ರಾಷ್ಟ್ರೀಯ

‘ಬೋಸ್ ಚಿತಾಭಸ್ಮ’ ತರಲು ಭಾರತ ಸರ್ಕಾರ ನಿರಾಕರಿಸಿದ್ದು ಏಕೆ?

Pinterest LinkedIn Tumblr

bose-jayantiನವದೆಹಲಿ: ಟೋಕಿಯೋದ ಬೌದ್ಧ ದೇಗುಲದಲ್ಲಿ ಇರಿಸಲಾಗಿದ್ದ ‘ನೇತಾಜಿ ಚಿತಾಭಸ್ಮ’ವನ್ನು ಭಾರತ ಸರ್ಕಾರವು ರಾಷ್ಟ್ರಕ್ಕೆ ತರಲು ಹಿಂಜರಿದದ್ದು ಏಕೆ ? ಈ ಪ್ರಶ್ನೆಗೆ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿದ 100 ನೇತಾಜಿ ರಹಸ್ಯ ಕಡತಗಳಲ್ಲಿ ಉತ್ತರ ಲಭಿಸಿದೆ. ‘ಭಾರಿ ರಾಜಕೀಯ ಹಿನ್ನಡೆ ಆಗಬಹುದು’ ಎಂಬ ಭೀತಿಯೇ ಇದಕ್ಕೆ ಕಾರಣ ಎಂಬುದು 1970ರ ಸುಮಾರಿನ ‘ಅತಿ ರಹಸ್ಯ’ ಎಂಬುದಾಗಿ ಹಣೆಪಟ್ಟಿ ಹಚ್ಚಿದ್ದ ಕಡತದಲ್ಲಿ ದಾಖಲಾಗಿದೆ.

ಶನಿವಾರ ಬಿಡುಗಡೆ ಮಾಡಲಾದ ದಾಖಲೆಗಳಲ್ಲಿ ಗೃಹ ಸಚಿವಾಲಯ, ಗುಪ್ತಚರದಳ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಧ್ಯೆ ವಿನಿಯಮಯವಾದ ‘ಪತ್ರಗಳು’ ಕೂಡಾ ಸೇರಿವೆ. ಟೋಕಿಯೋದಲ್ಲಿನ ಭಾರತೀಯ ರಾಜತಾಂತ್ರಿಕ ಕಚೇರಿಯು ರೆಂಕೋಜಿ ದೇಗುಲದಲ್ಲಿ ಇರಿಸಲಾಗಿದ್ದ ‘ಬೋಸ್ ಚಿತಾಭಸ್ಮ’ವನ್ನು ಭಾರತಕ್ಕೆ ತರುವ ಪ್ರಸ್ತಾಪ ಕಳುಹಿಸಿದ್ದಾಗ ಈ ಪತ್ರಗಳ ವಿನಿಮಯವಾಗಿತ್ತು.

ಬಹುತೇಕ ಆಡಳಿತಗಾರರು ಒಬ್ಬರ ಬಳಿಕ ಮತ್ತೊಬ್ಬರು ಹಲವಾರು ವರ್ಷಗಳ ಕಾಲ ಇದೇ ಅಭಿಪ್ರಾಯ ನೀಡುತ್ತಲೇ ಬಂದಿದ್ದರು. 200 ಪುಟಗಳ ಹಲವಾರು ವರ್ಷಗಳ ಪತ್ರಗಳನ್ನು ಒಳಗೊಂಡ ಕಡತದಲ್ಲಿ ಈ ಅಭಿಪ್ರಾಯಗಳು ದಾಖಲಾಗಿವೆ. ‘ಸುಭಾಷ್ ಚಂದ್ರ ಬೋಸ್ ಅವರು 1945ರ ವಿಮಾನ ಅಪಘಾತದಲ್ಲಿ ನಿಧನರಾದರು ಎಂಬುದನ್ನು ನಂಬಲು ಸಿದ್ಧವಿಲ್ಲದ ನೇತಾಜಿ ಕುಟುಂಬ ಮತ್ತು ಸಾರ್ವಜನಿಕರ ಒಂದು ವರ್ಗದಿಂದ ಪ್ರತಿಕೂಲ ಪ್ರತಿಕ್ರಿಯೆಗಳು ಬರಬಹುದಾದ ಕಾರಣ ಭಾರತ ಸರ್ಕಾರ ಚಿತಾಭಸ್ಮವನ್ನು ಭಾರತಕ್ಕೆ ತರಲು ಒಲವು ಹೊಂದಿಲ್ಲ’ ಎಂಬ ಅಭಿಪ್ರಾಯ ಈ ಪತ್ರಗಳಲ್ಲಿ ವ್ಯಕ್ತವಾಗಿದೆ.

1976ರಲ್ಲಿ ತುರ್ತು ಪರಿಸ್ಥಿತಿ ಕಾಲದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಆಗಿನ ಜಂಟಿ ಕಾರ್ಯದರ್ಶಿ ಎನ್.ಎನ್. ಝಾ, 1976ರಲ್ಲಿ ಗುಪ್ತಚರ ದಳದ ಜಂಟಿ ನಿರ್ದೇಶಕ ಟಿವಿ ತೇಜೇಶ್ವರ್ ಅವರು ಇಂತಹ ಅಭಿಪ್ರಾಯಗಳನ್ನು ನೀಡಿದ್ದು ಕಡತದಲ್ಲಿ ದಾಖಲಾಗಿದೆ. ‘ಚಿತಾಭಸ್ಮ’ವನ್ನು ಭಾರತಕ್ಕೆ ತಂದರೆ ರಾಜಕೀಯ ಹಿನ್ನಡೆ ಆಗಬಹುದು ಎಂಬುದು ಟಿವಿ ತೇಜೇಶ್ವರ್ ನೀಡಿದ್ದ ಅಭಿಪ್ರಾಯದಲ್ಲಿ ವ್ಯಕ್ತವಾಗಿದೆ.

Write A Comment