ಬೆಂಗಳೂರು, ಫೆ.13- ಮುಂದಿನ ಮೂರು ವರ್ಷಗಳಲ್ಲಿ ದೇಶದ ಎಲ್ಲಾ ಮನೆಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಜತೆಗೆ ಕೈಗೆಟಕುವ ಬೆಲೆಯಲ್ಲಿ ಗುಣಮಟ್ಟದ ವಿದ್ಯುತ್ ಒದಗಿಸುವ ಬದ್ಧತೆಯೂ ಇದೆ ಎಂದು ಕೇಂದ್ರ ಇಂಧನ ಸಚಿವ ಪಿಯೂಶ್ ಗೋಯಲ್ ಹೇಳಿದರು. ತುಮಕೂರು ರಸ್ತೆಯಲ್ಲಿರುವ ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಆವರಣದಲ್ಲಿ ನಡೆಯುತ್ತಿರುವ ಮೂರು ದಿನಗಳ ಎಲೆಕ್ಟ್ರಾಮ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ದೇಶದ 18,100 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಇದು ನಾಚಿಕೆಗೇಡಿನ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.
2019ರ ವೇಳೆಗೆ ಎಲ್ಲ ಗ್ರಾಮಗಳಿಗೂ ವಿದ್ಯುತ್ ಸಂಪರ್ಕ ನೀಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂ ದಿದೆ. ಇದರಲ್ಲಿ ಯಾವುದೇ ರಾಜೀ ಇಲ್ಲ ಎಂದರು.
ವಿದ್ಯುತ್ ಉಪಕರಣಗಳ ಗುಣಮಟ್ಟಕ್ಕೆ ಕೇಂದ್ರ ಸರ್ಕಾರದ ಮೊದಲ ಆದ್ಯತೆ ನೀಡುತ್ತಿದೆ. ಯಾವುದೇ ಕಂಪೆನಿ ಕಳಪೆ ಗುಣಮಟ್ಟದ ವಸ್ತು ಬಳಸಿದರೆ ಅಂಥವುಗಳನ್ನು ಕಪ್ಪು ಪಟ್ಟಿಗೆ ಸೇರಿಸಲು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಇದನ್ನು ಬೆದರಿಕೆ ಎಂದು ಭಾವಿಸದೆ ಸಲಹೆ ಎಂದು ಒಪ್ಪಿಕೊಳ್ಳಬೇಕೆಂದರು. ಪ್ರಧಾನಿ ಮೋದಿ ಅವರ ಮೇಕ್ ಇನ್ ಇಂಡಿಯಾ ಯೋಜನೆಯಡಿ ಸ್ಥಳೀಯವಾಗಿ ಹೆಚ್ಚು ಉತ್ಪಾದನೆ ಮಾಡಲು ಕ್ರಮಕೈಗೊಳ್ಳಲಾಗಿದೆ. ಭಾರತ ಬಂಡವಾಳ ಹೂಡಿಕೆಗೆ ಉತ್ತಮ ವಾತಾವರಣ ಹೊಂದಿದ್ದು, ಉದ್ಯಮ ಸ್ನೇಹಿ ವಾತಾವರಣ ಹೊಂದಿದೆ ಎಂದರು. ಮುಂದಿನ ದಿನಗಳಲ್ಲಿ ಭಾರತ ವಿದ್ಯುತ್ ಉಪಕರಣ ಗಳನ್ನು ರಫ್ತುಮಾಡುವ ಸಾಮರ್ಥ್ಯ ಹೆಚ್ಚಿಸಿಕೊಳ್ಳಲಿದೆ ಎಂದರು.
ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ದಿನದ 24 ಗಂಟೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲು ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಪಾವಗಡದಲ್ಲಿ 2 ಸಾವಿರ ಮೆಗಾ ವ್ಯಾಟ್ ಸೌರಶಕ್ತಿ ವಿದ್ಯುತ್ ಪೂರೈಕೆ ಘಟಕ ಸ್ಥಾಪಿಸಲಾಗುತ್ತಿದ್ದು, ಇದಕ್ಕೆ ರೈತರ ಭೂಮಿ ಸ್ವಾಧೀನಪಡಿಸಿಕೊಂಡಿಲ್ಲ. ರೈತರ ಸಹಕಾರದಲ್ಲಿ ಯೋಜನೆ ರೂಪುಗೊಳ್ಳುತ್ತಿದೆ. ಸರ್ಕಾರದ ಸೋಲಾರ್ ನೀತಿಯಂತೆ ರೈತರು ತಮಗೆ ಅಗತ್ಯವಿರುವಷ್ಟು ತಯಾರಿಸಿಕೊಂಡು ಹೆಚ್ಚುವರಿ ವಿದ್ಯುತ್ ಮಾರಲು ಯೋಜನೆ ರೂಪುಗೊಂಡಿದೆ ಎಂದು ತಿಳಿಸಿದರು.
ಭಾರತೀಯ ಎಲೆಕ್ಟ್ರಾನಿಕ್ ಉಪಕರಣಗಳ ಸಂಘಟನೆಗಳ ಸದಸ್ಯ ಕಂಪೆನಿಗಳು ಉತ್ಪಾದಿಸುವ ಉಪಕರಣಗಳನ್ನೇ ರಾಜ್ಯ ಸರ್ಕಾರ ತನ್ನ ಯೋಜನೆಗಳಿಗೆ ಬಳಸುತ್ತಿದೆ. ಇಂದಿನಿಂದ 3 ದಿನ ನಡೆಯುವ ಈ ಸಮ್ಮೇಳನ ಜಾಗತಿಕ ವಿದ್ಯುತ್ ಸಮಸ್ಯೆ ಪರಿಹಾರ ಕಂಡುಕೊಳ್ಳುವಂತಾಗಲಿ ಎಂದು ಆಶಿಸಿದರು. ಸಂಘಟನೆ ಅಧ್ಯಕ್ಷ ಬಾಬು ಪೆರಲ್, ಕಾರ್ಯದರ್ಶಿ ಆದಿತ್ಯ ಮತ್ತಿತರರು ಭಾಗವಹಿಸಿದ್ದರು. ವಿವಿಧ ದೇಶಗಳಿಂದ ಸಾವಿರಕ್ಕೂ ಹೆಚ್ಚು ಉದ್ಯಮಿಗಳು ಪ್ರದರ್ಶನ ಮೇಳದಲ್ಲಿ ಭಾಗವಹಿಸಿದ್ದರು.