ಹೈದರಾಬಾದ್: ಸಂಚಾರ ನಿಯಮವನ್ನು ಉಲ್ಲಂಘಿಸಿದ್ದು ಅಲ್ಲದೇ, ಕರ್ತವ್ಯ ನಿರತ ಪೊಲೀಸನೋರ್ವನ ಮೇಲೆ ಯುವತಿಯೊಬ್ಬರು ಹಲ್ಲೆ ನಡೆಸಿ ಬಾಯಿಗೆ ಬಂದಂತೆ ನಿಂದಿಸಿರುವ ಘಟನೆಯೊಂದು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ನಾಗಾರಂ ಪ್ರದೇಶದಲ್ಲಿ ಬುಧವಾರ ನಡೆದಿದೆ.
ಬಿ.ಟೆಕ್ ವಿದ್ಯಾರ್ಥಿಯಾಗಿರುವ ಯುವತಿ ತನ್ನ ಸಹೋದರನೊಂದಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಳು. ಈ ವೇಳೆ ಸಂಚಾರ ನಿಯಮವನ್ನು ಉಲ್ಲಂಘಿಸಿದ್ದ ಸಹೋದರ ತಪ್ಪು ದಾರಿಯಲ್ಲಿ ವಾಹನದಲ್ಲಿ ಹೋಗುತ್ತಿದ್ದ. ಇದನ್ನು ಕಂಡ ಕರ್ತವ್ಯ ನಿರತ ಪೊಲೀಸನೋರ್ವ ವಾಹನದ ಫೋಟೋವನ್ನು ತೆಗೆದಿದ್ದಾನೆ.
ಪೊಲೀಸ್ ಫೋಟೋ ತೆಗೆಯುವುದನ್ನು ಕಂಡ ಯುವತಿ ತೀವ್ರವಾಗಿ ಕೆಂಡಾಮಂಡಲವಾಗಿದ್ದಾಳೆ. ನಂತರ ಪೊಲೀಸ್ ಜೊತೆ ವಾಗ್ವಾದಕ್ಕಿಳಿದಿದ್ದಾಳೆ. ಮಾತಿನ ಚಕಮಕಿ ವೇಳೆ ಯುವತಿ ಪೇದೆ ಮೇಲೆ ಹಲ್ಲೆ ನಡೆಸಿದ್ದಾಳೆ. ಅಲ್ಲದೆ, ಅವಾಚ್ಯ ಶಬ್ಧಗಳಿಂದ ನಿಂದಿನಿಸಿದ್ದಾಳೆ. ಈ ಘಟನೆಯ ವೀಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಓಡಾಡುತ್ತಿದ್ದು, ವೀಡಿಯೋವೀಗ ವೈರಲ್ ಆಗಿದೆ.
ಹಲ್ಲೆ ನಡೆಸಿದವರನ್ನು ಹರ್ಶಿತಾ ಹಾಗೂ ಆಕೆಯ ಸಹೋದರ ಸಾಯಿ ಕಿಶೋರ್ ಎಂದು ಹೇಳಲಾಗುತ್ತಿದ್ದು, ಹಲ್ಲೆ ಗೊಳಗಾದ ಪೇದೆಯನ್ನು ವೆಂಕಟೇಶ್ ಯಾದವ್ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಹಲ್ಲೆ ನಡೆಸಿದ ಯುವತಿ ಹಾಗೂ ಆಕೆಯ ಸಹೋದರನ ವಿರುದ್ಧ ಐಪಿಸಿ ಸೆಕ್ಷನ್ 353ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಕೀಸರ ಪೊಲೀಸ್ ಠಾಣಾಧಿಕಾರಿ ಗುರುವಾ ರೆಡ್ಡಿ ಅವರು ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.