ನವದೆಹಲಿ(ಫೆ. 11): ದೇಶದ ರಾಜಧಾನಿಯಲ್ಲಿ ವಾಯುಮಾಲಿನ್ಯವನ್ನು ನಿಗ್ರಹಿಸಲು ಅಲ್ಲಿ ಸರಕಾರ ಮತ್ತೊಮ್ಮೆ ಬೆಸ-ಸಮ ನಿಯಮವನ್ನು ಜಾರಿಗೆ ತರಲು ನಿರ್ಧರಿಸಿದೆ. ಏಪ್ರಿಲ್ 15-30ರಂದು ಈ ನಿಯಮ ಚಾಲನೆಯಲ್ಲಿರಲಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಜನವರಿ 1-15ರವರೆಗೆ ಆಮ್ ಆದ್ಮಿ ಸರಕಾರ ಈ ಸಮ-ಬೆಸ ನಿಯಮವನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿತ್ತು. ಬಹುತೇಕ ಜನರು ಈ ಪ್ರಯೋಗವನ್ನು ಸ್ವಾಗತಿಸಿ ಒಪ್ಪಿಕೊಂಡಿದ್ದಾರೆಂದು ಆಪ್ ಹೇಳಿಕೊಂಡಿದೆ. ಜನರ ಅಭಿಪ್ರಾಯಗಳನ್ನು ಪಡೆದು ಮತ್ತೊಮ್ಮೆ ಈ ನಿಯಮವನ್ನು ಜಾರಿಗೆ ತರಲು ನಿರ್ಧರಿಸಿರುವುದಾಗಿ ಕೇಜ್ರಿವಾಲ್ ಹೇಳಿದ್ದಾರೆ.
ಶಾಲೆಯ ಪರೀಕ್ಷೆಗಳು ಏಪ್ರಿಲ್ 12ರಂದು ಮುಕ್ತಾಯಗೊಳ್ಳುವುದರಿಂದ ಏಪ್ರಿಲ್ 15ರಿಂದ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಮಹಿಳೆಯರು ಹಾಗೂ ದ್ವಿಚಕ್ರ ಸವಾರರನ್ನು ಈ ನಿಯಮದಿಂದ ಹೊರತುಪಡಿಸಲಾಗಿದೆ. ವಿಐಪಿಗಳಿಗೂ ವಿನಾಯಿತಿ ನೀಡಲಾಗುತ್ತದೆ ಎಂದು ದಿಲ್ಲಿ ಸಿಎಂ ತಿಳಿಸಿದ್ದಾರೆ. ಸಾರ್ವಜನಿಕರ ಪ್ರಯಾಣ ಸುಗಮವಾಗಲು 3 ಸಾವಿರ ಹೊಸ ಬಸ್ಸುಗಳ ಖರೀದಿಸಲು ದಿಲ್ಲಿ ಸರಕಾರ ಯೋಜಿಸಿರುವುದನ್ನು ಅವರು ವಿವರಿಸಿದ್ದಾರೆ.
ಈ ಯೋಜನೆಯು ಕಾರುಗಳಿಗೆ ಅನ್ವಯವಾಗಲಿದೆ. ಸಮ ಸಂಖ್ಯೆಯ ದಿನಗಳಂದು ಸಮ ನೊಂದಣಿ ಸಂಖ್ಯೆಯಿರುವ ಕಾರುಗಳಷ್ಟೇ ರಸ್ತೆಗಿಳಿಯುವ ಅವಕಾಶವಿರುತ್ತದೆ. ಬೆಸ ಸಂಖ್ಯೆಯ ದಿನಗಳಂದು ಬೆಸ ನೊಂದಣಿ ಸಂಖ್ಯೆಯ ಕಾರುಗಳನ್ನು ಚಲಾಯಿಸಬಹುದು. ಜನವರಿಯಲ್ಲಿ ಈ ಯೋಜನೆ ಜಾರಿಗೆ ತರಲು ಪೊಲೀಸರು ಶ್ರಮಿಸಿದ್ದರು. ಈ ಬಾರಿ ಇದಕ್ಕಾಗಿ 500 ನಿವೃತ್ತ ಸೇನಾ ಸಿಬ್ಬಂದಿಯನ್ನು ನೇಮಕ ಮಾಡಲು ಸರಕಾರ ನಿರ್ಧರಿಸಿದೆ.
ಇದೇ ವೇಳೆ, ದಿಲ್ಲಿ ಸರಕಾರ ಪ್ರತೀ ತಿಂಗಳೂ 15 ದಿನಕ್ಕೊಮ್ಮೆ ಈ ಯೋಜನೆಯನ್ನು ಜಾರಿಗೆ ತರುವ ಚಿಂತನೆಯನ್ನೂ ಹೊಂದಿದೆ. ಏಪ್ರಿಲ್ 30ರ ನಂತರ ಈ ಬಗ್ಗೆ ಅದು ಅಂತಿಮ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ.