ಬೆಂಗಳೂರು: ಕತ್ತಲಾಗುತ್ತಿದ್ದಂತೆಯೇ ದಂಡುದಂಡಾಗಿ ರೋಡಿಗಿಳೀತಾರೆ… ಆಲ್ಟ್ರೇಷನ್ ಮಾಡಿಸಿದ ಬೈಕ್ಗಳ ಮೇಲೇರಿ ಭಾರಿ ಸದ್ದು ಮಾಡುತ್ತ ಡ್ರಾಗ್ ರೇಸ್ ಮಾಡ್ತಾರೆ…ಇಷ್ಟಕ್ಕೆ ಸುಮ್ಮನಾಗದೆ ಮಧ್ಯರಾತ್ರಿ ಅಮಲೇರಿಸಿಕೊಂಡು ಬೀದಿ ದೀಪಕ್ಕೆ ಕಲ್ಲು ಹೊಡೀತಾರೆ… ಪ್ರಶ್ನಿಸಿದರೆ ದಾಳಿ ನಡೆಸ್ತಾರೆ…
ಸಾರ್ವಜನಿಕರು ಆಫ್ರಿಕನ್ನರ ಪುಂಡಾಟಿಕೆಯಿಂದ ಪ್ರತಿನಿತ್ಯ ಎದುರಿಸುತ್ತಿರುವ ಕಷ್ಟಗಳಿವು. ಆಫ್ರಿಕನ್ನರ ಕಾನೂನು ಬಾಹಿರ ಕೃತ್ಯ ಮತ್ತು ಅವರ ದಾಂಧಲೆಯಿಂದ ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಸ್ಥಳೀಯರು ಬಿಚ್ಚಿಟ್ಟಿರುವ ಸಂಪೂರ್ಣ ಮಾಹಿತಿ ಇಲ್ಲಿದೆ…
ಸೋಲದೇವನಹಳ್ಳಿ, ಚಿಕ್ಕಬಾಣಾವರ, ಚಿಕ್ಕಸಂದ್ರ, ಬೋನ್ವಿುಲ್, ಗಣಪತಿನಗರ ಹಾಗೂ ರಾಘವೇಂದ್ರ ಕಾಲನಿಯಲ್ಲಿ ಅಂದಾಜು 2 ಸಾವಿರ ಆಫ್ರಿಕನ್ನರು ವಾಸವಿದ್ದಾರೆ. ಬಹುತೇಕರು ಶೈಕ್ಷಣಿಕ ವೀಸಾ ಪಡೆದು ಬಂದವರಾಗಿದ್ದಾರೆ. ಆದರೆ, ಅರ್ಧದಷ್ಟು ಮಂದಿ ಅರ್ಧದಲ್ಲೇ ವ್ಯಾಸಂಗ ಬಿಟ್ಟು ಬೇರೆಬೇರೆ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ.
10ಕ್ಕೂ ಅಧಿಕ ಖಾಸಗಿ ಕಾಲೇಜುಗಳಿವೆ. ಇಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ ರೆಡ್ ಕಾರ್ಪೆಟ್. ಡ್ರಗ್ಸ್, ಮದ್ಯಪಾನ ಮಾಡಿ ರಸ್ತೆಮಧ್ಯೆ ಇಡೀ ರಾತ್ರಿ ಕುಣಿದು, ವಿಚಿತ್ರವಾಗಿ ಕಿರುಚುತ್ತಾರೆ. ಬೀದಿ ದೀಪಗಳಿಗೆ ಕಲ್ಲು ಹೊಡೆದು ಹಾಳು ಮಾಡುತ್ತಾರೆ. ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಶ್ರೀನಿವಾಸ್ ಹೇಳಿದರು.
ಬೈಕ್, ಕಾರುಗಳನ್ನು ಆಲ್ಟ್ರೇಷನ್ ಮಾಡಿಸಿಕೊಂಡಿದ್ದಾರೆ. ಸಂಜೆ ಆಗುತ್ತಿದ್ದಂತೆ ಡ್ರ್ಯಾಗ್ ರೇಸ್ ಆರಂಭಿಸುತ್ತಾರೆ. ಆ ಗಾಡಿಗಳು ಬರುವ ರಭಸ ಮತ್ತು ಶಬ್ದಕ್ಕೆ ಇಡೀ ಏರಿಯಾ ಬೆಚ್ಚಿ ಬೀಳುತ್ತದೆ. ಅಪ್ಪಿತಪ್ಪಿ ಯಾರಾದರೂ ಎದುರು ಬಂದರೆ ಅವರ ಕತೆ ಮುಗಿಯುತ್ತದೆ. ಈವರೆಗೆ ಹಲವರಿಗೆ ಡಿಕ್ಕಿ ಹೊಡೆದಿದ್ದಾರೆ.
