ಕಾಬೂಲ್, ಫೆ.14-ತನ್ನ ಮೈದುನನ ಜೊತೆ ಆಸ್ಪತ್ರೆಗೆ ತೆರಳುತ್ತಿದ್ದ ಯುವತಿಯೊಬ್ಬಳನ್ನು ಪರ ಪುರುಷನೊಂದಿಗೆ ಹೋಗುತ್ತಿದ್ದಾಳೆ ಎಂದು ತಿಳಿದ ತಾಲಿಬಾನ್ ಉಗ್ರರು, ಅವಳು ಮೂರ್ಛೆ ಹೋಗುವವರೆಗೂ ಅಮಾವನೀಯವಾಗಿ ಚಾಟಿಯಿಂದ ಹೊಡೆದ ಘಟನೆ ಆಫ್ಘಾನಿಸ್ಥಾನದ ರಾಜಧಾನಿ ಕಾಬುಲ್ನಲ್ಲಿ ನಡೆದಿದೆ.
ಮಹಿಳೆ ಪರಪುರುಷರು, ಅಪರಿಚಿತರ ಜತೆ ಸಂಚರಿಸುವುದು ಇಸ್ಲಾಂನಲ್ಲಿ ನಿಸಿದ್ಧ-ಹಾಗಾಗಿ ಆಕೆಯ ಮೈದುನನನ್ನು ಹೊರಗಿನ ವ್ಯಕ್ತಿ ಎಂದು ಭಾವಿಸಿದ ಉಗ್ರರು, ಮಹಿಳೆಯನ್ನು ನಡುಬೀದಿಯಲ್ಲಿ ನಿಲ್ಲಿಸಿ ಅವಳು ಎಚ್ಚರ ತಪ್ಪಿ ಬೀಳುವವರೆಗೂ ಚಾಟಿಗಳಿಂದ ಭಾರಿಸಿದ್ದಾರೆ.
ಆಕೆಯ ಮೈದುನನನ್ನು ಉಗ್ರರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ದೃಶ್ಯವನ್ನು ವಿಡಿಯೊ ತೆಗೆದು ಇ-ಮೇಲ್ಗೆ ಅಪ್ ಲೋಡ್ ಮಾಡಿರುವ ಉಗ್ರರು, ಅಪರಿಚಿತ ಪುರುಷರ ಜತೆ ತಿರುಗಾಡಿದರೆ ಎಲ್ಲರಿಗೂ ಇದೇ ಶಿಕ್ಷೆ ಎಂದು ಹೇಳಿದ್ದಾರೆ. ಈ ಘಟನೆ ಕುರಿತಂತೆ ಯಾರೂ ಅಧಿಕೃತವಾಗಿ ದೂರು ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಯಾರೋ ಅಪರಿಚಿತ ವ್ಯಕ್ತಿ ಜತೆ ಫೋನ್ನಲ್ಲಿ ಮಾತನಾಡಿದಳು ಎಂದು ಕಳೆದವಾರವಷ್ಟೇ ತಾಲಿಬಾನ್ ಉಗ್ರರು ಆಕೆಯನ್ನು ಸಾರ್ವಜನಿಕವಾಗಿ ಹೊಡೆದು ಸಾಯಿಸಿದ ಘಟನೆ ನಡೆದಿತ್ತು. ಆಫ್ಘನಿಸ್ಥಾನದಲ್ಲಿ ಇಂತಹ ಹಿಂಸಾಚಾರಗಳು ಸರ್ವೇ ಸಾಮಾನ್ಯವಾಗಿವೆ. ಈ ವರೆಗೆ ಅನೇಕ ಮಹಿಳೆಯರನ್ನು ಕಲ್ಲಿನಿಂದ ಹೊಡೆದು ಸಾಯಿಸಲಾಗಿದೆ.