ನವದೆಹಲಿ: ಭಾರತದಲ್ಲಿನ ಅಮೆರಿಕದ ರಾಯಭಾರಿ ರಿಚರ್ಡ್ ವೆರ್ಮಾ ಅವರನ್ನು ಶನಿವಾರ ಬುಲಾವ್ ನೀಡಿ ಕರೆಸಿಕೊಂಡ ಭಾರತವು, ಪಾಕಿಸ್ತಾನಕ್ಕೆ ಎಫ್-16 ಯುದ್ಧ ವಿಮಾನಗಳನ್ನು ಮಾರಾಟ ಮಾಡಲು ಕೈಗೊಂಡ ಒಬಾಮಾ ಆಡಳಿತದ ನಿರ್ಧಾರದ ಬಗೆಗೆ ತನ್ನ ‘ಅತೃಪ್ತಿ ಮತ್ತು ಭ್ರಮನಿರಸನ’ವನ್ನು ವ್ಯಕ್ತ ಪಡಿಸಿತು.
ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಅವರು ವೆರ್ಮಾ ಅವರನ್ನು ಕರೆಸಿಕೊಂಡು ಪಾಕಿಸ್ತಾನಕ್ಕೆ ಸೇನಾ ನೆರವು ನೀಡಿಕೆ ಸಂಬಂಧ ಅಮೆರಿಕ ಕೈಗೊಂಡ ನಿರ್ಧಾರದ ಬಗೆಗಿನ ಭಾರತದ ಕಳವಳವನ್ನು ಅವರಿಗೆ ತಿಳಿಸಿದರು. ಈ ನೆರವು ಭಾರತ ವಿರೋಧಿ ಚಟುವಟಿಕೆಗಳಿಗೆ ಉಪಯೋಗವಾಗುವುದು ಎಂಬುದು ಭಾರತದ ನಂಬಿಕೆ ಎಂದು ಜೈಶಂಕರ್ ವಿವರಿಸಿದರು.
ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕೂಡಾ ಪ್ರಬಲ ಹೇಳಿಕೆಯೊಂದನ್ನು ನೀಡಿ ಅಮೆರಿಕದ ನಿರ್ಣಯ ಬಗ್ಗೆ ತನ್ನ ಭ್ರಮನಿರಸನವನ್ನು ವ್ಯಕ್ತ ಪಡಿಸಿತು. ಈ ಶಸ್ತ್ರಾಸ್ತ್ರ ವರ್ಗಾವಣೆಯು ಭಯೋತ್ಪಾದನೆ ನಿಗ್ರಹಕ್ಕೆ ಅನುಕೂಲವಾಗುವುದು ಎಂಬ ಚಿಂತನೆಯನ್ನು ತಾನು ಒಪ್ಪುವುದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟ ಪಡಿಸಿತು.