ನವದೆಹಲಿ (ಪಿಟಿಐ): ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಸೋಮವಾರ ಅಲ್ಪ ಇಳಿಕೆ ಕಂಡಿದ್ದು, ಕ್ರಮವಾಗಿ ನಾಲ್ಕು ಹಾಗೂ ಮೂರು ಪೈಸೆಗಳಷ್ಟು ತಗ್ಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಕಳೆದೆರಡು ವಾರಗಳಲ್ಲಿ ಪ್ರತಿ ಬ್ಯಾರಲ್ಗೆ ನಾಲ್ಕು ಅಮೆರಿಕನ್ ಡಾಲರ್ಗಳಷ್ಟು (ಅಂದಾಜು 270 ರೂಪಾಯಿ) ಇಳಿಕೆ ಕಂಡಿದೆ. ಈ ಲೆಕ್ಕಾಚಾರದ ಪ್ರಕಾರ, ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಕ್ರಮವಾಗಿ ₹1.04 ಹಾಗೂ ₹1.53ಗಳಷ್ಟು ಕಡಿಮೆಯಾಗಬೇಕಿತ್ತು.
ಆದರೆ, ದರ ಇಳಿಕೆಯ ಪ್ರಯೋಜನವನ್ನು ಸಂಪೂರ್ಣವಾಗಿ ಗ್ರಾಹಕರಿಗೆ ವರ್ಗಾಯಿಸಲು ನಿರಾಕರಿಸಿದ ಕೇಂದ್ರ ಸರ್ಕಾರ, ಭಾನುವಾರವಷ್ಟೇ ಅಬಕಾರಿ ಸುಂಕ ಹೆಚ್ಚಿಸಿತ್ತು. ಪ್ರತಿ ಲೀಟರ್ ಪೆಟ್ರೋಲ್ ಮೇಲೆ 1 ರೂಪಾಯಿ ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲೆ 1.50 ರೂಪಾಯಿ ಸುಂಕ ವಿಧಿಸಿತ್ತು.
ಪರಿಷ್ಕೃತ ದರಗಳನ್ವಯ ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ₹ 59.95 ಹಾಗೂ ಡೀಸೆಲ್ ದರ ₹ 44.68 ಎಂದು ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಿಳಿಸಿದೆ.
ಈ ಬಾರಿಯ ಅಬಕಾರಿ ಸುಂಕ ಹೆಚ್ಚಳದಿಂದ ಪ್ರಸಕ್ತ ಆರ್ಥಿಕ ವರ್ಷದಲ್ಲಿ 3200 ಕೋಟಿ ರೂಪಾಯಿ ಹಣವು ಕೇಂದ್ರ ಸರ್ಕಾರ ಬೊಕ್ಕಸಕ್ಕೆ ಹೆಚ್ಚುವರಿಯಾಗಿ ದೊರೆಯುತ್ತದೆ.
ಕಳೆದೊಂದು ತಿಂಗಳಲ್ಲಿ ಅಬಕಾರಿ ಸುಂಕವನ್ನು ಹೆಚ್ಚಿಸಿದ್ದು ಇದು ಮೂರನೇ ಬಾರಿ. ಜನವರಿ 17ರಂದು ಪೆಟ್ರೋಲ್ ಮೇಲೆ 75 ಪೈಸೆ ಹಾಗೂ ಡೀಸೆಲ್ ಮೇಲೆ 2 ರೂಪಾಯಿ ಹೆಚ್ಚುವರಿ ಅಬಕಾರಿ ಸುಂಕ ವಿಧಿಸಿತ್ತು.
ಅದಕ್ಕೂ 15 ದಿನ ಮೊದಲು, ಜನವರಿ 2ರಂದು ಪೆಟ್ರೋಲ್ ಮೇಲೆ 37 ಪೈಸೆ ಹಾಗೂ ಡೀಸೆಲ್ ಮೇಲೆ ₹2 ಅಬಕಾರಿ ಸುಂಕ ವಿಧಿಸಲಾಗಿತ್ತು.