ಮುಂಬಯಿ, ಜ.27: ದೇಶದ 100 ಮಂದಿ ಸಾಧಕಿಯರಲ್ಲಿ ಒಬ್ಬರಾಗಿ ಆಯ್ಕೆಯಾದ ರಾಯನ್’ಸ್ ಅಂತರಾಷ್ಟ್ರೀಯ ಶೈಕ್ಷಣಿಕ ಸಮೂಹದ ವ್ಯವಸ್ಥಾಪಕ ನಿರ್ದೇಶಕಿ ಮೇಡಂ ಗ್ರೇಸ್ ಪಿಂಟೋ ಭಾರತದ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಂದ ಗೌರವಿಸಲ್ಪಟ್ಟರು.
ಜ.22 ರಂದು ರಾಷ್ಟ್ರಪತಿ ಭವನದಲ್ಲಿ ನಡೆದ `ಬೇಟಿ ಬಚಾವೊ, ಬೇಟಿ ಪಢಾವೊ ಯೋಜನೆ’ಯ ಪ್ರಥಮ ವಾರ್ಷಿಕೋತ್ಸವ ಸಮಾರಂಭದಲ್ಲಿ ಮೇಡಂ ಪಿಂಟೋ ಅವರನ್ನು ರಾಷ್ಟ್ರಪತಿ ಗೌರವಿಸಿದ್ದಾರೆ. ದೇಶದ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಪ್ರಶಂಸನೀಯ ಮತ್ತು ಅಸಾಧರಣಾ ಕೊಡುಗೆಗಳಿಗಾಗಿ ಭಾರತ ಸರಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕೇಂದ್ರ ಸಚಿವಾಲಯ ಗ್ರೇಸ್ ಪಿಂಟೋ ಆಯ್ಕೆ ಮಾಡಿತ್ತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕೇಂದ್ರ ಸಚಿವಾಲಯವು ವಿವಿಧ ಕ್ಷೇತ್ರಗಳಾದ ಶಿಕ್ಷಣ, ಕಲೆ ಮತ್ತು ಸಂಸ್ಕೃತಿ, ಪರಿಸರ, ಆರೋಗ್ಯ ಸುರಕ್ಷತೆ ಮೊದಲಾದೆಡೆಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ 100 ಮಂದಿ ಸಾಧಕಿಯರನ್ನು ಆಯ್ಕೆ ಮಾಡಿದೆ. ಈ ಆಯ್ಕೆ ಪ್ರಕ್ರಿಯೆಯಲ್ಲಿ ಸಾಮಾಜಿಕ ತಾಣಗಳ ಮೂಲಕ ಸಾರ್ವಜನಿಕರು ಆಯ್ಕೆ ಮಾಡುವ ಪ್ರಕ್ರಿಯೆಯನ್ನೂ ಬಳಸಿಕೊಳ್ಳಲಾಗಿತ್ತು.
ಭಾರತದ ಅಗ್ರ ಶ್ರೇಯಾಂಕದ ಮಹಿಳಾ ಸಾಧಕಿಯರ ಗೌರವ ಸ್ವೀಕರಿಸಿ ಮಾತನಾಡಿದ ಮೇಡಂ ಪಿಂಟೋ, `ನಾನು ಮೊದಲನೇಯದಾಗಿ ದೇಶದ ಮಹಿಳೆಯರ ಸಾಧನೆಗಳು ಮತ್ತು ಅವರ ಕೊಡುಗೆಗಳನ್ನು ಗುರುತಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯವನ್ನು ಪ್ರಶಂಸಿಸುತ್ತೇನೆ. ನನಗೆ ಈ ಗೌರವವನ್ನು ದಯಪಾಲಿಸಿದ ಗೌರವಾನ್ವಿತ ರಾಷ್ಟ್ರಪತಿಯವರಿಗೆ ಕೃತಜ್ಞತೆಯನ್ನು ಅರ್ಪಿಸುತ್ತಿದ್ದೇನೆ.
ಈ ಗೌರವ ನನ್ನ ಪಾಲಿಗೆ ಕರುಣಿಸಿದ ಭಗವಂತ ಜೀಸಸ್ ಕ್ರಿಸ್ತನಿಗೆ ಅಭಾರಿ ಆಗಿದ್ದೇನೆ. ಈ ಗೌರವವನ್ನು ನನ್ನ ಎಲ್ಲಾ ರಿಯಾನ್ ಸಂಸ್ಥೆಯ ಸಿಬ್ಬಂದಿಗಳಿಗೆ, ಕುಟುಂಬ ಸಮುದಾಯಕ್ಕೆ ಮತ್ತು ಆತ್ಮೀಯ ಹಿತೈಷಿಗಳಿಗೆ ಅರ್ಪಿಸುತ್ತೇನೆ. ಶಿಕ್ಷಣ ಕ್ಷೇತ್ರಕ್ಕೆ ನಾವು ನೀಡುವ ಕೊಡುಗೆಗಳನ್ನು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ನಡೆಸುತ್ತಿರುವ ಪ್ರಯತ್ನಗಳನ್ನು ಹೀಗೆ ಮುಂದುವರಿಸುತ್ತೇವೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.
ವರದಿ ಚಿತ್ರ : ರೋನ್ಸ್ ಬಂಟ್ವಾಳ್