ನವದೆಹಲಿ (ಪಿಟಿಐ): ಅನುಪಮ್ ಖೇರ್ ಅವರು ಮತ್ತೊಮ್ಮೆ ವೀಸಾಗೆ ಅರ್ಜಿ ಸಲ್ಲಿಸಿದರೆ ಕರಾಚಿ ಸಾಹಿತ್ಯೋತ್ಸವದಲ್ಲಿ ಭಾಗವಹಿಸಲು ವೀಸಾ ನೀಡುವುದಾಗಿ ಪಾಕಿಸ್ತಾನದ ಹೈಕಮೀಷನರ್ ಅಬ್ದುಲ್ ಬಸಿತ್ ತಿಳಿಸಿದ್ದು ಈ ಆಹ್ವಾನವನ್ನು ಅನುಪಮ್ ಖೇರ್ ತಿರಸ್ಕರಿಸಿದ್ದಾರೆ.
ಈ ಕುರಿತಂತೆ ಖೇರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡಿರುವ ಅಬ್ದುಲ್ ಬಸಿತ್ ಅವರು ನೀವು ಮತ್ತೊಮ್ಮೆ ವೀಸಾಗೆ ಅರ್ಜಿ ಸಲ್ಲಿಸಿದರೆ ವೀಸಾ ನೀಡುವುದಾಗಿ ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಖೇರ್, ವೀಸಾ ನಿರಾಕರಣೆಯಾದ್ದರಿಂದ ಆ ದಿನಾಂಕಗಳಂದು ನಾನು ಬೇರೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಒಪ್ಪಿಕೊಂಡಿರುವುದರಿಂದ ಕರಾಚಿ ಸಾಹಿತ್ಯೋತ್ಸವದಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ವೀಸಾ ಕುರಿತಂತೆ ವಿಷಾದ ವ್ಯಕ್ತಪಡಿಸಿರುವ ಅಬ್ದುಲ್ ಬಸಿತ್, ‘ನೀವು ಉತ್ತಮ ಚಿತ್ರನಟ, ನೀವು ಪಾಕಿಸ್ತಾನಕ್ಕೆ ಭೇಟಿ ನೀಡುವುದಾದರೆ ನಿಮಗೆ ಸ್ವಾಗತ’ ಎಂದು ಬುಧವಾರ ಟ್ವೀಟ್ ಮಾಡಿದ್ದಾರೆ. ಬಸಿತ್ ಅವರ ಟ್ವೀಟ್‌ಗೆ ಖೇರ್ ಮರು ಟ್ವೀಟ್ ಮಾಡುವ ಮೂಲಕ ಧನ್ಯವಾದ ಹೇಳಿದ್ದಾರೆ.
ಕಳೆದ ರಾತ್ರಿ ಪಾಕಿಸ್ತಾನ ರಾಯಭಾರಿ ಕಚೇರಿ ಕ್ಷಮೆ ಕೋರಿದ್ದು, ತಾಂತ್ರಿಕ ಕಾರಣಗಳಿಂದ ಪ್ರಮಾದವಾಗಿದ್ದು, ಮತ್ತೆ ವೀಸಾಗೆ ಅರ್ಜಿ ಸಲ್ಲಿಸಿದರೆ ವೀಸಾ ನೀಡುವುದಾಗಿ ಟ್ವೀಟ್ ಮಾಡಿದೆ.