ಮುಂಬೈ

ಸಿಎಂ ಫಡ್ನವೀಸ್‌ ಪತ್ನಿ ಅಮೃತಾ ಬಾಲಿವುಡ್‌ಗೆ

Pinterest LinkedIn Tumblr

4_1ಮುಂಬಯಿ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರ ಪತ್ನಿ ಅಮೃತಾ ಫಡ್ನವೀಸ್‌ ಅವರು ಸದ್ದಿಲ್ಲದೆ ಬಾಲಿವುಡ್‌ಗೆ ಲಗ್ಗೆ ಇಟ್ಟಿದ್ದಾರೆ.

ಅವರು ನಿಮಗೆ ದೊಡ್ಡ ತೆರೆ ಮೇಲೆ ನಟನೆಯ ರೂಪದಲ್ಲಿ ನೋಡಲು ಸಿಗುತ್ತಾರೆ ಎಂದು ನೀವು ಯೋಚಿಸಿದ್ದಲ್ಲಿ, ಅದು ನಿಮ್ಮ ತಪ್ಪು ಕಲ್ಪನೆಯಾಗುತ್ತದೆ. ಹೌದು, ಅಮೃತಾ ಅವರು ಆ್ಯಕ್ಟಿಂಗ್‌ ಅಲ್ಲ ಬದಲಾಗಿ ಬಾಲಿವುಡ್‌ನ‌ಲ್ಲಿ ತಮ್ಮ ಸುಮಧುರ ಧ್ವನಿಯಿಂದ ಮೋಡಿ ಮಾಡಲಿದ್ದಾರೆ.

ಕುನಾಲ್‌ ಕೊಹ್ಲಿಯವರ ಫಿರ್‌ ಸೇ (ಲವ್‌ ಸ್ಟೋರಿ) ಹಾಗೂ ಪ್ರಕಾಶ್‌ ಜಾ ಅವರ ಜೈ ಗಂಗಾಜಲ್‌ ಚಿತ್ರಕ್ಕೆ ಅಮೃತಾ ಫಡ್ನವೀಸ್‌ ಅವರು ಈಗಾಗಲೇ ಹಾಡುಗಳನ್ನು ರೆಕಾರ್ಡ್‌ ಮಾಡಿದ್ದಾರೆ.

ಕುನಾಲ್‌ ಕೊಹ್ಲಿ ಅವರ ಚಿತ್ರಕ್ಕೆ ಅಮೃತಾ ಅವರು ಯಾವ ಹಾಡನ್ನು ಹಾಡಿದ್ದರೋ, ಅದನ್ನು ನಾನು ಕೇಳಿದೆ ಮತ್ತು ಅವರ ಧ್ವನಿ ನನಗೆ ತುಂಬಾ ಇಷ್ಟವಾಗಿದೆ. ಅವರ ಧ್ವನಿ ತುಂಬಾ ಸುಂದರ, ಕೋಮಲ ಮತ್ತು ಗಂಭೀರವಾಗಿದೆ ಎಂದು ಚಿತ್ರ ನಿರ್ಮಾಪಕ ಪ್ರಕಾಶ್‌ ಝಾ ಅವರು ನುಡಿದಿದ್ದಾರೆ.

ನನಗೆ ನನ್ನ ಚಿತ್ರದ ಸಬ್‌ ಧನ್‌ ಮಾಟಿ ಎಂಬ ಹಾಡಿಗೆ ಯಾವ ಧ್ವನಿ ಬೇಕಾಗಿತ್ತೋ, ಅದೇ ರೀತಿ ಧ್ವನಿ ಅಮೃತಾ ಅವರಲ್ಲಿದೆ ಎಂದು ನಾನು ಭಾವಿಸಿದ್ದೇನೆ. ಈ ನಿಟ್ಟಿನಲ್ಲಿ ನಾನು ನನ್ನ ಕಂಪೋಸರ್‌ ಸಲೀಂ ಸುಲೇಮಾನ್‌ ಅವರಿಗೆ ಚಿತ್ರದ ಹಾಡಿಗೆ ಅಮೃತಾ ಅವರೊಂದಿಗೆ ಸಿದ್ಧತೆ ನಡೆಸಲು ಹೇಳಿದ್ದೆ. ಅವರಿಗೂ ಅಮೃತಾ ಅವರ ಧ್ವನಿ ಹಿಡಿಸಿದೆ. ಕಳೆದ ತಿಂಗಳು ನಾವು ಎರಡು ಸೆಶನ್‌ನಲ್ಲಿ ಈ ಹಾಡನ್ನು ರೆಕಾರ್ಡ್‌ ಮಾಡಿದ್ದೇವೆ ಎಂದು ಚಲನಚಿತ್ರ ನಿರ್ಮಾಪಕ, ಪ್ರಕಾಶ್‌ ಝಾ ಹೇಳಿದ್ದಾರೆ.

ಪ್ರಿಯಾಂಕಾ ಚೋಪ್ರಾ ಅವರ ಪ್ರಮುಖ ಪಾತ್ರದೊಂದಿಗೆ ತೆರೆಗೆ ಬರಲಿರುವ ಜೈ ಗಂಗಾಜಲ್‌ ಚಿತ್ರದಲ್ಲಿ ಸುಮಾರು 12 ಹಾಡುಗಳಿದ್ದು, ಎಲ್ಲ ಹಾಡುಗಳು ಚಿತ್ರದ ಬ್ಯಾಕ್‌ಗ್ರೌಂಡ್‌ನ‌ಲ್ಲಿ ಕೇಳಿ ಬರಲಿವೆ. ಈ ಚಿತ್ರದ ಒಂದು ದೃಶ್ಯದಲ್ಲಿ ಝಾ ಅವರು ಸ್ವತಃ ಕಾಣಿಸಲಿದ್ದು, ಅಮೃತಾ ಹಾಡಿರುವ ಹಾಡು ಈ ದೃಶ್ಯದ ಒಂದು ಭಾಗವಾಗಿದೆ.

ಚಿತ್ರದಲ್ಲಿ ನಾನು ಪ್ರಿಯಾಂಕಾ ಚೋಪ್ರಾ ಅವರ ಜೂನಿಯರ್‌ ಬಿಪಿ ಸಿಂಗ್‌ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ ಎಂದು ಪ್ರಕಾಶ್‌ ಝಾ ತಿಳಿಸಿದ್ದಾರೆ.

ಈ ಹಿಂದೆ ಮರಾಠಿಯಲ್ಲಿ ಹಾಡಿದ್ದರು

ವಿಶೇಷವೆಂದರೆ, ಅಮೃತಾ ಅವರು ಇದಕ್ಕೂ ಮೊದಲು ಮರಾಠಿಯ ಸಂಘರ್ಷ ಯಾತ್ರಾ ಚಿತ್ರದಲ್ಲಿ ಹಾಡಿದ್ದಾರೆ. ಇದು ಬಿಜೆಪಿ ವರಿಷ್ಠ ನಾಯಕ ದಿವಂಗತ ಗೋಪಿನಾಥ್‌ ಮುಂಢೆ ಅವರ ಜೀವನಾಧಾರಿತ ಚಿತ್ರವಾಗಿದೆ.
-ಉದಯವಾಣಿ

Write A Comment