ಅಸ್ಸಾಂ: 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಪರಾಜಯಗೊಂಡಿರುವುದಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಆಕೆಯ ಮಗ ರಾಹುಲ್ ಗಾಂಧಿ ಸಂಸತ್ ಕಲಾಪಕ್ಕೆ ಅಡ್ಡಿಪಡಿಸುವ ಮೂಲಕ ಪ್ರತೀಕಾರ ತೀರಿಸಿಕೊಳ್ಳುತ್ತಿದೆ ಮತ್ತು ಬಡವರಿಗೆ ಅನುಕೂಲವಾಗಲಿರುವ ಮಸೂದೆ ಪಾಸ್ ಆಗಲು ತಡೆಯೊಡ್ಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಇಲ್ಲಿನ ಚುನಾವಣಾ ಹಿನ್ನೆಲೆಯಲ್ಲಿ ಚಹಾ ತೋಟದ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಒಂದು ಕುಟುಂಬ ನೆಗೆಟಿವ್ ಪಾಲಿಟಿಕ್ಸ್ ಮಾಡುತ್ತಿದೆ. ಇನ್ನುಳಿದ ಪ್ರತಿಪಕ್ಷಗಳಿಗಿಂತ ಕಾಂಗ್ರೆಸ್ ಪಕ್ಷ ಸಂಸತ್ ಕಲಾಪ ಸುಗಮವಾಗಿ ನಡೆಯುವುದನ್ನೇ ವಿರೋಧಿಸುತ್ತಿದೆ ಎಂದು ಆರೋಪಿಸಿದರು.
2014ರ ಚುನಾವಣೆಯಲ್ಲಿ ಸೋತವರು ಮತ್ತು 400ರಿಂದ 40 ಸ್ಥಾನಕ್ಕೆ ಬಂದವರು ಈಗ ಮೋದಿ ಅಭಿವೃದ್ಧಿ ಕೆಲಸ ಮಾಡೋದಕ್ಕೆ ಅನುವು ಮಾಡಿಕೊಡಲ್ಲ ಎಂದು ನಿರ್ಧರಿಸಿದ್ದಾರೆ. ಈ ಸಂಚು ಮುಂದುವರಿಯುತ್ತಲೇ ಇದೆ ಎಂದು ನೇರವಾಗಿಯೇ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಹಾಗಾಗಿ ಕಾಂಗ್ರೆಸ್ ಜನರ ವಿರುದ್ಧ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದೆ. ಕಾಂಗ್ರೆಸ್ ಅನ್ನು ಅಧಿಕಾರದಿಂದ ದೂರ ಇಟ್ಟಿರುವ ಜನರ ವಿರುದ್ಧವೇ ತಿರುಗಿಬಿದ್ದಿದೆ ಎಂದು ಮೋದಿ ದೂರಿದರು.
-ಉದಯವಾಣಿ