ಮಂಗಳೂರು,ಫೆ.15 : ‘ಮೂಲತೋ ಬ್ರಹ್ಮ ರೂಪಾಯ ಮಧತೋ ವಿಷ್ಣು ರೂಪಿಣೇ ಅಗ್ರತಃ ಶಿವ ರೂಪಾಯ ವೃಕ್ಷ ರಾಜಾಯತೇ ನಮಃ’ ಎಂಬುದಾಗಿ ತ್ರಿ ಮೂರ್ತಿಗಳು ನೆಲೆಸಿರುವ ವೃಕ್ಷ ವಿಶೇಷವು ಅಶ್ವತ್ಥ. ಕಟ್ಟೆ ಕಟ್ಟಿ ಶಾಸ್ತ್ರೋಕ್ತವಾಗಿ ಉಪನಯನ ವಿವಾಹ ಸಂಸ್ಕಾರಗಳನ್ನು ನಡೆಸಿದಾಗ ಮಾತ್ರ ಆ ವೃಕ್ಷವು ಅನುಗ್ರಹ ಯೋಗ್ಯ ಹಾಗೂ ವರಪ್ರದಾಯಕ ವಾಗುತ್ತದೆ. ಅಶ್ವತ್ಥ ವೃಕ್ಷವು ಇರುವಲ್ಲಿ ಪರಿಸರ ಪರಿಶುದ್ಧವಾಗುತ್ತದೆ ಎಂಬುದಾಗಿ ವೇ.ಮೂ. ಹರಿನಾರಾಯಣ ಮಯ್ಯರು ತಿಳಿಸಿದರು.
ಅವರು ಮಂಗಳೂರಿನ ಶಕ್ತಿನಗರದ ಕ್ಲಾಸಿಕ್ ಪರ್ಲ್ ವಸತಿ ಸಮುಚ್ಚಯದ ವಠಾರದಲ್ಲಿ ನಡೆದ ಆಶ್ವತ್ಥ ಉಪನಯನ -ವಿವಾಹ ಸಂಸ್ಕಾರ ಹಾಗೂ ಶ್ರೀ ಸತ್ಯನಾರಾಯಣ ಪೂಜೆಯ ನೇತೃತ್ವ ವಹಿಸಿ ಮಾತನಾಡಿದರು.
ಮಾಜಿ ಸಚಿವರಾದ ಶ್ರೀ ಕೃಷ್ಣ ಪಾಲೇಮಾರ್, ನಿಟ್ಟೆ ಯುನಿವರ್ಸಿಟಿ ವೈಸ್ ಚಾನ್ಸಿಲರ್ ಡಾ. ರಮಾನಂದ ಶೆಟ್ಟಿ, ಡಾ. ಎ.ವಿ. ಶೆಟ್ಟಿ, ಚಂದ್ರಹಾಸ ಸೇಮಿತ, ಪಿ.ಎಂ.ಎ. ರಝಾಕ್, ರಮೇಶ ಪೆಜತ್ತಾಯ, ಡಾ. ಭಾಸ್ಕರ ಶೆಟ್ಟಿ, ಮಹಾಬಲೇಶ್ವರ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಕೆ.ಸಿ. ನಾಕ್, ನಿರ್ದೇಶಕ ಸಂಜಿತ್ ನಾಕ್, ಸಗುಣಾ ನಾಕ್ ಹಾಗೂ ಊರ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶಕ್ತಿನಗರದಲ್ಲಿ ಇದೇ ಬರುವ ಶೈಕ್ಷಣಿಕ ವರ್ಷದಿಂದ ಶ್ರೀ ಗೋಪಾಕೃಷ್ಣ ದೇವಸ್ಥಾನದ ಆಶ್ರಯದಲ್ಲಿ ಹಾಗೂ ಕಟ್ಟಡದಲ್ಲಿ ಮಹಾಬಲೇಶ್ವರ ಸಮೂಹ ಸಂಸ್ಥೆಯ ವತಿಯಿಂದ ಸಿ.ಬಿ.ಎಸ್.ಸಿ. ಪಠ್ಯಕ್ರಮವನ್ನು ಹೊಂದಿರುವ ಆಂಗ್ಲ ಮಾಧ್ಯಮದ ಎಲ್. ಕೆಜಿ, ಯು. ಕೆಜಿ ತರಗತಿಗಳ ‘ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆ’ (ಶ್ರೀ ಗೋಪಾಲಕೃಷ್ಣ ಪ್ರಿ ಸ್ಕೂಲ್) ಪ್ರಾರಂಭವಾಗಲಿದೆ.
ಪ್ರತ್ಯೇಕವಾಗಿ ಈ ಪರಿಸರದ ಮಕ್ಕಳಿಗೆ, ಗ್ರಾಮಾಂತರ ಹಾಗೂ ನಗರದ ಮಕ್ಕಳಿಗೆ ಉಪಯೋಗವಾಗಲಿದೆ, ಸೌಹಾರ್ದಮಯ ವಾತಾವರಣ, ಒತ್ತಡರಹಿತ ಪಠ್ಯಕ್ರಮ, ತರಗತಿಯಲ್ಲಿ ನಿಯಮಿತ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಮಾತೆಯ ಮಮತೆಯಂತಹ ಬೋಧನಾಕ್ರಮ, ಕಂತಿನ ಮೂಲಕ ಶಿಕ್ಷಣ ಶುಲ್ಕ ಪಾವತಿ ಇತ್ಯಾದಿಗಳು ಇಲ್ಲಿನ ವಿಶೇಷತೆ. ಎಂದು ಆಡಳಿತ ಮೊಕ್ತೇಸರರಾದ ಕೆ.ಸಿ.ನಾಕ್ ತಿಳಿಸಿದರು. ಈ ಬಗ್ಗೆ ತಯಾರಿಸಿದ ಪರಿಚಯ ಪತ್ರಿಕೆಯ ಬಿಡುಗಡೆಯ ಕಾರ್ಯಕ್ರಮವು ಈ ಸಂದರ್ಭದಲ್ಲಿ ನಡೆಯಿತು.