| ಭಾಸ್ಕರ್, ಚಿಕ್ಕಬಾಣಾವರ ನಿವಾಸಿ
8 ವರ್ಷಗಳಿಂದ ಗಣಪತಿನಗರದಲ್ಲಿ ವಾಸವಿದ್ದೇವೆ. ಕಳೆದ 4 ವರ್ಷಗಳಿಂದ ಈಚೆಗೆ ಈ ಆಫ್ರಿಕನ್ನರ ಉಪಟಳ ಹೆಚ್ಚಾಯಿತು. ಕುಡಿದು ದಾಂಧಲೆ ನಡೆಸುವುದು, ಅಡ್ಡಾದಿಡ್ಡಿ ವಾಹನ ಚಲಾಯಿಸುವುದು, ಪ್ರಶ್ನಿಸಿದವರ ಮೇಲೆ ಹಲ್ಲೆ ನಡೆಸುತ್ತಾರೆ. ಹಲವು ಬಾರಿ ಅಪಘಾತ ಮಾಡಿದ್ದಾರೆ. ಕೊನೆಗೆ ನನ್ನ ಪತ್ನಿಯನ್ನೇ ಬಲಿ ಪಡೆದು ಬಿಟ್ಟರು. ಇನ್ನಾದರೂ ಸರ್ಕಾರ ಹಾಗೂ ಪೊಲೀಸರು ಎಚ್ಚರವಹಿಸಿ ಇವರನ್ನು ಮಟ್ಟ ಹಾಕಬೇಕು. ಇಲ್ಲವಾದರೆ ಇನ್ನೂ ಹಲವರ ಪ್ರಾಣಕ್ಕೆ ಕುತ್ತು ತರುತ್ತಾರೆ.
| ಸನಾವುಲ್ಲಾ, ಮೃತ ಶಬಾನಾತಾಜ್ ಪತಿ
ವಿದೇಶಿ ಪ್ರಜೆಗಳ ಉಪಟಳ ಜಾಸ್ತಿಯಾಗಿದೆ. ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ತಾಂಜೇನಿಯಾ ವಿದ್ಯಾರ್ಥಿನಿ ಕೊಟ್ಟ ಸುಳ್ಳು ದೂರಿಗೆ ನನ್ನ ಪತಿಯನ್ನು (ಗ್ರಾಮ ಪಂಚಾಯಿತಿ ಸದಸ್ಯ ಲೋಕೇಶ್)ಪೊಲೀಸರು ಬಂಧಿಸಿದ್ದಾರೆ. ಘಟನೆ ದಿನ ಚುನಾವಣಾ ಪ್ರಚಾರ ನಡೆಸುತ್ತಿದ್ದವರು ಏನಾಯಿತೆಂದು ನೋಡಲು ಹೋಗಿದ್ದರು. ಅಷ್ಟಕ್ಕೇ ಬಂಧಿಸಿದ್ದಾರೆ. ದಾಂಧಲೆ ನಡೆಸುತ್ತಿರುವ ಆಫ್ರಿಕಾ ಪ್ರಜೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು.
| ರಜನಿ ಲೋಕೇಶ್
ನೀಲಗಿರಿ ತೋಪಿನಲ್ಲಿ ಡ್ರಗ್ಸ್ ದಂಧೆ
ಗಣಪತಿನಗರದಿಂದ ಸ್ವಲ್ವ ದೂರ ಹೋದರೆ ನೀಲಗಿರಿ ತೋಪಿದ್ದು, ಆಫ್ರಿಕಾ ಪ್ರಜೆಗಳ ಡ್ರಗ್ಸ್ ವಹಿವಾಟಿನ ತಾಣವಾಗಿದೆ. ಸುತ್ತಮುತ್ತಲ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡೇ ಡ್ರಗ್ಸ್ ಮಾರಾಟ ಜಾಲ ಅಸ್ತಿತ್ವದಲ್ಲಿದೆ. ವಿದೇಶಿ ಪ್ರಜೆಗಳ ಕೈವಾಡವೂ ಇದರಲ್ಲಿದೆ. ಕಾಯಂ ಗಿರಾಕಿಗಳಿಗೆ ಮಾತ್ರ ಮಾರಾಟ ಮಾಡಲಾಗುತ್ತದೆ. ಇದಕ್ಕಾಗಿಯೇ ಕೋಡ್ ವರ್ಡ್ ಇದ್ದು, ಹೇಳಿದವರಿಗೆ ಮಾತ್ರವೇ ಮಾರಾಟ ಮಾಡುವ ವ್ಯವಸ್ಥೆ ರೂಪಿಸಿಕೊಂಡಿದ್ದಾರೆ ಎಂದು ಸ್ಥಳಿಯರು ಹೇಳುತ್ತಾರೆ.