ತಿರುಚ್ಚಿ: ಓರ್ವ ಭಿಕ್ಷುಕನ ಸಂಪಾದನೆ ಎಷ್ಟಿರಬಹುದು.. ಅಬ್ಬಾಬಾ ಎಂದರೆ 300 ಅಥವಾ 400 ಎಂದು ನೀವು ಊಹಿಸಿದರೆ ತಪ್ಪು..
ಏಕೆಂದರೆ ಇತ್ತೀಚೆಗೆ ಬಹಿರಂಗಗೊಂಡ ವರದಿಯ ಪ್ರಕಾರ ಭಿಕ್ಷುಕರ ಒಂದು ದಿನದ ಗಳಿಕೆ ಬರೊಬ್ಬರಿ 1 ಸಾವಿರ ರು.ಗಳನ್ನು ಮೀರುತ್ತಂತೆ. ಇತ್ತೀಚೆಗೆ ತಮಿಳುನಾಡಿನಲ್ಲಿ ಮಾನವ ಕಳ್ಳಸಾಗಣೆ ವಿರೋಧಿ ಘಟಕ (Anti-Human Trafficking Unit-AHTU)ದ ಸಿಬ್ಬಂದಿಗಳು ನಡೆಸಿದ ಕಾರ್ಯಾಚರಣೆ ವೇಳೆ ಈ ಮಾಹಿತಿ ಹೊರಬಿದ್ದಿದ್ದು, ಭಿಕ್ಷೆ ಬೇಡಲೆಂದೇ ಹೊರ ರಾಜ್ಯಗಳಿಂದ ಮಹಿಳೆಯರು ತಮಿಳುನಾಡಿಗೆ ಆಗಮಿಸುತ್ತಾರಂತೆ. ಇಲ್ಲಿ ಪುಟ್ಟಮಕ್ಕಳನ್ನು ಹೆಗಲಿಗೇರಿಸಿಕೊಂಡು ಅತಿ ಹೆಚ್ಚು ಜನರಿರುವ ರಸ್ತೆಗಳಲ್ಲಿ ಭಿಕ್ಷೆ ಬೇಡಲಾರಂಭಿಸುತ್ತಾರೆ ಎಂದು AHTU ನ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.
“ಒಂದಷ್ಟು ಜನರ ಗುಂಪು ಭಿಕ್ಷೆ ಬೇಡಲೆಂದೇ ಕರ್ನಾಟಕ, ಆಂಧ್ರ ಪ್ರದೇಶ, ರಾಜಸ್ತಾನ ಮತ್ತು ಬಿಹಾರ ರಾಜ್ಯಗಳಿಂದ ಆಗಮಿಸುತ್ತಾರೆ. ಬರುವಾಗ ಕೇವಲ ತಾವು ಮಾತ್ರ ಬರದೇ ತಮ್ಮೊಂದಿಗೆ ಪುಟ್ಟ-ಪುಟ್ಟ ಮಕ್ಕಳನ್ನೂ ಕರೆತರುತ್ತಾರೆ. ತಮ್ಮ ಬಳಿ ಮಕ್ಕಳಿಲ್ಲದೇ ಹೋದರೆ ಬೇರೆಯವರಿಂದ ಮಕ್ಕಳನ್ನು ಬಾಡಿಗೆಗೆ ತರುತ್ತಾರೆ. ಹೀಗೆ ಮಕ್ಕಳನ್ನು ತರುವ ದೊಡ್ಡ ಗುಂಪೇ ಇದ್ದು, ಇವರೆಲ್ಲರೂ ಅರಿಯಮಂಗಲಂ ಮತ್ತು ಪೊನ್ಮಲೈ ಪ್ರದೇಶಗಳಲ್ಲಿ ತಾತ್ಕಾಲಿಕ ಟೆಂಟ್ ಗಳನ್ನು ನಿರ್ಮಿಸಿಕೊಂಡಿರುತ್ತಾರೆ.
ಬಳಿಕ ತಮ್ಮೊಂದಿಗೆ ಮಕ್ಕಳನ್ನು ಹೆಗಲಮೇಲೆ ಹಾಕಿಕೊಂಡು ಪ್ರಮುಖ ಬೀದಿಗಳಲ್ಲಿ ಮತ್ತು ಹೆಚ್ಚು ಜನರು ಓಡಾಡುವ ರಸ್ತೆಗಳಲ್ಲಿ ಭಿಕ್ಷೆಗೆ ಇಳಿಯುತ್ತಾರೆ. ತಾವು ಬೇರೊಂದು ಊರಿಂದ ಬಂದಿದ್ದು, ತಮ್ಮ ವಸ್ತುಗಳನ್ನೆಲ್ಲಾ ಕಳ್ಳರು ಕದ್ದಿದ್ದಾರೆ. ಇದೀಗ ಊರಿಗೆ ಹೋಗಲು ಕೂಡ ದುಡ್ಡಿಲ್ಲ ಎಂದು ಸುಳ್ಳು ಹೇಳಿ ಭಿಕ್ಷೆ ಪಡೆಯುತ್ತಾರೆ. ಹೀಗೆ ದಿನವೊಂದಕ್ಕೆ ಇವರ ಸಂಪಾದನೆ ಸುಮಾರು 800 ರುಗಳಿಂದ 1000 ರು.ವರೆಗೂ ಕೆಲವೊಮ್ಮೆ 2000 ರುಗಳನ್ನೂ ಮೀರುತ್ತದೆ” ಎಂದು ಎಹೆಚ್ ಟಿಯು ಸಿಬ್ಬಂದಿ ಹೇಳಿದ್ದಾರೆ.
ಇಂತಹ ಮಹಿಳೆಯರ ವಿರುದ್ಧ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಕಳೆದ ಜನವರಿ 15ರಿಂದ ಈವರೆಗೂ ಸುಮಾರು 14 ಮಕ್ಕಳನ್ನು ರಕ್ಷಿಸಿದ್ದಾರೆ. ಪ್ರಸ್ತುತ ಎಲ್ಲ ಮಕ್ಕಳನ್ನು ಮಕ್ಕಳ ಕಲ್ಯಾಣ ಇಲಾಖೆಯ ಅಧೀನಕ್ಕೆ ಒಪ್ಪಿಸಿದ್ದು, ಮುಂದಿನ ದಿನಗಳಲ್ಲಿ ಅವರ ಪೋಷಕರಿಗೆ ಒಪ್ಪಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೆಲ ಪ್ರಕರಣಗಳಲ್ಲಿ ಭಿಕ್ಷೆ ಬೇಡಲೆಂದೇ ಮಕ್ಕಳನ್ನು ಬೇರೊಬ್ಬರಿಂದ ಬಾಡಿಗೆಗೆ ತಂದ ಪ್ರಕರಣಗಳೂ ಕೂಡ ವರದಿಯಾಗಿವೆ. ಇಂತಹವರ ವಿರುದ್ಧ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಎಚ್ಚರಿಕೆ ನೀಡಿದ ಬಳಿಕ ಇವರು ಮತ್ತೊಂದು ಜಾಗವನ್ನು ಆಯ್ಕೆ ಮಾಡಿಕೊಂಡು ಮತ್ತೆ ಅಲ್ಲಿ ಇದೇ ರೀತಿ ಭಿಕ್ಷೆ ಬೇಡಲಾರಂಭಿಸುತ್ತಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.