗಳು

ಶಂಕಿತ ಐಸಿಸ್‌ ಉಗ್ರ ನಝಾಮ್ವುಲ್ ಹುಡಾ ಬಂಧನ : ದೇಶವನ್ನೇ ಬೆಚ್ಚಿಬೀಳಿಸುವ ಸಂಗತಿ ಬಹಿರಂಗ

Pinterest LinkedIn Tumblr

Terarist_huda_arest_1

ಮಂಗಳೂರು : ತನ್ನ ಅಣ್ಣ ತಪ್ಪು ಕೆಲಸ ಮಾಡುವುದಿಲ್ಲ ಎಂಬ ಭರವಸೆಯಿದೆ. ಆತ ತನಗೆ ಬಂದಂತಹ ಕೆಲವೊಂದು ವಿಡಿಯೋ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತಿದ್ದ. ಇದರ ಬಗ್ಗೆ ತಿಳಿದ ನಾವು ಹಲವು ಬಾರಿ ಎಚ್ಚರಿಸಿದ್ದರೂ ಕೂಡ ಅವನು ಮುಂದುವರಿಸಿದ್ದ. ಹಾಗಂತ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದರೆ ಪೊಲೀಸರು ಬಂಧಿಸಬೇಕೆ?’ ಎಂದು ಶುಕ್ರವಾರ ಐಸಿಸ್ ಪರವಾಗಿ ಪ್ರಚಾರ ಮಾಡುತ್ತಿದ್ದ ಆರೋಪದ ಮೇಲೆ ಬಂಧಿತನಾದ ಮಂಗಳೂರು ಹೊರವಲಯದ ಬಜ್ಪೆ ಸಮೀಪದ ಪೆರ್ಮುದೆ ಎಂಬಲ್ಲಿ 25 ವರ್ಷದ ಬೆಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿ ಶಂಕಿತ ಉಗ್ರ ನಝಮ್ವುಲ್ಲಾ ಹುಡಾನ ಸಹೋದರಿ ಉಮ್ಮು ಕುಲ್ಸುಮ್ ಪ್ರಶ್ನಿಸಿದ್ದಾರೆ.

`ನಾವು ಮೂಲತಃ ಮಂಗಳೂರಿನವರಲ್ಲ. 20 ವರ್ಷಗಳ ಹಿಂದೆ ಇಲ್ಲಿಗೆ ಬಂದೆವು. ತಂದೆ ಬಿಹಾರಿಯಾದರೆ, ತಾಯಿ ಉತ್ತರ ಪ್ರದೇಶದವರು. ಮನೆ ಭಾಷೆ ಉರ್ದು. ಕನ್ನಡ ಕಲಿತಿದ್ದೇವೆ. ತಂದೆ ಪೆರ್ಮುದೆಯ ಉಸ್ಮಾನಿಯ ಮಸೀದಿಯಲ್ಲಿ ಮೌಲ್ವಿ. ಅಕ್ಕನಿಗೆ ಮದುವೆಯಾಗಿದೆ. ದುಬೈಯಲ್ಲಿದ್ದಾಳೆ. ನನ್ನದೂ ಮದುವೆಯಾಗಿದೆ. ಪತಿ ಬೆಂಗಳೂರಿನಲ್ಲಿ ಕಂಪ್ಯೂಟರ್ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನೊಬ್ಬಳು ತಂಗಿ ಮಂಗಳೂರಿನ ಕಾಲೇಜೊಂದರಲ್ಲಿ ಓದುತ್ತಿದ್ದಾಳೆ. ಅಣ್ಣ ಕೆಪಿಟಿಯಲ್ಲಿ ಪಾಲಿಮರ್ನಲ್ಲಿ ಡಿಪ್ಲೋಮಾ, ನಂತರ ಬೆಂಗಳೂರಿನ ಆರ್ವಿ ಕಾಲೇಜಿನಲ್ಲಿ ಕೆಮಿಕಲ್ ಎಂಜಿನಿಯರಿಂಗ್ ಓದಿದ್ದಾನೆ. ಕಳೆದ ಮೇ ತಿಂಗಳಲ್ಲಿ ಅಂತಿಮ ಪರೀಕ್ಷೆ ಬರೆದಿದ್ದು, ಫಲಿತಾಂಶಕ್ಕಾಗಿ ಕಾಯುತ್ತಿದ್ದಾನೆ’. ಎಂದು ಉಮ್ಮು ಕುಲ್ಸುಮ್ ತಮ್ಮ ಪರಿವಾರದ ಬಗ್ಗೆ ಮಾಹಿತಿ ನೀಡಿದ್ದಾರೆ.

