ಬೆಂಗಳೂರು: ನಾನು ಜೆಡಿಎಸ್ ನಲ್ಲಿಯೇ ಇದ್ದೇನೆ. ಪಕ್ಷದ ವರಿಷ್ಠರು ನನ್ನನ್ನು ಕರೆದು ನನ್ನ ವಿರುದ್ಧ ಶಿಸ್ತುಕ್ರಮ ತೆಗೆದುಕೊಂಡರೆ ಅದನ್ನು ಸ್ವೀಕರಿಸುತ್ತೇನೆಂದು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಶನಿವಾರ ಹೇಳಿದ್ದಾರೆ.
ಇತ್ತೀಚೆಗಷ್ಟೇ ಶಾಸಕ ಜಮೀರ್ ಅಹ್ಮದ್ ಹಾಗೂ ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡ ಅವರ ವಿರುದ್ಧ ಕೆಲವು ಮನಸ್ತಾಪಗಳುಂಟಾಗಿದ್ದವು. ಈ ಮನಸ್ತಾಪ ಜಮೀರ್ ಅವರನ್ನು ಪಕ್ಷದಿಂದ ಉಚ್ಛಾಟಣೆ ಮಾಡುವ ವಾತಾವರಣವನ್ನುಂಟು ಮಾಡಿತ್ತು. ಇದೀಗ ಆ ಎಲ್ಲಾ ಮನಸ್ತಾಪಗಳಿಗೂ ಜಮೀರ್ ಅವರು ತೆರೆ ಎಳೆದಿದ್ದಾರೆ.
ಈ ಕುರಿತಂತೆ ಹೇಳಿಕೆ ನೀಡಿರುವ ಜಮೀರ್ ಅವರು, ನಾನು ಪಕ್ಷದಲ್ಲಿಯೇ ಇದ್ದೇನೆ. ಉಪಚುನಾವಣೆಯಿಂದ ಮಾತ್ರ ನಾನು ದೂರು ಉಳಿದಿದ್ದೇನೆ. ಪಕ್ಷದ ವರಿಷ್ಠರು ಮಾತುಕತೆಗೆ ಕರೆದರೆ ಅದಕ್ಕೆ ನಾನು ಸಿದ್ಧನಿದ್ದೇನೆ. ಒಂದು ವೇಳೆ ವರಿಷ್ಠರು ನನ್ನ ವಿರುದ್ಧ ಶಿಸ್ತು ಕ್ರಮಗಳ ತೆಗೆದುಕೊಂಡರೂ ಸಹ ಅದನ್ನು ಸ್ವೀಕರಿಸುತ್ತೇನೆ ಎಂದು ಹೇಳಿದ್ದಾರೆ.
ಇದೇ ವೇಳೆ ಉಪಚುನಾವಣೆ ಕುರಿತಂತೆ ಮಾತನಾಡಿರುವ ಅವರು, ಹೆಬ್ಬಾಳ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಗೆಲ್ಲಲು ಸಾಧ್ಯವಿಲ್ಲ. ಹೀಗಾಗಿ ಒಳ್ಳೆಯ ಅಭ್ಯರ್ಥಿಯನ್ನು ನೋಡಿ ಮತ ಹಾಕಿ ಎಂದು ಹೇಳಿದ್ದೇನೆ ವಿನಃ ಜೆಡಿಎಸ್ ಗೆ ಮತಹಾಕಬೇಡಿ ಎಂದು ಹೇಳಿಲ್ಲ. ಕೋಮುವಾದಿ ಪಕ್ಷಗಳನ್ನು ದೂರವಿಡಬೇಕಿದೆ. ಮುಸ್ಲಿಮರ ಮತ ವಿಭಜನೆಯಾಗಬಾರದು ಎಂದು ಹೇಳಿದ್ದಾರೆ.