ನವದೆಹಲಿ: ಜವಾಹರ್‍ಲಾಲ್ ನೆಹರೂ ವಿಶ್ವವಿದ್ಯಾಲಯ(ಜೆಎನ್‍ಯು)ದಲ್ಲಿ ಸಂಸತ್ ದಾಳಿ ರೂವಾರಿ ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದ್ದನ್ನು ಖಂಡಿಸಿ ಕೆಲವು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂಚ್ರಿ ಅರವಿಂದ್ ಕೇಜ್ರಿವಾಲ್ ಅವರು ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮುಗ್ಧರನ್ನು ಬಂಧಿಸುತ್ತಿದ್ದು, ಇದಕ್ಕೆ ಕೇಂದ್ರ ಸರ್ಕಾರ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ದೆಹಲಿ ಸಿಎಂ ಟ್ವಿಟ್ ಮಾಡಿದ್ದಾರೆ.
‘ರಾಷ್ಟ್ರ ವಿರೋಧಿ ಶಕ್ತಿಗಳನ್ನು ಯಾರೂ ಬೆಂಬಲಿಸಲ್ಲ. ಆದರೆ ಇದನ್ನೆ ನೆಪವಾಗಿಟ್ಟುಕೊಂಡು ಮುಗ್ಧ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿದರೆ, ಮೋದಿ ಸರ್ಕಾರ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ’ ಎಂದು ಕೇಜ್ರಿವಾಲ್ ಎಚ್ಚರಿಸಿದ್ದಾರೆ.
ಫೆಬ್ರವರಿ 9ರಂದು ವಿವಿಯಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಈ ವೇಳೆ ಕೆಲವು ವಿದ್ಯಾರ್ಥಿಗಳು ಅಫ್ಜಲ್ ಗುರು ಪರ ಘೋಷಣೆಗಳನ್ನು ಕೂಗಿದ ಘಟನೆ ನಡೆದಿತ್ತು. ಈ ಸಂಬಂಧ ಈಗಾಗಲೇ ಜೆಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಸೇರಿಜದಂತೆ ಏಳು ವಿದ್ಯಾರ್ಥಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.