ಇಪ್ಪತ್ತು ವರ್ಷಗಳ ಹಿಂದೆ ಮಂಗಳೂರಿಗೆ ಬಂದ ನಜ್ಮಲ್ ಕುಟುಂಬ ಪೆರ್ಮುದೆಯ ಮಸೀದಿ ಹಿಂಬದಿಯಲ್ಲಿ ಹತ್ತು ಸೆಂಟ್ಸ್ ಜಾಗದಲ್ಲಿರುವ ಹೆಂಚಿನ ಸರಳ ಮನೆಯಲ್ಲಿ ವಾಸವಾಗಿದ್ದೇವೆ. ತಂದೆ ಮದರಸದಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ಉದ್ಯೋಗ.ಇದೇ ನಮ್ಮ ಕುಟುಂಬದ ಆದಾಯ. ‘ತಂದೆ ರಜೆಯಲ್ಲಿದ್ದಾಗ ಅಣ್ಣನೇ ಮದರಸದಲ್ಲಿ ಬೋಧಿಸುತ್ತಾನೆ. ಹೆಚ್ಚಿನ ದಿನಗಳಲ್ಲಿ ಮನೆಯಲ್ಲೇ ಇರುತ್ತಾನೆ. ಹಗಲಲ್ಲಿ ಸಮೀಪದ ಮೊಬೈಲ್ ರಿಚಾರ್ಜ್ ಅಂಗಡಿಯಲ್ಲಿ ಇದ್ದರೆ, ರಾತ್ರಿ ಹೊತ್ತು ಮನೆಯಲ್ಲೇ ಫೇಸ್ಬುಕ್ನಲ್ಲಿ ಐಸಿಸ್ ಮಾಹಿತಿಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದ. ಇದನ್ನು ನಾನು ಅನೇಕ ಬಾರಿ ಆಕ್ಷೇಪಿಸಿದ್ದೆ’ ಎಂದು ಕುಲ್ಸುಮ್ ತಿಳಿಸಿದ್ದಾರೆ.

Terarist_huda_arest_2 Terarist_huda_arest_3 Terarist_huda_arest_4 Terarist_huda_arest_5 Terarist_huda_arest_6 Terarist_huda_arest_7 Terarist_huda_arest_8

ಇದೇ ವೇಳೆ ನನ್ನ ಮಗ ಯಾವುದೇ ತಪ್ಪು ಮಾಡಿರಲು ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿದ್ದ ವೀಡಿಯೋ ಮಾಹಿತಿಗಳನ್ನು ಶೇರ್ ಮಾಡುತ್ತಿದ್ದ ಇದರಿಂದಾಗಿ ಸಂಶಯಗೊಂಡು ಅವನನ್ನು ಬಂಧಿಸಲಾಗಿದೆ. ಅವನು ಶೀಘ್ರವೇ ಬಂಧಮುಕ್ತನಾಗುತ್ತಾನೆ ಎಂಬ ಭರವಸೆಯಿದೆ ಎಂದು ಇಂದು ಮಂಗಳೂರಿನಲ್ಲಿ ಬಂಧಿತನಾದ ನಜುಮುಲ್ ಹುದಾ ತಂದೆ ಸೈಫುಲ್ ಹುದಾ ಹೇಳಿದ್ದಾರೆ. ನಜುಮುಲ್ ಹುದಾನನ್ನು ಕಮಿಷನರ್ ಕಚೇರಿ ಬಳಿ ಪೊಲೀಸರು ಕರೆತಂದಿದ್ದ ವೇಳೆ ಸ್ಥಳಕ್ಕೆ ಆಗಮಿಸಿದ್ದ ಅವರು ಮಾಧ್ಯಮಗಳ ಜೊತೆ ತಮ್ಮ ಅಭಿಪ್ರಾಯಗಳನ್ನು ಈ ರೀತಿ ವ್ಯಕ್ತಪಡಿಸಿದ್ದಾರೆ.

ಹುಡಾ – ಐಸಿಸ್ ಉಗ್ರರಲ್ಲಿ ಎರಡನೇ ಮುಖ್ಯಸ್ಥ :

ಇದೀಗ ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ಬಂಧಿತನಾದ ಶಂಕಿತ ಐಸಿಸ್‌ ಉಗ್ರ ನಝಾಮ್ವುಲ್ ಹುಡಾ ಎಂಬ 25ರ ಹರೆಯದ ಇಂಜಿನಿಯರ್ ವಿದ್ಯಾರ್ಥಿಯ ಹಿನ್ನೆಲೆ ಭಯಾನಕವಾಗಿದೆ. ದೇಶವನ್ನೇ ಬೆಚ್ಚಿಬೀಳಿಸುವ ಸಂಗತಿ ಅಂದ್ರೆ ಹುಡಾ 20 ಟಾಪ್ ಮೋಸ್ಟ್ ವಾಂಟೆಡ್ ಐಸಿಸ್ ಉಗ್ರರಲ್ಲಿ ಎರಡನೇ ಮುಖ್ಯಸ್ಥನೆಂಬ ಮಾಹಿತಿ ಲಭ್ಯವಾಗಿದೆ.

