ಹುಬ್ಬಳಿ,ಫೆ.08: ಸುಮಾರು 50 ವರ್ಷ ಹಳೆಯದಾಗ, ರೈಲ್ವೆ ಇಲಾಖೆಯ ಪಾರ್ಸೆಲ್ ಕಟ್ಟಡ ಸೋಮವಾರ ಮಧ್ಯಾಹ್ನ ಕುಸಿದುಬಿದ್ದಿದೆ. ಅವಶೇಷಗಳಡಿಯಲ್ಲಿ ಓರ್ವ ಮಹಿಳೆ ಮತ್ತು ಆಕೆಯ ಮಗು ಸೇರಿದಂತೆ ಎಂಟಕ್ಕೂ ಹೆಚ್ಚು ಜನ ಸಿಲುಕಿದ್ದು ಅವರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದೆ. ಈ ನಡುವೆ ಈ ಘಟನೆಯನ್ನು ವೀಕ್ಷಿಸಲು ನೂರಾರು ಜನ ಠಳಾಯಿಸಿದ್ದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಸಿಲುಕಿಕೊಂಡಿರುವ ಜನರನ್ನು ರಕ್ಷಿಸಲು ಅನುವು ಮಾಡಿಕೊಡಬೇಕೆಂದು ಜಿಲ್ಲಾಡಳಿತ ಮತ್ತು ಪೊಲೀಸರು ಜನರಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ
ಎರಡು ಅಂತಸ್ತುಗಳ ಕಟ್ಟಡದ ಮೇಲ್ಛಾವಣಿ ಸೋಮವಾರ ಮಧ್ಯಾಹ್ನ ಕುಸಿದುಬಿದ್ದಿದೆ. ಹಳೆಯ ಕಟ್ಟಡ ಶಿಥಿಲಗೊಂಡಿತ್ತು. ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಪಾಡುರಂಗ ರಾಣೆ ಅವರು ಸ್ಥಳಕ್ಕೆ ತೆರಳಿದ್ದು, ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ಸೋಮವಾರ ಮಧ್ಯಾಹ್ನ 2.30ರ ಸುಮಾರಿಗೆ ಕಟ್ಟಡ ಕುಸಿದುಬಿದ್ದಿದೆ. ಮೂರು ಜೆಸಿಬಿಗಳ ಸಹಾಯದಿಂದ ಅವಶೇಷಗಳನ್ನು ತೆರವುಗೊಳಿಸಲಾಗುತ್ತಿದ್ದು, ಒಳಗೆ ಸಿಲುಕಿದವರನ್ನು ರಕ್ಷಿಸಲು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಎರಡು ಅಂತಸ್ತಿನ ಕಟ್ಟಡದಲ್ಲಿ ಅಧಿಕಾರಿಗಳು ಎಲ್ಲಿ ಸಿಲುಕಿದ್ದಾರೆ ಎಂಬುದು ಇನ್ನೂ ಪತ್ತೆಯಾಗಿಲ್ಲ. ಕಟ್ಟಡದ ಹಿಂಭಾಗದ ಗೋಡೆಯನ್ನು ಒಡೆದು ಸಿಲುಕಿರುವವರನ್ನು ರಕ್ಷಣೆ ಮಾಡಲು ಪ್ರಯತ್ನ ನಡೆಸಲಾಗುತ್ತಿದೆ.