ಕನ್ನಡ ವಾರ್ತೆಗಳು

ಸಂಭ್ರಮದ ಕೊಡಿಯಾಲ್ ತೇರು – ಮಂಗಳೂರು ರತೋಥ್ಸವ ಸಂಪನ್ನ

Pinterest LinkedIn Tumblr

Venkatramana_ratha_1

ಮಂಗಳೂರು: ರಥ ಸಪ್ತಮಿಯ ಶುಭಾವಸರದಲ್ಲಿ ಸಂಜೆ ಗೋಧೂಳಿಯ ಸಮಯದಲ್ಲಿ ರಥಬೀದಿಯಲ್ಲಿ ರಂಗೇರಿದ ವಾತಾವರಣದಲ್ಲಿ ಮಂಗಳೂರಿನ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ವೀರ ವೆಂಕಟೇಶ ದೇವರ ಬ್ರಹ್ಮರಥೋತ್ಸವ ಸಂಭ್ರಮದ ಕೊಡಿಯಾಲ್ ತೇರು ರವಿವಾರ ಸಂಜೆ ಜರಗಿತು. ರಥಬೀದಿಯ ತುಂಬೆಲ್ಲ ಜನಸಾಗರವೇ ಕಿಕ್ಕಿರಿದು ತುಂಬಿದಂತೆ ಉಕ್ಕಿ ಹರಿದ ಭಕ್ತ ಜನಸಾಗರದಲ್ಲಿ ಭಜಕರು ತಮ್ಮೊಡೆಯ ವೀರ ವೆಂಕಟೇಶನ ವೈಭವದ ರಥಾರೋಹಣ, ಮಹಾಪೂಜೆ ಸಹಿತ ರಥೋತ್ಸವ ವೈಭವಕ್ಕೆ ಸಾಕ್ಷಿಯಾದರು.

ಸಂಜೆ 5.30ರ ವೇಳೆಗೆ ಚಿನ್ನದ ಪಲ್ಲಕ್ಕಿಯೇರಿ ದೇವಳದಿಂದ ರಥದೆಡೆಗೆ ವೀರ ವೆಂಕಟೇಶ ದೇವರ ಆಗಮನದ ಬಳಿಕ ಸಾಂಪ್ರದಾಯಿಕ ರಥ ಪ್ರದಕ್ಷಿಣೆ ನಡೆಯಿತು. ಪಲ್ಲಕ್ಕಿಯನ್ನು ಏಕ ಹಸ್ತದಿಂದ ಏರಿಸಿ ಸಂಭ್ರಮಿಸಲಾಯಿತು.

ಬ್ಯಾಂಡ್ ವಾದ್ಯಗಳ ಅಬ್ಬರ, ಮಂಗಲ ವಾದ್ಯಗಳ ನಿನಾದ , ತಾಳ ಸಂಕೀರ್ತನೆಯ ಹಿನ್ನೆಲೆಯಲ್ಲಿ ಸೇರಿದ ಸಹಸ್ರಾರು ಭಜಕರ ಹರ್ಷೋದ್ಗಾರಗಳ ನಡುವೆ ಸಂಜೆ 6.05 ರ ವೇಳೆಗೆ ಶ್ರೀದೇವರ ರಥಾರೋಹಣ ನಡೆಯಿತು. ಈ ಸಂದರ್ಭದಲ್ಲಿ ಭಾವಾವೇಶಕ್ಕೆ ಒಳಗಾದ ಭಜಕರು ವೀರವೆಂಕಟೇಶಾ ವೇದವ್ಯಾಸಾ ಗೋವಿಂದೋ’ ಎಂದು ಜಯಘೋಷಗೈದರು. ಶ್ರೀ ಕಾಶೀಮಠಾಧೀಶ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಈ ಸಂದರ್ಭದಲ್ಲಿ ರಥಕ್ಕೆ ಚಿತ್ತೈಸಿ ರಥಾರೂಢ ವೀರ ವೆಂಕಟೇಶನಿಗೆ ಮಹಾಮಂಗಳಾರತಿ ಬೆಳಗಿ ಪ್ರಾರ್ಥನೆ ಸಲ್ಲಿಸಿದರು.

Venkatramana_ratha_2 Venkatramana_ratha_3 Venkatramana_ratha_5 Venkatramana_ratha_7 Venkatramana_ratha_8 Venkatramana_ratha_9 Venkatramana_ratha_10

ಸಮಾಜದ ಪರವಾಗಿ ಶ್ರೀ ದೇವಳದ ಆಡಳಿತ ಮೊಕ್ತೇಸರ ಎಂ.ಪದ್ಮನಾಭ ಪೈ ಸಹಿತ ಮೊಕ್ತೇಸರರು ಶ್ರೀಗಳವರಿಂದ ಮಹಾಪ್ರಸಾದ ವನ್ನು ಸ್ವೀಕರಿಸಿದರು. ದಾನಿ ಮುಂಡ್ಕೂರು ರಾಮದಾಸ ಕಾಮತ್ ಸಹಿತ ಗಣ್ಯರಿಗೆ ಈ ಸಂದರ್ಭದಲ್ಲಿ ಪ್ರಸಾದ ನೀಡಲಾಯಿತು. ಸಾಂಸದ ನಳಿನ್ ಕುಮಾರ್ ಕಟೀಲ್, ರಾಜ್ಯ ವಿಧಾನಸಭಾ ಮಾಜಿ ಉಪಸಭಾಪತಿ ಎನ್.ಯೋಗೀಶ್ ಭಟ್ ಮತ್ತಿತರ ಗಣ್ಯರು ಈ ಸಂಧರ್ಭದಲ್ಲಿ ಹಾಜರಿದ್ದರು.

