ಹಾಸನ: ಸಿಯಾಚಿನ್ ಹಿಮಕುಸಿತ ಘಟನೆಯಲ್ಲಿ ಹುತಾತ್ಮರಾಗಿದ್ದ ರಾಜ್ಯದ ತೇಜೂರಿನ ಯೋಧ ಟಿ.ಟಿ. ನಾಗೇಶ್ ಅವರ ಪಾರ್ಥಿವ ಶರೀರ ಮಂಗಳವಾರ ಅವರ ತೇಜೂರು ತಲುಪಿದ್ದು, ಮಧ್ಯಾಹ್ನದ ವೇಳೆಗೆ ಅಂತ್ಯ ಸಂಸ್ಕಾರ ನಡೆಯಲಿದೆ.
ಹುತಾತ್ಮ ನಾಗೇಶ್ ಅವರಿಗೆ ಭಾವಪೂರ್ಣ ವಿದಾಯ ಹೇಳಲು ತೇಜೂರಿನಲ್ಲಿ 25 ಸಾವಿರಕ್ಕೂ ಹೆಚ್ಚು ಜನರು ಜಮಾಯಿಸಿದ್ದಾರೆ. ನಾಗೇಶ್ ಮನೆಯಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದ್ದು, ಅಂತಿಮ ವಿಧಿ ವಿಧಾನಗಳು ಮುಗಿದ ನಂತರ ಅಂತ್ಯಕ್ರಿಯೆ ನಡೆಯುವುದಾಗಿ ತಿಳಿದು ಬಂದಿದೆ.
ಇದಕ್ಕೂ ಮೊದಲು ಬೆಳಿಗ್ಗೆ 7.30 ರಿಂದ 9.30ರವರೆಗೆ ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಯೋಧನ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಸಾವಿರಾರು ಜನರು ಅಂತಿಮ ದರ್ಶನ ಪಡೆದರು.
ಆ ಬಳಿಕ, ಪಾರ್ಥಿವ ಶರೀರವನ್ನು ಹಾಸನದಿಂದ 8 ಕಿ.ಮೀ. ದೂರದಲ್ಲಿರುವ ತೇಜೂರಿಗೆ ಮೆರವಣಿಗೆ ಮೂಲಕ ಕೊಂಡ್ಯೊಯ್ಯಲಾಯಿತು. ದಾರಿಯುದ್ದಕ್ಕೂ ಅಲ್ಲಲ್ಲಿ ನೀರು ಹಾಕಿ, ರಂಗೋಲಿಯಲ್ಲಿ ಬಿಡಿಸಿದ್ದರು. ಶಾಲಾ-ಕಾಲೇಜುಗಳ ಮಕ್ಕಳು, ಸಾರ್ವಜನಿಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.