ನಝಾಮ ಚಟುವಟಿಕೆ ಬಗ್ಗೆ ಸ್ಥಳೀಯರಿಗೆ ಅಷ್ಟಾಗಿ ಮಾಹಿತಿ ಇರಲಿಲ್ಲ. ಆದರೆ, ಅನೇಕ ದಿನಗಳಿಂದ ಎನ್ಐಎ ತಂಡ ಇವನ ಮೇಲೆ ಕಣ್ಣಿಟ್ಟಿತ್ತು. ಇದೀಗ ದೇಶಾದ್ಯಂತ 13 ಕಡೆಗಳಲ್ಲಿ ಏಕಕಾಲದಲ್ಲಿ ಕಾರ್ಯಾಚರಣೆ ನಡೆದಿದ್ದು, ಇದೇ ಸಂದರ್ಭದಲ್ಲಿ ಶಂಕಿತ ಉಗ್ರರ ಪಟ್ಟಿಯಲ್ಲಿದ್ದ ನಝಾಮ್ವುಲ್ ಹುಡಾ ಕೂಡ ಸೆರೆ ಸಿಕ್ಕಿದ್ದಾನೆ. ಮುಂಬೈ ಮತ್ತು ಚೆನ್ನೈನಿಂದ ಆಗಮಿಸಿದ್ದ ಎಟಿಎಸ್ ಮತ್ತು ಎನ್ಐಎ ತಂಡ ಮಂಗಳೂರು ಸಿಸಿಬಿಯವರ ಸಹಾಯದೊಂದಿಗೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಶಂಕಿತ ಉಗ್ರ ನಝಾಮ್ವುಲ್ ಹುಡಾನನ್ನು ತಡರಾತ್ರಿ ಬಂಧಿಸಿದ್ದಾರೆ. ಐಸಿಸ್ ಉಗ್ರ ಸಂಘಟನೆಯನ್ನು ಸೇರಲು ಸ್ಥಳೀಯ ಮುಸ್ಲಿಂ ಯುವಕರನ್ನು ಪ್ರೇರೇಪಿಸುತ್ತಿದ್ದ ಎಂಬ ಆರೋಪ ಈತನ ಮೇಲಿದೆ. ರಹಸ್ಯ ಸ್ಥಳದಲ್ಲಿ ನಡೆಸಿದ ವಿಚಾರಣೆಯ ಬಳಿಕ ಹೆಚ್ಚಿನ ವಿಚಾರಣೆಗೆ ಮುಂಬೈಗೆ ಕರೆದೊಯ್ಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ರಾಜ್ಯಾದ್ಯಂತ ಮಿಂಚಿನ ಕಾರ್ಯಾಚರಣೆ : ಆರು ಶಂಕಿತ ಐಸಿಸ್‌ ಉಗ್ರರ ಸೆರೆ

ರಾಜ್ಯಾದ್ಯಂತ ಜಂಟಿಯಾಗಿ ಮಿಂಚಿನ ಕಾರ್ಯಾಚರಣೆ ನಡೆಸಿರುವ ಎನ್‌ಐಎ, ಎಟಿಎಸ್‌ ಮತ್ತು ಪೊಲೀಸರು ಬೆಂಗಳೂರು, ಮಂಗಳೂರು ಮತ್ತು ತುಮಕೂರಿನಲ್ಲಿ ದಾಳಿ ನಡೆಸಿ ಒಟ್ಟು 6 ಜನ ಶಂಕಿತ ಐಸಿಸ್‌ ಉಗ್ರರನ್ನು ಬಂಧಿಸಿದ್ದಾರೆ. ಮಹಾನಗರದಲ್ಲಿಯೇ ನಾಲ್ವರು ಶಂಕಿತ ಐಸಿಎಸ್ ಉಗ್ರಗಾಮಿಗಳನ್ನು ಎಟಿಎಸ್ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಪೊಲೀಸರು ಮತ್ತು ಎನ್ಐಎ ಜಂಟಿ ಕಾರ್ಯಾಚರಣೆ ಮೂಲಕ ಭರ್ಜರಿ ಬೇಟೆಯಾಡಿದ್ದಾರೆ.

