ಮುಂಬೈ (ಪಿಟಿಐ): ತಾಂತ್ರಿಕ ಸಮಸ್ಯೆಯಿಂದಾಗಿ ಪಾಕಿಸ್ತಾನ ಮೂಲದ ಅಮೆರಿಕ ಉಗ್ರ ಡೇವಿಡ್ ಹೆಡ್ಲಿ ಅವರ ವಿಚಾರಣೆ ಬುಧವಾರ ನಡೆಯಲಿಲ್ಲ. ಕೋರ್ಟ್ ವಿಚಾರಣೆಯನ್ನು ಒಂದು ದಿನದ ಮಟ್ಟಿಗೆ ಮುಂದೂಡಿತು.
ಅಮೆರಿಕದ ಅಜ್ಞಾತ ಸ್ಥಳದಿಂದ ಸತತ ಮೂರನೆಯ ದಿನವೂ ವಿಡಿಯೊ ಕಾನ್ಫರೆನ್ಸ್ ಮೂಲಕ ಮುಂಬೈ ವಿಶೇಷ ನ್ಯಾಯಾಲಯದ ವಿಚಾರಣೆಯಲ್ಲಿ ಹೆಡ್ಲಿ ಭಾಗವಹಿಸಿದರು. ಆದರೆ, ಅಮೆರಿಕದ ಕಡೆಯಿಂದ ವಿಡಿಯೊ ಕಾನ್ಫರೆನ್ಸ್ ಲಿಂಕ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿತು. ತಂತ್ರಜ್ಞರು ಈ ಸಮಸ್ಯೆಯನ್ನು ಬಗೆಹರಿಸಲು ಸಾಕಷ್ಟು ಶ್ರಮವಹಿಸಿದರೂ ಸಾಧ್ಯವಾಗಲಿಲ್ಲ. ಹೀಗಾಗಿ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಲಾಯಿತು ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕ್ಕಂ ಸುದ್ದಿಸಂಸ್ಥೆಗೆ ತಿಳಿಸಿದರು.
ಫೆಬ್ರುವರಿ 12ರವರೆಗೆ ಹೆಡ್ಲಿ ಅವರ ವಿಚಾರಣೆ ನಡೆಸಲು ಉದ್ದೇಶಿಸಲಾಗಿತ್ತು. ಇದು ಇನ್ನಷ್ಟು ದಿನಗಳು ವಿಸ್ತರಣೆಯಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಮಂಗಳವಾರ ನಡೆದ ವಿಚಾರಣೆಯಲ್ಲಿ ಲಷ್ಕರ್ ಎ ತಯಬಾ (ಎಲ್‌ಇಟಿ) ಸಂಘಟನೆ ಮುಂಬೈ ದಾಳಿಗೆ ಒಂದು ವರ್ಷ ಹಿಂದೆ ಭಾರತದ ರಕ್ಷಣಾ ವಿಜ್ಞಾನಿಗಳ ಹತ್ಯೆಗೆ ಸಂಚು ರೂಪಿಸಿತ್ತು ಎಂಬ ವಿವರವನ್ನು ಹೆಡ್ಲಿ ಬಹಿರಂಗಪಡಿಸಿದ್ದರು.