ನವದೆಹಲಿ: ಭಾರತವು ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿನ ಜನ ಗೋಮಾಂಸ ತಿನ್ನಲು ಬಯಸಿದರೆ, ಅದಕ್ಕೆ ಅವಕಾಶ ನೀಡಬೇಕು ಎಂದು ನೀತಿ ಆಯೋಗದ ಉನ್ನತ ಅಧಿಕಾರಿ ಹಾಗೂ ಸಿಇಒ ಅಮಿತಾಭ್ ಕಾಂತ್ ಹೇಳಿದ್ದಾರೆ.
ಮಂಗಳವಾರ ರಾತ್ರಿ ಎನ್‌ಡಿ ಟಿವಿಯ ‘‘ವರ್ಷದ ಭಾರತೀಯ ಪ್ರಶಸ್ತಿ-೨೦೧೫’’ ಅನ್ನು ಸ್ವೀಕರಿಸಿ ಮಾತನಾಡುವ ವೇಳೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅತ್ಯುತ್ತಮ ಆಡಳಿತಗಾರ ವಿಭಾಗದಲ್ಲಿ ಕಾಂತ್‌ರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ವೇಳೆ ಮಾತನಾಡಿದ ಅವರು, ‘‘ಜನ ಏನನ್ನು ಮಾತನಾಡಬೇಕು, ಅವರು ಏನನ್ನು ತಿನ್ನಬೇಕು ಎನ್ನುವ ಆಯ್ಕೆಯನ್ನು ಅವರಿಗೇ ಬಿಡಬೇಕು. ಬೀಫ್ ತಿನ್ನುವುದರಲ್ಲೂ ಆಯ್ಕೆಯ ಸ್ವಾತಂತ್ರ್ಯವಿರಬೇಕು. ನಾನು ಕೇರಳ ಕೇಡರ್‌ನಿಂದ ಬಂದವನು. ನನ್ನ ನೆರೆಮನೆಯವರು ನಾಯರ್. ಇನ್ನೊಂದು ಬದಿಯವರು ಬ್ರಾಹ್ಮಣರು. ಅವರೆಲ್ಲರೂ ಬೀಫ್ ತಿನ್ನುತ್ತಾರೆ’’ ಎಂದರು.
ಇದೇ ವೇಳೆ, ಆಮೀರ್ ಖಾನ್ ವಿವಾದದ ಬಗ್ಗೆ ಮಾತನಾಡಿದ ಕಾಂತ್, ‘‘ಎಲ್ಲರಿಗೂ ಅವರಿಷ್ಟದ್ದನ್ನು ಹೇಳುವ ಅವಕಾಶ ಇರಬೇಕು. ಆದರೆ, ಇನ್‌ಕ್ರೆಡಿಬಲ್ ಇಂಡಿಯಾದ ಬ್ರಾಂಡ್ ರಾಯಭಾರಿಯಾದಾಗ ಮಾತ್ರ ಅಂತಹ ಹೇಳಿಕೆ ನೀಡುವಂತಿಲ್ಲ,’’ ಎನ್ನುವ ಮೂಲಕ ಆಮೀರ್‌ಗೆ ಟಾಂಗ್ ನೀಡಿದರು.
ಅಮಿತಾಭ್ ಕಾಂತ್ ಅವರು ಪ್ರಧಾನಿ ಮೋದಿ ಅವರ ನೀತಿ ಆಯೋಗದ ಸಿಇಒ ಹಾಗೂ ಉನ್ನತ ಅಧಿಕಾರಿಯಾಗಿದ್ದಾರೆ. ಇವರು ಕೇರಳ ಕೇಡರ್‌ನ ಐಎಎಸ್ ಅಧಿಕಾರಿಯಾಗಿದ್ದು, ಕೈಗಾರಿಕಾ ಉತೇಜನ ಮತ್ತು ನೀತಿ ಇಲಾಖೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್‌ಕ್ರೆಡಿಬಲ್ ಇಂಡಿಯಾದಿಂದ ಹಿಡಿದು ಸ್ಟಾರ್ಟ್‌ಅಪ್ ಇಂಡಿಯಾವರೆಗೂ ಸರ್ಕಾರದ ಹಲವು ಅಭಿಯಾನಗಳಲ್ಲೂ ಇವರು ಪ್ರಮುಖ ಪಾತ್ರ ವಹಿಸಿದ್ದಾರೆ.