ಮಹೋತ್ಸವದ ಅಂಗವಾಗಿ ಶ್ರೀದೇವರಿಗೆ ದೇವಳದಲ್ಲಿ ವಿಶೇಷ ಗಂಗಾಭಿಷೇಕ, ಪುಳಕಾಭಿಷೇಕ ಸಹಿತ ಸಹಸ್ರಧಾರಾ ಸೇವೆ ಸಹಿತ ಧಾರ್ಮಿಕ ವಿದಿವಿಧಾನಗಳು ನಡೆದವು. ಸಂಜೆ ಮಹಾಯಜ್ಞ ಮಂಟಪದಲ್ಲಿ ಪೂರ್ಣಾಹುತಿ ಶ್ರೀಗಳವರ ಉಪಸ್ಥಿತಿಯಲ್ಲಿ ನಡೆಯಿತು.

ಸಂಜೆ ರಥದಲ್ಲಿ ಸಮಾಜ ಬಾಂಧವರು ಮಹಾಪ್ರಸಾದ ಸ್ವೀಕರಿಸಿದರು. ಇದಕ್ಕೂ ಮೊದಲು ರಥದ ಚಕ್ರಕ್ಕೆ ಕಾಯಿಗಳನ್ನು ಒಡೆಯುವ, ಸೇರಿದವರು ರಥವನ್ನು ಕರ ಸೇವೆಯ ಮೂಲಕ ಒಂದಿಷ್ಟು ಮುಂದಿಡುವ ಕ್ರಿಯೆಗಳು ನಡೆದವು.

ದೇಶವಿದೇಶಗಳಿಂದ ರಥೋತ್ಸವ ಸಂಭ್ರಮಕ್ಕೆಂದೇ ಆಗಮಿಸಿದ್ದ ಜನತೆ ಕೊಡಿಯಾಲ್ ತೇರಿನ ವೈಭವವನ್ನು ಕಣ್ತುಂಬಿಕೊಂಡರು. ಇದೇ ವೇಳೆ ಮಹಾ ಸಮಾರಾಧನೆಯಲ್ಲಿ 35 ಸಹಸ್ರಕ್ಕೂ ಅಧಿಕ ಭಜಕರು ಅನ್ನಪ್ರಸಾದ ಸ್ವೀಕರಿಸಿದರು. ರಾತ್ರಿ ರಥೋತ್ಸವ ಕಾರ್ಯಕ್ರಮಗಳು ಜರಗಿದವು.

Venkatramana_ratha_11 Venkatramana_ratha_12 Venkatramana_ratha_13 Venkatramana_ratha_15 Venkatramana_ratha_15a

ಈ ಬಾರಿ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಉಪಸ್ಥಿತಿ – ವಿಶೇಷ ಮೆರುಗು :

ಈ ಬಾರಿಯ ಕೊಡಿಯಾಲ್ ತೇರು ಸಂಭ್ರಮಕ್ಕೆ ಶ್ರೀ ಕಾಶೀಮಠಾಧೀಶ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಉಪಸ್ಥಿತಿ ವಿಶೇಷ ರಂಗೇರಿಸಿತು.ಶ್ರೀ ಸಂಸ್ಥಾನದ 21ನೇ ಪೀಠಾಧಿಪತಿಯಾಗಿ ಇತ್ತೀಚಿಗಷ್ಟೇ ಪೀಠಾರೋಹಣಗೈದಿದ್ದ ಶ್ರೀಗಳವರರಿಗೆ ಆ ಬಳಿಕ ಇದು ಮೊದಲ ರಥೋತ್ಸವ ಸಂಭ್ರಮ.

ಶ್ರೀ ವೆಂಕಟರಮಣ ದೇವಳವೂ ಶ್ರೀ ಸಂಸ್ಥಾನದ ಅಧೀನದಲ್ಲಿದ್ದು ಪೀಠಾರೋಹಣದ ಬಳಿಕ ಶನಿವಾರ ಸಂಜೆ ಮೊದಲ ಪುರ ಪ್ರವೇಶ, ದೇವಳದಲ್ಲಿ ಮೊದಲ ಮೊಕ್ಕಾಂ ನಡೆಸಿದ್ದು ಗುರುವರ್ಯರ ಅಮೃತ ಹಸ್ತಗಳಿಂದ ಮಹಾಪೂಜೆ, ಮಹಾಪ್ರಸಾದ ಪಡೆದ ಧನ್ಯತೆ ಮಂಗಳೂರು ದೇವಳದ ಭಜಕರದ್ದಾಗಿದೆ.

ಚಿತ್ರ : ಮಂಜು ನೀರೆಶ್ವಾಲ್ಲ್ಯ

Write A Comment