ರಾಷ್ಟ್ರೀಯ

ಗಾಂಧಿ ಕುಟುಂಬ ಕೆಣಕಿದರೆ ತಕ್ಕ ತಿರುಗೇಟು- ಕಾಂಗ್ರೆಸ್

Pinterest LinkedIn Tumblr

Anand-Sharma1_0ನವದೆಹಲಿ (ಪಿಟಿಐ): ಗಾಂಧಿ ಕುಟುಂಬವನ್ನು ಟೀಕಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್‌ ಶನಿವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಗಾಂಧಿ ‘ಕುಟುಂಬ’ವು ಪಕ್ಷದ ಹೆಮ್ಮೆಯಾಗಿದ್ದು, ‘ಅವರನ್ನು ಪಕ್ಷದಿಂದ ಪ್ರತ್ಯೇಕಿಸುವ’ ಯತ್ನಗಳಿಗೆ ತಕ್ಕ ತಿರುಗೇಟು ದೊರೆಯಲಿದೆ ಎಂದು ಎಚ್ಚರಿಸಿದೆ.

2014ರ ಲೋಕಸಭೆ ಚುನಾವಣೆಯ ಸೋಲಿಗೆ ಪ್ರತೀಕಾರವನ್ನು ‘ಒಂದು ಕುಟುಂಬ’ವು ಸಂಸತ್ತಿನ ಕಲಾಪಕ್ಕೆ ಅಡ್ಡಿ ಪಡಿಸುವ ಮೂಲಕ ತೆಗೆದುಕೊಳ್ಳುತ್ತಿದೆ ಎಂದು ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿರುದ್ಧ ಶುಕ್ರವಾರ ವಾಗ್ದಾಳಿ ನಡೆಸಿದ್ದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್‌ನ ಹಿರಿಯ ವಕ್ತಾರ ಆನಂದ್ ಶರ್ಮಾ, ಪ್ರಮುಖ ವಿರೋಧ ಪಕ್ಷವನ್ನು ಅವಮಾನಿಸುವ ಕೆಲಸವನ್ನು ಪ್ರಧಾನಿ ಬಿಡಬೇಕು ಎಂದು ಆಗ್ರಹಿಸಿದರು.

‘ಕಾಂಗ್ರೆಸ್ ನಾಯಕತ್ವದ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಸಹಕಾರ ಕೋರುವುದು ಕುಚೋದ್ಯದ ದಾರಿ. ನಮ್ಮ ನಾಯಕತ್ವ ಅಥವಾ ಗಾಂಧಿ ಕುಟುಂಬ ಪಕ್ಷದ ಅವಿಭಾಜ್ಯ ಭಾಗ ಎಂಬುದನ್ನು ಪ್ರಧಾನಿ ಅವರಿಗೆ ನಾವು ಸ್ಪಷ್ಟ ಶಬ್ಧಗಳಲ್ಲಿ ತಿಳಿಸುತ್ತೇವೆ’ ಎಂದರು.

ಕಾಂಗ್ರೆಸ್ ಹಾಗೂ ಅದರ ನಾಯಕರನ್ನು ಪ್ರಧಾನಿ ಹಾಗೂ ಬಿಜೆಪಿಯು ಬೇರ್ಪಡಿಸಲು ಸಾಧ್ಯವಿಲ್ಲ. ‘ಒಂದು ವೇಳೆ ಅದಕ್ಕೆ ಪ್ರಯತ್ನಿಸಿದರೆ, ನಾವು ನಮ್ಮ ಸಾಮರ್ಥ್ಯಕ್ಕನುಗುಣವಾಗಿ ತಿರುಗೇಟು ನೀಡುತ್ತೇವೆ. ಇದರ ಬಗ್ಗೆ ಅವರಿಗೆ ಸಂದೇಹವೇ ಬೇಡ’ ಎಂದು ಎಚ್ಚರಿಸಿದರು.

ಮುಂಬರುವ ಬಜೆಟ್ ಅಧಿವೇಶನದಲ್ಲಿ ಈ ಕುರಿತು ಸಂಘರ್ಷ ಮುಂದುವರೆಯಲಿದೆಯೇ ಎಂಬ ಪ್ರಶ್ನೆಗೆ ‘ಅವರು ದೇಶದ ಪ್ರಧಾನಿ. ಪ್ರಮುಖ ವಿರೋಧ ಪಕ್ಷವನ್ನು ಅವಮಾನಿಸುವ ಹಾಗೂ ಕೆರಳಿಸುವ ಕೆಲಸ ಮಾಡಬಾರದು. ಇದಲ್ಲದೇ ಅವರು ಸಹಕಾರ ಕೋರುವುದಾಗಿ ಬೇರೆ ಹೇಳುತ್ತಾರೆ’ ಎಂದು ಅಣಕವಾಡಿದರು.

‘ಪ್ರಧಾನಿ ಅವರ ಮೊಂಡುತನ ಹಾಗೂ ಸಂಘರ್ಷ ಮನೋಭಾವ’ದಿಂದಾಗಿ ಸಂಸತ್ತಿನ ಕಲಾಪಕ್ಕೆ ಅಡ್ಡಿಯಾಗುತ್ತಿದೆ ಎಂದು ಅವರು ವಾದಿಸಿದರು.

Write A Comment