ಉಳ್ಳಾಲ. ಫೆ, 11: ಹೆಣ್ಣು ಮಕ್ಕಳ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ಒದಗಿಸುವ ಉದ್ದೇಶದಿಂದ ಖಿಳಿರಿಯಾ ಟ್ರಸ್ಟ್ ಬಬ್ಬುಕಟ್ಟೆಯಲ್ಲಿ ಸ್ಥಾಪನೆಯಾಗಿರುವುದು ಸ್ವಾಗತಾರ್ಹ. ಇದರಿಂದ ಬಡ ಹೆಣ್ಣು ಮಕ್ಕಳಿಗೆ ಉಚಿತವಾಗಿ ಶಿಕ್ಷಣ ಪಡೆಯಲು ಅವಕಾಶ ಸಿಗುತ್ತದೆ. ಲಕ್ಷಾಂತರ ರೂ. ಶುಲ್ಕ ಪಡೆದು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಒದಗಿಸುವ ಈ ಸಂದರ್ಭದಲ್ಲಿ ವಕ್ಫ್ ಬೋರ್ಡ್ ಜಿಲ್ಲಾಧ್ಯಕ್ಷ ಎಸ್.ಎಂ ರಶೀದ್ ಹಾಜಿಯವರ ನೇತೃತ್ವದಲ್ಲಿ ಬಡ ಹೆಣ್ಣು ಮಕ್ಕಳ ಶಿಕ್ಷಣದ ಅಭಿವೃದ್ಧಿಯ ದೃಷ್ಟಿಯಿಂದ ಅಸ್ತಿತ್ವಕ್ಕೆ ಬಂದಿರುವ ಖಿಳಿರಿಯಾ ಸಂಸ್ಥೆ ಬಹಳಷ್ಟು ಬಡ ಕುಟುಂಬಗಳಿಗೆ ಸಹಕಾರಿಯಾಗಲಿದೆ ಎಂದು ಕರ್ನಾಟಕ ರಾಜ್ಯ ಎಸ್‌ವೈಎಸ್ ಕಾರ್ಯದರ್ಶಿ ಎಂಎಸ್‌ಎಂ ಅಬ್ದುಲ್ ರಶೀದ್ ಝೈನಿ ಹೇಳಿದರು.
ಅವರು ಬಬ್ಬುಕಟ್ಟೆಯಲ್ಲಿ ಸ್ಥಾಪನೆಗೊಂಡಿರುವ ಖಿಳಿರಿಯಾ ಸಂಸ್ಥೆಗೆ ಬುಧವಾರ ಭೇಟಿ ನೀಡಿ ಸಂಸ್ಥೆಯ ಅಭಿವೃದ್ದಿ ಕಾಮಗಾರಿಯನ್ನು ವೀಕ್ಷಿಸಿದ ಬಳಿಕ ವಿದ್ಯಾರ್ಥಿಗಳ ಜತೆ ಮಾತನಾಡಿದರು.
ಶಿಕ್ಷಣ ಈ ಕಾಲದಲ್ಲಿ ಅನಿವಾರ್ಯವಾಗಿದ್ದು, ವಿದ್ಯಾಭ್ಯಾಸವನ್ನು ಎಲ್ಲಾ ಸೌಕರ್ಯಗಳ ಜತೆ ಪಡೆಯುತ್ತಿರುವ ವಿದ್ಯಾರ್ಥಿನಿಯವರು ಶ್ರಮಪಟ್ಟು ಅಭ್ಯಸಿಸಿ ರ್‍ಯಾಂಕ್ ಪಡೆಯಲು ಪ್ರಯತ್ನಿಸಬೇಕೆಂದು ಸಲಹೆ ನೀಡಿದರು.
ದ.ಕ. ಜಿಲ್ಲಾ ಎಸ್ಸೆಸ್ಸೆಫ್ ಉಪಾಧ್ಯಕ್ಷ ಸಿರಾಜುದ್ದೀನ್ ಸಖಾಫಿ ಕನ್ಯಾನ, ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ರಿಲೀಫ್ ಸರ್ವಿಸ್‌ನ ನಿರ್ದೇಶಕ ರಶೀದ್ ಹಾಜಿ ಪಾಂಡೇಶ್ವರ, ಪತ್ರಕರ್ತ ಬಶೀರ್ ಕಲ್ಕಟ್ಟ ಉಪಸ್ಥಿತರಿದ್ದರು.
ಸಂಸ್ಥೆಯ ಚಯರ್ ಮ್ಯಾನ್ ಎಸ್.ಎಂ. ರಶೀದ್ ಹಾಜಿ ಅತಿಥಿಗಳನ್ನು ಸ್ವಾಗತಿಸಿ ಸಂಸ್ಥೆಯ ಮೂಲ ಉದ್ದೇಶಗಳ ಬಗ್ಗೆ ಮಾಹಿತಿ ನೀಡಿದರು.