ನವದೆಹಲಿ: ಜವಾಹರ್‍ಲಾಲ್ ನೆಹರೂ ವಿಶ್ವವಿದ್ಯಾಲಯ(ಜೆಎನ್‍ಯು)ದ ವಿವಾದ ತೀವ್ರ ಸ್ವರೂಪ ಪಡೆಯುತ್ತಿದ್ದು, ಒಂದು ಶೈಕ್ಷಣಿಕ ಸಂಸ್ಥೆ ರಾಷ್ಟ್ರ ವಿರೋಧಿಗಳ ತಾಣವಾಗಲು ಬಿಡುವುದಿಲ್ಲ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅವರು ಶನಿವಾರ ಹೇಳಿದ್ದಾರೆ.
ದೇಶದ್ರೋಹದ ಆರೋಪದ ಮೇಲೆ ಜೆಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷನನ್ನು ಬಂಧಿಸಿದ ಮಾರನೇ ದಿನ ವರದಿಗಾರರಿಗೆ ಪ್ರತಿಕ್ರಿಯಿಸದ ಕಿರಣ್ ರಿಜಿಜು, ಜೆಎನ್ ಯು ರಾಷ್ಟ್ರ ವಿರೋಧಿ ಕೃತ್ಯಗಳ ತಾಣವಾಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಸಂಪೂರ್ಣ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಲಾಗಿದೆ. ಆದರೆ ಅದಕ್ಕೂ ಕೆಲವು ಇತಿ, ಮಿತಿಗಳಿವೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಅಲ್ಲದೆ ದೇಶ ವಿರೋಧಿ ಘೋಷಣೆ ದುರದೃಷ್ಟಕರ. ಆದರೆ ಅವರು ಚಿಕ್ಕಮಕ್ಕಳಲ್ಲ ಎಂದು ರಿಜಿಜು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಫೆಬ್ರವರಿ 9ರಂದು ವಿವಿಯಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಈ ವೇಳೆ ಕೆಲವು ವಿದ್ಯಾರ್ಥಿಗಳು ಅಫ್ಜಲ್ ಗುರು ಪರ ಘೋಷಣೆಗಳನ್ನು ಕೂಗಿದ ಘಟನೆ ನಡೆದಿತ್ತು. ಈ ಸಂಬಂಧ ಈಗಾಗಲೇ ಜೆಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಸೇರಿಜದಂತೆ ಏಳು ವಿದ್ಯಾರ್ಥಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.