ಗುರುವಾರ ತಡರಾತ್ರಿ ಎರಡು ಗಂಟೆಯಿಂದ ಬೆಳಗ್ಗೆ ಏಳು ಗಂಟೆಯವರೆಗೆ ಮುಂಬೈ, ಕೇರಳ ಹಾಗೂ ಚೆನ್ನೈ ಎನ್ಐ ಎ ಮತ್ತು ಎಟಿಎಸ್‌, ಸ್ಥಳೀಯ ಪೊಲೀಸರ ಕಾರ್ಯಾಚರಣೆಯಲ್ಲಿ ಐಸಿಸ್ ಉಗ್ರರ ಪರ ಪ್ರಚಾರ ಮಾಡುತ್ತಿದ್ದ ಉಗ್ರನನ್ನು ಬಂಧಿಸಲಾಗಿದೆ. ಭಯೋತ್ಪಾದನಾ ನಿಗ್ರಹ ಪಡೆಯವರು ಉಗ್ರರನ್ನು ಬಂಧಿಸಿ ಕರೆದೊಯ್ದಿದ್ದಾರೆ. ಉಗ್ರರಿಂದ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ. ನಿನ್ನೆ ತಡರಾತ್ರಿ ಸರ್ಜಾಪುರ ರಸ್ತೆ ಜಕ್ಕಸಂದ್ರದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಉಗ್ರರನ್ನು ದಾಳಿ ನಡೆಸಿ ಬಂಧಿಸಲಾಗಿದೆ ಎನ್ನಲಾಗಿದೆ.

ಗಣರಾಜ್ಯೋತ್ಸವದದಂದು ಸ್ಫೋಟಕ್ಕೆ ಸಂಚು ..!

ಈ ಉಗ್ರರು ರಾಜ್ಯೋತ್ಸವದಂದು ಭಾರಿ ಸ್ಫೋಟ ನಡೆಸುವ ಸಂಚು ರೂಪಿಸಿದ್ದರು ಎನ್ನಲಾಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಎಟಿಎಸ್ ಪೊಲೀಸರು ಬಂಧಿಸಿರುವ ಶಂಕಿತ ಆಲ್ಖೈದಾ ಉಗ್ರ ಸೈಯ್ಯದ್ ಅನ್ಸರ್ ಷಾ ಖಾಸ್ಮಿ ನೀಡಿದ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿತ್ತು. ಬಂಧನದ ನಂತರ ಇವರನ್ನು ಎಸ್ಐಟಿ ಪೊಲೀಸರು ತಮ್ಮೊಂದಿಗೆ ಕರೆದೊಯ್ದಿದ್ದು, ಬಂಧಿತ ಐಸಿಸ್ ಉಗ್ರರ ವಿವರ ಲಭ್ಯವಾಗಿಲ್ಲವೆಂದು ರಾಜ್ಯ ಪೊಲೀಸರು ತಿಳಿಸಿದ್ದಾರೆ.

ಗೊಂದಲಯುತವಾದ ಹೇಳಿಕೆ ನೀಡದಂತೆ ಮಾಧ್ಯಮಕ್ಕೆ ಕಮಿಷನರ್ ವಿನಂತಿ :

ಶಂಕಿತ ಉಗ್ರ ನಝಮ್ವುಲ್ಲಾ ಹುಡಾನ ಬಗ್ಗೆ ಹೆಚ್ಚಿನ ಮಾಹಿತಿ ನಮಗೆ ತಿಳಿದಿಲ್ಲ. ಇನ್ವೆಷ್ಟಿಗೆಷನ್ ಏಜೆನ್ಸಿಯು( ಎನ್.ಐ.ಎ.) ಸಹಾಯ ಕೋರಿದ ಹಿನ್ನೆಲೆಯಲ್ಲಿ ನಾವು ಮಂಗಳೂರು ಪೊಲೀಸರು ಬಂಧನಕ್ಕೆ ಸಹಕರಿಸಿದ್ದೇವೆ. ಆತನ ವಿಚಾರಣೆಯನ್ನು ಎನ್.ಐ.ಎ ವಹಿಸಿರುವುದರಿಂದ ಈ ಬಗ್ಗೆ ನಮಗೆ ಯಾವುದೇ ಮಾಹಿತಿಗಳು ಲಭ್ಯವಾಗುವುದಿಲ್ಲ. ಅದ್ದರಿಂದ ಮಾಧ್ಯಮಗಳು ಗೊಂದಲಯುತವಾದ ಹೇಳಿಕೆಗಳನ್ನು ನೀಡಬಾರದು ಎಂದು ಮಂಗಳೂರು ನಗರ ಪೊಲೀಸ್ ಅಯುಕ್ತ ಚಂದ್ರಶೇಖರ್ ವಿನಂತಿಸಿದ್ದಾರೆ.

Click :ಮಂಗಳೂರು ಮತ್ತು ತುಮಕೂರಿನಲ್ಲಿ ಶಂಕಿತ ಐಸಿಸ್‌ ಉಗ್ರರ ಸೆರೆ

Write A Comment